ADVERTISEMENT

ನಗರದಲ್ಲಿ ಮತದಾನ ಪ್ರಮಾಣ ಹೆಚ್ಚಿಸಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 7:06 IST
Last Updated 3 ಫೆಬ್ರುವರಿ 2018, 7:06 IST
ಕೋಲಾರದಲ್ಲಿ ಶುಕ್ರವಾರ ನಡೆದ ಚುನಾವಣಾ ಸ್ವೀಪ್ ಸಮಿತಿಯ ಕ್ರಿಯಾ ಯೋಜನೆ ತಯಾರಿ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಸತ್ಯವತಿ ಮಾತನಾಡಿದರು
ಕೋಲಾರದಲ್ಲಿ ಶುಕ್ರವಾರ ನಡೆದ ಚುನಾವಣಾ ಸ್ವೀಪ್ ಸಮಿತಿಯ ಕ್ರಿಯಾ ಯೋಜನೆ ತಯಾರಿ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಸತ್ಯವತಿ ಮಾತನಾಡಿದರು   

ಕೋಲಾರ: ‘ಸಾರ್ವತ್ರಿಕ ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದ್ದು, ಈ ಬಾರಿ ಮತದಾನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಸೂಚಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಚುನಾವಣಾ ಸ್ವೀಪ್ ಸಮಿತಿಯ ಕ್ರಿಯಾ ಯೋಜನೆ ತಯಾರಿ ಹಾಗೂ ಅನುಷ್ಠಾನ ಕುರಿತ ಸಭೆಯಲ್ಲಿ ಮಾತನಾಡಿ, ಹಿಂದಿನ ಚುನಾವಣೆಯಲ್ಲಿ ಎಷ್ಟು ಪ್ರಮಾಣದಲ್ಲಿ ಮತದಾನವಾಗಿದೆ ಎಂಬ ಬಗ್ಗೆ ಬೂತ್‌ವಾರು ವರದಿ ನೀಡಬೇಕೆಂದು ಚುನಾವಣಾ ಶಾಖೆ ಸಿಬ್ಬಂದಿಗೆ ತಿಳಿಸಿದರು.

ಈ ಬಾರಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು 35 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಕಡ್ಡಾಯ ಮತ ಚಲಾವಣೆ ಬಗ್ಗೆ ಈ ಅರ್ಜಿದಾರರಿಗೆ ಜಾಗೃತಿ ಮೂಡಿಸಬೇಕು. ಮತಗಟ್ಟೆಗೆ ತೆರಳಿ ಮತ ಹಾಕುವುದು ಹೇಗೆ ಎಂಬ ಬಗ್ಗೆ ಅರಿವು ಮೂಡಿಸಬೇಕು. ಜಿಲ್ಲೆಯಲ್ಲಿ ಶೇ 100ರಷ್ಟು ಮತದಾನವಾಗಬೇಕು ಎಂದು ಹೇಳಿದರು.

ADVERTISEMENT

ಚುನಾವಣೆ ಸಮೀಸುತ್ತಿದ್ದಂತೆ ಏನೊ ಒಂದು ರೀತಿ ವಾತಾವರಣ ಸೃಷ್ಟಿಯಾಗುತ್ತದೆ. ಮತದಾರರ ಓಲೈಕೆಗೆ ಅಭ್ಯರ್ಥಿಗಳು ಆಮಿಷವೊಡ್ಡುತ್ತಾರೆ. ಕೈಗಡಿಯಾರ, ಸೀರೆ, ಹಣ ಹಂಚಿಕೆ ಸಾಮಾನ್ಯವಾಗಿರುತ್ತದೆ. ಈ ಆಮಿಷಗಳಿಗೆ ಬಲಿಯಾಗದೆ ಮುಕ್ತವಾಗಿ ಮತದಾನ ಮಾಡುವ ಮನೋಭಾವ ಮೂಡಿಸಬೇಕು ಎಂದರು.

