ADVERTISEMENT

ಕೋಲಾರ: ಒಂದೇ ದಿನ 22 ಮಂದಿಗೆ ಸೋಂಕು, ಸಕ್ರಿಯ ಸೋಂಕಿತರ ಸಂಖ್ಯೆ 178ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 15:55 IST
Last Updated 13 ಜುಲೈ 2020, 15:55 IST
ಕೋಲಾರದ ಕಾರಂಜಿಕಟ್ಟೆ ಬಡಾವಣೆಯ ಒಂದನೇ ಅಡ್ಡರಸ್ತೆಯಲ್ಲಿ ಸೋಮವಾರ ಕೊರೊನಾ ಸೋಂಕಿತ ವ್ಯಕ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಯಿತು.
ಕೋಲಾರದ ಕಾರಂಜಿಕಟ್ಟೆ ಬಡಾವಣೆಯ ಒಂದನೇ ಅಡ್ಡರಸ್ತೆಯಲ್ಲಿ ಸೋಮವಾರ ಕೊರೊನಾ ಸೋಂಕಿತ ವ್ಯಕ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಯಿತು.   

ಕೋಲಾರ: ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 23 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 178ಕ್ಕೆ ಏರಿಕೆಯಾಗಿದೆ.

ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು 16 ಮಂದಿಗೆ ಸೋಂಕು ತಗುಲಿದೆ. ಉಳಿದಂತೆ ಮಾಲೂರು ಮತ್ತು ಬಂಗಾರಪೇಟೆ ತಾಲ್ಲೂಕಿನ ತಲಾ 3 ಮಂದಿಗೆ ಹಾಗೂ ಮುಳಬಾಗಿಲು ತಾಲ್ಲೂಕಿನ ಒಬ್ಬರಿಗೆ ಸೋಂಕು ಹರಡಿರುವುದು ಖಚಿತವಾಗಿದೆ.

ಕೋಲಾರ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರದಿಂದ ಬಳಲುತ್ತಿರುವ 13 ಮಂದಿಗೆ ಇರುವುದು ದೃಢಪಟ್ಟಿದೆ. ಆರ್‌.ಎಲ್‌.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ 31 ವರ್ಷದ ಆರೋಗ್ಯ ಕಾರ್ಯಕರ್ತರೊಬ್ಬರಿಗೆ, ಹೊರ ಜಿಲ್ಲೆಗೆ ಹೋಗಿ ಬಂದಿದ್ದ 52 ವರ್ಷದ ಪುರುಷ ಹಾಗೂ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ 44 ವರ್ಷದ ಪುರುಷರೊಬ್ಬರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

ADVERTISEMENT

ಮಾಲೂರು ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ 17 ವರ್ಷದ ಬಾಲಕನಿಗೆ, ವಿಷಮ ಶೀತ ಜ್ವರದಿಂದ ಬಳಲುತ್ತಿರುವ 49 ಪುರುಷರೊಬ್ಬರಿಗೆ ಮತ್ತು 20 ವರ್ಷದ ಗರ್ಭಿಣಿಗೆ ಸೋಂಕು ಹರಡಿದೆ. ಬಂಗಾರಪೇಟೆ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರದಿಂದ ಬಳಲುತ್ತಿರುವ ಇಬ್ಬರು ಪುರುಷರಿಗೆ ಮತ್ತು ಹೊರ ಜಿಲ್ಲೆಗೆ ಹೋಗಿ ಬಂದಿದ್ದ 35 ವರ್ಷದ ವ್ಯಕ್ತಿಗೆ ಸೋಂಕು ಬಂದಿದೆ. ಮುಳಬಾಗಿಲು ತಾಲ್ಲೂಕಿನಲ್ಲಿ ಸೋಂಕಿತ ವ್ಯಕ್ತಿ ಸಂಖ್ಯೆ 36,678ರ ಸಂಪರ್ಕದಿಂದ ಮಹಿಳೆಗೆ ಸೋಂಕು ತಗುಲಿದೆ.

ಸೋಂಕಿತರ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಅಲ್ಲದೇ, ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿಯು ಕ್ವಾರಂಟೈನ್‌ ಮಾಡಿದ್ದಾರೆ. ಜಿಲ್ಲಾ ಕೇಂದ್ರದ ಕೋವಿಡ್‌ ಆಸ್‍ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತರ ಕೋಲಾರ ತಾಲ್ಲೂಕಿನ ಪೈಕಿ 3 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಸೋಮವಾರ ಮನೆಗೆ ಮರಳಿದರು.

ಶವದಲ್ಲಿ ಪತ್ತೆ: ಅನಾರೋಗ್ಯದ ಕಾರಣ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 52 ವರ್ಷದ ಮಹಿಳೆಯೊಬ್ಬರು ಸೋಮವಾರ ಬೆಳಿಗ್ಗೆ ಮೃತಪಟ್ಟರು. ಇವರ ಶವದಿಂದ ಕಫಾ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಿದಾಗ ಸೋಂಕು ಇರುವುದು ಗೊತ್ತಾಗಿದೆ.

ಅದೇ ರೀತಿ ಬಂಗಾರಪೇಟೆ ಪಟ್ಟಣದ ಸೇಠ್‌ ಕಾಂಪೌಂಡ್‌ ಬಡಾವಣೆಯ 45 ವರ್ಷದ ಅನಾರೋಗ್ಯಪೀಡಿತ ವ್ಯಕ್ತಿಯನ್ನು ಸೋಮವಾರ ಜಿಲ್ಲಾ ಕೇಂದ್ರದ ಎಸ್‌ಎನ್‌ಆರ್‌ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಮೃತಪಟ್ಟರು. ಬಳಿಕ ಶವದಿಂದ ಕಫಾ ಮಾದರಿ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದಾಗ ಕೊರೊನಾ ಸೋಂಕು ತಗುಲಿದ್ದ ಸಂಗತಿ ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.