ಕೋಲಾರ: ಈ ಜಿಲ್ಲೆಯಲ್ಲಿ ಇರುವುದು 3.30 ಲಕ್ಷ ಕುಟುಂಬಗಳು. ಆದರೆ ವಿತರಣೆಯಾದ ಪಡಿತರ ಚೀಟಿಗಳ ಸಂಖ್ಯೆ 3.58 ಲಕ್ಷ! ಅದಲ್ಲದೆ, ಈಗ 19 ಸಾವಿರ ಹೊಸ ಅರ್ಜಿಗಳೂ ಸಲ್ಲಿಕೆಯಾಗಿವೆ.
-ಈ ಸಂಗತಿ ಬೆಳಕಿಗೆ ಬಂದಿದ್ದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ. ಇಲಾಖೆಯ ಉಪನಿರ್ದೇಶಕ ಚನ್ನಬಸಪ್ಪ ಕೊಡ್ಲಿಯವರು ನೀಡಿದ ಈ ಮಾಹಿತಿಯಿಂದ ಸಚಿವ ದಿನೇಶ್ ಗುಂಡೂರಾವ್ ಒಂದು ಕ್ಷಣ ದಂಗಾದರು.
ಇರುವ ಕುಟುಂಬಗಳ ಸಂಖ್ಯೆಯನ್ನೂ ಮೀರಿ 28 ಸಾವಿರ ಹೆಚ್ಚು ಪಡಿತರ ಚೀಟಿಗಳನ್ನು ವಿತರಿಸಲಾಗಿದೆ ಎಂಬ ಈ ಅಂಕಿ- ಅಂಶವೇ ಜಿಲ್ಲೆಯಲ್ಲಿ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಮೇಲುನೋಟಕ್ಕೆ ಸ್ಪಷ್ಟವಾಗಿ ತೋರುತ್ತದೆ ಎಂದು ತೀವ್ರ ಅಸಮಾಧಾನವನ್ನೂ ವ್ಯಕ್ತಪಡಿಸಿದರು.
30307 ಅಂತ್ಯೋದಯ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಶೇ 90ರಷ್ಟು ಮಂದಿ ಬಳಿ ಈಗಾಗಲೇ ಪಡಿತರ ಚೀಟಿ ಇದೆ ಎಂದುಕೊಂಡರೂ ಹೊಸದಾಗಿ ಹತ್ತಿಪ್ಪತ್ತು ಮಂದಿ ಅರ್ಜಿ ಸಲ್ಲಿಸಬೇಕಷ್ಟೆ. ಆದರೆ ಅದನ್ನೂ ಮೀರಿ 19 ಸಾವಿರ ಅರ್ಜಿಗಳು ಸಲ್ಲಿಕೆಯಾಗಿರುವುದು ವಿಪರ್ಯಾಸ. ನಕಲಿ ಪಡಿತರ ಚೀಟಿಗಳು ಸಾವಿರಾರು ಸಂಖ್ಯೆಯಲ್ಲಿವೆ ಎಂಬುದನ್ನು ಇದು ಸಾಬೀತು ಮಾಡುತ್ತದೆ ಎಂದರು.
ವಿಚಕ್ಷಣ ಸಮಿತಿ: ಕೇಂದ್ರ ಸರ್ಕಾರ ಆದೇಶ ನೀಡಿ ಒಂದು ವರ್ಷವಾದರೂ ಜಿಲ್ಲೆಯ ಎಲ್ಲೆಡೆ ಗ್ರಾಮ ಮಟ್ಟದಲ್ಲಿ ಇರಬೇಕಾದ ವಿಚಕ್ಷಣಾ ಸಮಿತಿಯನ್ನು ರಚಿಸದೆ ಇರುವ ಸಂಗತಿಯೂ ಸಚಿವರನ್ನು ಬೇಸರಗೊಳಿಸಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷರೇ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರು, ಕಾರ್ಡ್‌ದಾರರಾದ ಮೂವರು ಮಹಿಳೆಯರು, ಒಬ್ಬ ಸಮಾಜ ಸೇವಕರು ಸದಸ್ಯರಾಗಿದ್ದು, ಬಿಲ್ ಕಲೆಕ್ಟರ್ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಆ ಪಟ್ಟಿಯನ್ನು ಸಿದ್ಧಪಡಿಸಿ ಅನುಮೋದನೆಗಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಚನ್ನಬಸಪ್ಪ ಕೊಡ್ಲಿ ಮಾಹಿತಿ ನೀಡಿದರು. ಒಂದು ವರ್ಷವಾದರೂ ಸಮಿತಿಗಳನ್ನು ಏಕೆ ರಚಿಸಲಿಲ್ಲ ಎಂಬ ಪ್ರಶ್ನೆಗೆ ಅವರು ಸಮರ್ಪಕ ಉತ್ತರವನ್ನು ನೀಡಲಿಲ್ಲ.
