ADVERTISEMENT

ಪರಿಶಿಷ್ಟರ ಅಭಿವೃದ್ಧಿ ಯೋಜನೆ ಅನುದಾನ ವಾಪಸ್‌

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 8:52 IST
Last Updated 1 ಫೆಬ್ರುವರಿ 2018, 8:52 IST

ಮುಳಬಾಗಿಲು: ‘ಪರಿಶಿಷ್ಟರ ಅಭಿವೃದ್ಧಿಗಾಗಿ ಸರ್ಕಾರ ವಿವಿಧ ನಿಗಮಗಳ ಮೂಲಕ ಅನುಷ್ಠಾನಗೊಳಿಸಿರುವ ಯೋಜನೆಗಳು ಸಮರ್ಪಕವಾಗಿ ಕಾರ್ಯಗತಗೊಳ್ಳದ ಕಾರಣ ಅನುದಾನ ವಾಪಸ್‌ ಹೋಗುತ್ತಿದೆ’ ಎಂದು ಧಾರವಾಡದ ಸಿಡಾಕ್ (ಕರ್ನಾಟಕದ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ) ಜಂಟಿ ನಿರ್ದೇಶಕ ಶಂಕರರಾವ್ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಕೌಶಲಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಿಡಾಕ್‌ ಸಹಯೋಗದಲ್ಲಿ ಪರಿಶಿಷ್ಟ ಸಮುದಾಯದ ಮಹಿಳೆಯರು ಹಾಗೂ ಪುರುಷರಿಗೆ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉದ್ಯಮಶೀಲತಾ ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿದೆ. ಆದರೆ, ಈ ಬಗ್ಗೆ ಹೆಚ್ಚಿನ ಪ್ರಚಾರ ನಡೆಸದ ಕಾರಣ ಯೋಜನೆಗಳು ಕಾರ್ಯಗತಗೊಂಡಿಲ್ಲ. ಇದರಿಂದ ಯೋಜನೆಗಳ ಅನುದಾನ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್‌ ಹೋಗುತ್ತಿದೆ. ಇದಕ್ಕೆ ಅಧಿಕಾರಿಗಳಿಗೆ ನಿರ್ಲಕ್ಷ್ಯವೇ ಕಾರಣ ಎಂದರು.

ADVERTISEMENT

ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸರ್ಕಾರ ಸ್ವಯಂ ಉದ್ಯೋಗಕ್ಕೆ ಬ್ಯಾಂಕ್‌ಗಳ ಮೂಲಕ ಶೇ 90ರಷ್ಟು ಸಬ್ಸಿಡಿ ನೀಡುತ್ತಿದೆ. ಜನಾಂಗದ ಪ್ರತಿಯೊಬ್ಬರೂ ಈ ಸವಲತ್ತು ಪಡೆದು ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯವಾಹಿನಿಗೆ ಬರಬೇಕು: ‘ಸಣ್ಣ ವ್ಯಾಪಾರಿಗಳು ಮಿತ ಬಂಡವಾಳ ಹೂಡಿ ಅಧಿಕ ಲಾಭ ಪಡೆಯುವ ಮೂಲಕ ದೊಡ್ಡ ಉದ್ದಿಮೆದಾರರಾಗಬೇಕು. ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗಂಗಿರೆಡ್ಡಿ ಕಿವಿಮಾತು ಹೇಳಿದರು.

ಕೋಚಿಮುಲ್ ನಿರ್ದೇಶಕ ರಾಜೇಂದ್ರಗೌಡ, ಎಪಿಎಂಸಿ ನಿರ್ದೇಶಕ ವೆಂಕಟೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಕೆ.ಎಂ.ಅರುಣಾಕುಮಾರಿ, ವಿಜಯಾ ಬ್ಯಾಂಕ್ ವ್ಯವಸ್ಥಾಪಕ ಹೇಮಂತ್‌ಕುಮಾರ್, ನಗರಸಭೆ ಸದಸ್ಯ ಶ್ರೀನಿವಾಸ್, ಕಾಂಗ್ರೆಸ್ ಎಸ್ಸಿ ನಗರ ಘಟಕದ ಅಧ್ಯಕ್ಷ ಶ್ರೀನಿವಾಸ್, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಮುನಿರತ್ನಪ್ಪ ಹಾಜರಿದ್ದರು.

* * 

ದಲಿತರು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸರ್ಕಾರದಲ್ಲಿ ಹಲವು ಯೋಜನೆಗಳಿದ್ದು ಅವುಗಳ ಸದ್ಬಳಕೆ ಆಗಬೇಕು. ಆದರೆ ನಿರೀಕ್ಷಿತ ಸಾಧನೆ ಆಗುತ್ತಿಲ್ಲ
ಶಂಕರರಾವ್ ಜಂಟಿ ನಿರ್ದೇಶಕ, ಸಿಡಾಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.