ADVERTISEMENT

ವೀರಶೈವ ಲಿಂಗಾಯತ ಒಂದೇ

ಹಾನಗಲ್ ಕುಮಾರಸ್ವಾಮಿ ಅವರ 150ನೇ ಜಯಂತ್ಯುತ್ಸವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 8:36 IST
Last Updated 4 ಜನವರಿ 2018, 8:36 IST

ಬಂಗಾರಪೇಟೆ: ‘ರಾಜಕೀಯ ದುರುದ್ದೇಶಕ್ಕಾಗಿ ಲಿಂಗಾಯತ ಹಾಗೂ ವೀರಶೈವರ ನಡುವೆ ಭಿನ್ನಮತ ಸೃಷ್ಟಿ ಮಾಡುತ್ತಿದ್ದಾರೆಯೇ ಹೊರತು ಜನಾಂಗದ ಅಭಿವೃದ್ಧಿಗಲ್ಲ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕ ಉಪಾಧ್ಯಕ್ಷ ಬಿ.ಎಸ್.ಸಚ್ಚಿದಾನಂದ ಮೂರ್ತಿ ಹೇಳಿದರು.

ಪಟ್ಟಣದ ಅಕ್ಕಚ್ಚಮ್ಮ ಕಲ್ಯಾಣ ಮಂಟಪದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ ಪ್ರತಿಭಾನ್ವಿತ ಮಕ್ಕಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಹಾನಗಲ್ ಕುಮಾರಸ್ವಾಮಿ ಅವರ 150ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ವೀರಶೈವ ಲಿಂಗಾಯತ ಸಮಾಜ ಒಂದೇ ಆಗಿದ್ದು, ಇತರೆ ಸಮಾಜಗಳಿಗಿಂತ ಬಲಿಷ್ಠವಾಗಿದೆ. ರಾಜಕೀಯ ದುರುದ್ದೇಶದಿಂದ ವೀರಶೈವ ಬೇರೆ, ಲಿಂಗಾಯತ ಸಮಾಜವೆ ಬೇರೆ’ ಎಂದು ನೀರಾವರಿ ಸಚಿವ ಎಂ.ಬಿ.ಪಾಟೀಲ್ ಹೇಳುತ್ತಿರುವುದು ಖಂಡನೀಯ ಎಂದರು.

ADVERTISEMENT

‘ಪೂರ್ವಿಕರ ಕಾಲದಿಂದಲೂ ಲಿಂಗಾಯತ ಹಾಗೂ ವೀರಶೈವ ಸಮಾಜ ಒಗ್ಗಟ್ಟಾಗಿದೆ. ಸಮಾಜದ ಧಾರ್ಮಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸದ ಅವರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇದರಿಂದ ಸಮಾಜದ ಸಮಗ್ರ ಅಭಿವೃದ್ಧಿಗೆ ತೀವ್ರ ಹಿನ್ನೆಡೆಯಾಗುತ್ತಿದೆ’ ಎಂದು ಹೇಳಿದರು.

ವೀರಶೈವ ಮಹಾಸಭಾದ ರಾಷ್ಟ್ರೀಯ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಜಯಂತ್ ಮಾತನಾಡಿ, ‘ಲಿಂಗಾಯತ ಮತ್ತು ವೀರಶೈವ ಸಮಾಜವು ಎರಡೂ ಒಂದೇ ಆಗಿದ್ದರೂ ಸಹ ನಮ್ಮಲ್ಲಿರುವವರೇ ಸಮಾಜವನ್ನು ಇಬ್ಭಾಗ ಮಾಡಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಜನಾಂಗದ 20ಕ್ಕೂ ಹೆಚ್ಚು ಮಕ್ಕಳನ್ನು ಸನ್ಮಾನಿಸಲಾಯಿತು.

ಮಹಾಸಭಾ ರಾಜ್ಯ ಘಟಕ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್, ಸರ್ಕಲ್ ಇನ್‌ಸ್ಪೆಕ್ಟರ್‌ ದಿನೇಶ್ ಪಾಟೀಲ್, ಜಿಲ್ಲಾ ಘಟಕ ಅಧ್ಯಕ್ಷ ಎ.ಎನ್.ಸದಾಶಿವಯ್ಯ, ಮಾಲೂರು ಟಿ.ಸಿ.ನಾಗರಾಜ್, ಕೆ.ಬಿ.ಬೈಲಪ್ಪ, ಪ್ರಮೀಳಾ ಮಲ್ಲಿಕಾರ್ಜುನ್, ಆರ್.ವಿಜಯಕುಮಾರ್, ಬಿ.ಜಿ.ನಂಜಪ್ಪ, ಕೆ.ಸಿ.ಉಮೇಶ್‌ಕುಮಾರ್, ಬಿ.ಎಂ.ಶಂಭಣ್ಣ, ಎಸ್.ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.