ತಪಾಸಣೆಯೂ ಇಲ್ಲ: ನಗರ ಪ್ರದೇಶಗಳಲ್ಲಿ ಪಡಿತರ ಚೀಟಿದಾರರ ಮನೆಯ ವಿದ್ಯುತ್ ಬಿಲ್‌ನ ಆರ್‌ಆರ್ ಸಂಖ್ಯೆ ಮತ್ತು ಗ್ರಾಮೀಣ ಮಟ್ಟದಲ್ಲಿ ಮನೆ ಸಂಖ್ಯೆಯನ್ನು ಆಧರಿಸಿ ನಕಲಿ ಪಡಿತರ ಚೀಟಿಗಳನ್ನು ಪತ್ತೆಹಚ್ಚುವ ಕೆಲಸ ಒಂದೂವರೆ ವರ್ಷದಿಂದ ನಡೆಯುತ್ತಿದೆ. ಈಗಾಗಲೇ ಅದಕ್ಕೆ ಸಂಬಂಧಿಸಿದ ವರದಿ ಸಿದ್ಧವಾಗಿದೆ.
ಒಂದೇ ಆರ್‌ಆರ್ ಸಂಖ್ಯೆಯಲ್ಲಿ ಎಷ್ಟು ಕಾರ್ಡ್‌ಗಳನ್ನು ಪಡೆಯಲಾಗಿದೆ ಎಂಬ ಮಾಹಿತಿಯೂ ಆಹಾರ ನಿರೀಕ್ಷಕರಿಗೆ ಕಂಪ್ಯೂಟರಿನಲ್ಲಿ ಲಭ್ಯವಿದೆ. ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಪಡೆದಿರುವವರ ಚೀಟಿಯನ್ನು ಕುಳಿತಲ್ಲೇ ರದ್ದುಗೊಳಿಸಬಹುದು. ಆ ಕೆಲಸವನ್ನು ಎಷ್ಟು ಮಂದಿ ಮಾಡಿದ್ದೀರಿ ಎಂಬ ಸಚಿವರ ಪ್ರಶ್ನೆಗೆ ಅಧಿಕಾರಿಗಳು ಉತ್ತರ ನೀಡಲು ಸಾಧ್ಯವಾಗಲಿಲ್ಲ.
ಸಚಿವರ ಅಸಮಾಧಾನವನ್ನು ಎದುರಿಸಿದ ಉಪನಿರ್ದೇಶಕ ಕೊಡ್ಲಿ `ಕೂಡಲೇ ಪ್ರಾರಂಭ ಮಾಡ್ತೀವಿ' ಎಂದು ಹೇಳಿದರು.
ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಂಗಾರಪೇಟೆ ಶಾಸಕ ಕೆ.ಎಂ.ನಾರಾಯಣಸ್ವಾಮಿ, ಕೆಲಸವನ್ನೇ ಮಾಡದ ಅಧಿಕಾರಿಗಳು ಇನ್ನು ತಪಾಸಣೆ ಹೇಗೆ ಮಾಡುತ್ತಾರೆ? ನ್ಯಾಯಬೆಲೆ ಅಂಗಡಿ ಮಾಲೀಕರು ಹೇಳಿದ್ದನ್ನೇ ದಾಖಲಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ತಪಾಸಣೆ ಕೆಲಸವನ್ನು ಬೇಗ ಶುರು ಮಾಡಿ ನಕಲಿ ಪಡಿತರ ಚೀಟಿಗಳನ್ನು ರದ್ದುಗೊಳಿಸಬೇಕು. ಅರ್ಹರಿಗೆ ಸರಿಯಾಗಿ ಚೀಟಿಗಳನ್ನು ವಿತರಿಸಬೇಕು. ಈ ಬಗ್ಗೆ ಒಂದು ತಿಂಗಳೊಳಗೆ ವರದಿ ಕೊಡಬೇಕು ಎಂದು ಸಚಿವರು ಸೂಚಿಸಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಚೌಡೇಶ್ವರಿ, ಉಪಾಧ್ಯಕ್ಷೆ ರತ್ನಮ್ಮ, ಶಾಸಕರಾದ ಜಿ.ಮಂಜುನಾಥ್ ಮತ್ತು ಕೆ.ಎಸ್.ಮಂಜುನಾಥ್ ಪಡಿತರ ಚೀಟಿದಾರರ ಕೆಲವು ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ.ಝುಲ್ಫಿಕರ್ ಉಲ್ಲಾ, ಪ್ರಭಾರ ಜಿಲ್ಲಾಧಿಕಾರಿ ಡಾ.ವೆಂಕಟೇಶಮೂರ್ತಿ ಉಪಸ್ಥಿತರಿದ್ದರು.
