ADVERTISEMENT

ಎಪಿಎಂಸಿಗೆ 40 ಎಕರೆ ಜಮೀನು: ಭರವಸೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 13:11 IST
Last Updated 25 ಸೆಪ್ಟೆಂಬರ್ 2021, 13:11 IST
ಕೋಲಾರ ಎಪಿಎಂಸಿಯಲ್ಲಿನ ಜಾಗದ ಸಮಸ್ಯೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಶನಿವಾರ ಸಭೆ ನಡೆಸಿದರು. ಜಿ.ಪಂ ಸಿಇಒ ಎನ್‌.ಎಂ.ನಾಗರಾಜ್‌, ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ, ಸಂಸದ ಎಸ್‌.ಮುನಿಸ್ವಾಮಿ, ಎಪಿಎಂಸಿ ಅಧ್ಯಕ್ಷ ಸಿ.ಎಂ.ಮಂಜುನಾಥ್, ರಾಜ್ಯ ಬೀಜ ನಿಗಮದ ನಿರ್ದೇಶಕ ಡಿ.ಎಲ್.ನಾಗರಾಜ್ ಇದ್ದಾರೆ
ಕೋಲಾರ ಎಪಿಎಂಸಿಯಲ್ಲಿನ ಜಾಗದ ಸಮಸ್ಯೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಶನಿವಾರ ಸಭೆ ನಡೆಸಿದರು. ಜಿ.ಪಂ ಸಿಇಒ ಎನ್‌.ಎಂ.ನಾಗರಾಜ್‌, ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ, ಸಂಸದ ಎಸ್‌.ಮುನಿಸ್ವಾಮಿ, ಎಪಿಎಂಸಿ ಅಧ್ಯಕ್ಷ ಸಿ.ಎಂ.ಮಂಜುನಾಥ್, ರಾಜ್ಯ ಬೀಜ ನಿಗಮದ ನಿರ್ದೇಶಕ ಡಿ.ಎಲ್.ನಾಗರಾಜ್ ಇದ್ದಾರೆ   

ಕೋಲಾರ: ‘ಜಿಲ್ಲಾ ಕೇಂದ್ರದ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಜಮೀನು ಅಗತ್ಯವಿರುವ ಸಂಬಂಧ ಜಿಲ್ಲಾಧಿಕಾರಿ ಪ್ರಸ್ತಾವ ಸಲ್ಲಿಸಿದ್ದು, ತಿಂಗಳೊಳಗೆ 40 ಎಕರೆ ಜಮೀನು ಮಂಜೂರು ಮಾಡುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಭರವಸೆ ನೀಡಿದರು.

ಎಪಿಎಂಸಿಯಲ್ಲಿನ ಜಾಗದ ಸಮಸ್ಯೆ ಸಂಬಂಧ ಇಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಎಪಿಎಂಸಿಯಲ್ಲಿನ ಸಮಸ್ಯೆಗಳ ಸಂಬಂಧ ಸೋಮವಾರದೊಳಗೆ ಮತ್ತಷ್ಟು ಮಾಹಿತಿ ಮತ್ತು ದಾಖಲೆಪತ್ರ ಒದಗಿಸಿದರೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜತೆ ಚರ್ಚಿಸಿ ಪರಿಹರಿಸುತ್ತೇವೆ’ ಎಂದು ಹೇಳಿದರು.

‘ಪಕ್ಕದ ಆಂಧ್ರಪ್ರದೇಶದ ಚಿತ್ತೂರು ಸಮೀಪ 250 ಎಕರೆ ವಿಸ್ತಾರದಲ್ಲಿ ಮಾರುಕಟ್ಟೆ ನಿರ್ಮಿಸಲಾಗಿದೆ. ಸಾಧ್ಯವಾದರೆ ಅದೇ ಮಾದರಿಯ ಮಾರುಕಟ್ಟೆಯನ್ನು ವಿಸ್ತಾರವಾಗಿ ಜಿಲ್ಲೆಯಲ್ಲಿ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ದೇಶಕ್ಕೆ ಅನ್ನ ನೀಡುವ ರೈತರಿಗೆ ಅನ್ಯಾಯ ಆಗಬಾರದು. 1 ರೂಪಾಯಿ ಬಂದರೂ ಪೂರ್ತಿ ಹಣ ಅವರ ಕೈಸೇರುವ ವ್ಯವಸ್ಥೆ ಸೃಷ್ಟಿಯಾಗಬೇಕು. ರೈತರಿಗೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ’ ಎಂದರು.

ADVERTISEMENT

‘ರೈತರನ್ನು ರಕ್ಷಿಸಿದರೆ ದೇವರು ನಮ್ಮನ್ನು ಕಾಪಾಡುತ್ತಾನೆ. ಮಾರುಕಟ್ಟೆಯಲ್ಲಿ ಸದ್ಯ ₹ 100ಕ್ಕೆ 60 ಪೈಸೆ ಸೆಸ್ ಸಂಗ್ರಹಿಸುತ್ತಿರುವುದು ಸ್ವಾಗತಾರ್ಹ. ಇನ್ನೂ 10 ಪೈಸೆ ಕಡಿಮೆ ಮಾಡಿ 50 ಪೈಸೆ ನಿಗದಿಪಡಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ರೈತನ ಪರ ನಿಂತರೆ ದೇವರು ಸಹ ಮೆಚ್ಚುತ್ತಾನೆ. ರೈತರು ಯಾರಿಗೂ ಮೋಸ ಮಾಡುವುದಿಲ್ಲ. ಆದರೆ, ರೈತರಿಗೆ ಎಲ್ಲರೂ ಮೋಸ ಮಾಡುತ್ತಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ರೈತರಿಗೆ ಎಲ್ಲಾ ಸೌಲಭ್ಯ ಕಲ್ಪಿಸಲು ಸಿದ್ಧವಿದ್ದೇವೆ. ಸರ್ಕಾರ ಸಹ ರೈತರ ಜತೆಗೆ ನಿಲ್ಲುತ್ತೇದೆ. ಬೆಳೆ ನಷ್ಟದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ, ರಸ್ತೆಗೆ ಟೊಮೆಟೊ ಸುರಿಯುವ, ಬೆಳೆ ನಾಶಪಡಿಸುವ ದುಡುಕಿನ ನಿರ್ಧಾರ ಬೇಡ. ಜಿಲ್ಲೆಯ ರೈತರು ಸ್ವಾಭಿಮಾನಿಗಳು. ನೀರಿನ ಸಮಸ್ಯೆ ನಡುವೆಯೂ ಕೃಷಿ ನಿರ್ವಹಣೆ ಮಾಡುತ್ತಿರುವ ಇಲ್ಲಿನ ರೈತರು ನಿಜಕ್ಕೂ ಮಾದರಿಯಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸದ ಎಸ್.ಮುನಿಸ್ವಾಮಿ, ಎಪಿಎಂಸಿ ಅಧ್ಯಕ್ಷ ಸಿ.ಎಂ.ಮಂಜುನಾಥ್, ರಾಜ್ಯ ಬೀಜ ನಿಗಮದ ನಿರ್ದೇಶಕ ಡಿ.ಎಲ್.ನಾಗರಾಜ್, ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಜಿ.ಪಂ ಸಿಇಒ ಎನ್.ಎಂ.ನಾಗರಾಜ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ, ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.