ಸರ್ವರ್ ಸಮಸ್ಯೆ ನಿವಾರಿಸಿ: ಶಾಸಕ
ಗ್ರಾಮೀಣ ಪ್ರದೇಶಗಳಲ್ಲಿ ಪಡಿತರ ಚೀಟಿಯನ್ನು ನೋಂದಣಿ ಮಾಡುವ ಪ್ರಕ್ರಿಯೆಗೆ ತೊಡಕಾಗಿರುವ ಸರ್ವರ್ ಸಮಸ್ಯೆ ಬಗ್ಗೆ ಸಭೆಯಲ್ಲಿ ದೀರ್ಘ ಚರ್ಚೆ ನಡೆಯಿತು.
ಸರ್ವರ್ ಸಮಸ್ಯೆಯಿಂದಾಗಿ ದಿನಕ್ಕೆ ಕೇವಲ 100-120 ಅರ್ಜಿಗಳ ದಾಖಲೀಕರಣ ಮಾತ್ರ ಮಾಡಲಾಗುತ್ತಿದೆ ಎಂದು ಶಿರಸ್ತೇದಾರರೊಬ್ಬರು ಹೇಳಿದ ಮಾತನ್ನು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ವಿರೋಧಿಸಿದರು. ಕೇವಲ ಹತ್ತಿಪ್ಪತ್ತು ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲಾಗುತ್ತಿದೆ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ಇಲಾಖೆ ಸಲಹೆಗಾರ ಹರೀಶ್‌ಗೌಡ, ಸರ್ವರ್ ಬಹಳ ವೇಗದಲ್ಲಿ ಸ್ಪಂದಿಸುತ್ತದೆ. ಆದರೆ ಸ್ಥಳೀಯ ಮಟ್ಟದಲ್ಲಿ ಇಂಟರ್‌ನೆಟ್ ಸಂಪರ್ಕದ ಸಮಸ್ಯೆ ಇರುತ್ತದೆ. ಅದನ್ನು ಸ್ಥಳೀಯ ಮಟ್ಟದಲ್ಲಿ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಕೆಲವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಹೋಬಳಿ ಕೇಂದ್ರದಿಂದ ಕೇವಲ ಮೂರು ಕಿ.ಮೀ. ದೂರದಲ್ಲಿ ಮಾತ್ರ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಕೆಲಸ ಮಾಡುತ್ತದೆ. ಅದಕ್ಕಿಂತ ಹೆಚ್ಚು ದೂರವಿರುವ ಪಂಚಾಯಿತಿಗಳಿಗೆ ಸಮಸ್ಯೆ ಇದೆ ಎಂದರು. ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿ ಸೇವೆ ಬೇಕೆಂದು ಅರ್ಜಿ ಸಲ್ಲಿಸಿ ಎರಡು ವರ್ಷವಾದರೂ ದೊರಕಿಲ್ಲ ಎಂದು ಮತ್ತೊಬ್ಬರು ದೂರಿದರು. ಇನ್ನಿತರ ನೆಟ್‌ವರ್ಕ್‌ಗಳ ಡಾಟಾ ಕಾರ್ಡ್‌ಗಳು ವೇಗದಲ್ಲಿ ಸ್ಪಂದಿಸುವುದಿಲ್ಲ ಎಂಬ ಸಮಸ್ಯೆ ಕಡೆಗೂ ಗಮನ ಸೆಳೆದರು.
ಆ ಬಗ್ಗೆ ಬಿಎಸ್‌ಎನ್‌ಎಲ್ ಅಧಿಕಾರಿಗಳೊಡನೆ ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಚರ್ಚಿಸಿ ಬಗೆಹರಿಸಬೇಕು. ರಾಜ್ಯಮಟ್ಟದಲ್ಲಿ ಈ ಸಮಸ್ಯೆ ನಿವಾರಣೆ ಸಂಬಂಧ ಬಿಎಸ್‌ಎನ್‌ಎಲ್ ಉನ್ನತ ಅಧಿಕಾರಿಗಳೊಡನೆ ಚರ್ಚಿಸಲಾಗುತ್ತಿದೆ ಎಂದು ಆಯುಕ್ತ ಹರ್ಷ ಗುಪ್ತಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.