ಎಚ್ಚರ ವಹಿಸಬೇಕು: ಕಾಲೇಜು ವಿದ್ಯಾರ್ಥಿಗಳು, ಮಹಿಳಾ ಸ್ವಸಹಾಯ ಸಂಘ ಮತ್ತು ಸ್ವಯಂ ಸೇವಾ ಸಂಘಗಳ ಸದಸ್ಯರು, ಕಾರ್ಮಿಕರಿಗೆ ಮತದಾನದ ಮಹತ್ವದ ಜಾಗೃತಿ ಮೂಡಿಸಬೇಕು. ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿನ ಸರ್ಕಾರಿ ಜಾಹೀರಾತು ಫಲಕಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಮಾಹಿತಿ ಮಾತ್ರ ಇರಬೇಕು. ಈ ಬಗ್ಗೆ ವಾರ್ತಾ ಮತ್ತು ಪ್ರಚಾರ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಐದು ಕೈಗಾರಿಕಾ ಪ್ರದೇಶಗಳಿದ್ದು, ವಿವಿಧ ರಾಜ್ಯಗಳು ಕಾರ್ಮಿಕರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಮತದಾನದ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮ ನಡೆಸಬೇಕು. ಮತದಾನದ ದಿನ ಕಡ್ಡಾಯವಾಗಿ ರಜೆ ನೀಡುವಂತೆ ಕೈಗಾರಿಕೆಗಳಿಗೆ ತಿಳಿಸಬೇಕು ಎಂದು ವಿವರಿಸಿದರು.

‘ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಸಾಕಷ್ಟು ಪ್ರಯತ್ನ ಮಾಡಿದರೂ ಮತದಾರರು ಆಮಿಷಗಳಿಗೆ ಒಳಗಾಗುತ್ತಿರುವುದು ವಿಷಾದಕರ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಕಳವಳ ವ್ಯಕ್ತಪಡಿಸಿದರು.

ರಾಜಕೀಯ ಪಕ್ಷದ ನಾಯಕರು ಹಣ, ಮದ್ಯ, ಸೀರೆ ಹಂಚಿಕೆ ಮಾಡುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಚುನಾವಣಾ ಅಕ್ರಮ ತಡೆಗೆ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ಕಡ್ಡಾಯ ಮತದಾನ ಕುರಿತು ವ್ಯಾಪಕ ಪ್ರಚಾರ ನಡೆಸಬೇಕು. ಕಾಲೇಜು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಪ್ರಚಾರ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುರಾಜ್‌ ಜಿ.ಶಿರೋಳ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಉಪ ವಿಭಾಗಾಧಿಕಾರಿ ಶುಭಾ ಕಲ್ಯಾಣ್ ಪಾಲ್ಗೊಂಡಿದ್ದರು.

ಡಿ.ಸಿ ಕೆಂಡಾಮಂಡಲ

ನಗರ ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರಿ ಜಾಹೀರಾತು ಫಲಕಗಳು ಎಷ್ಟಿವೆ ಎಂದು ಜಿಲ್ಲಾಧಿಕಾರಿ ಕೇಳಿದ ಪ್ರಶ್ನೆಗೆ ಉತ್ತರಿಸಲು ವಾರ್ತಾ ಮತ್ತು ಪ್ರಚಾರ ಇಲಾಖೆ ಸಿಬ್ಬಂದಿ ರಮೇಶ್‌ ತಡಬಡಾಯಿಸಿದರು. ಇದರಿಂದ ಕೆಂಡಾಮಂಡಲರಾದ ಜಿಲ್ಲಾಧಿಕಾರಿ, ‘ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಪಲ್ಲವಿ ಹೊನ್ನಾಪುರ ಬದಲು ನೀವೇಕೆ ಸಭೆಗೆ ಬಂದಿದ್ದೀರಿ. ಪಲ್ಲವಿ ಕೆಲಸಾನೂ ಮಾಡಲ್ಲ, ಮಾಡುವವರಿಗೂ ಬಿಡಲ್ಲ. ಯಾವಾಗಲೂ ರಜೆಯಲ್ಲಿರುತ್ತಾರೆ. ಅವರಿಗೆ ಒಂದು ಸಭೆಯಲ್ಲೂ ಸಮರ್ಪಕ ಮಾಹಿತಿ ನೀಡಲು ಆಗಿಲ್ಲ’ ಎಂದು ಕಿಡಿ ಕಾರಿದರು.

* * 

ಮತ ಚಲಾವಣೆ ಖಾತರಿಗೆ ಕೇಂದ್ರ ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ ಮತ ಖಾತರಿ ಯಂತ್ರ ಅಳವಡಿಸಲು ಮುಂದಾಗಿದ್ದು, ಈ ಬಗ್ಗೆ ಅರಿವು ಮೂಡಿಸಬೇಕು.
ಜಿ.ಸತ್ಯವತಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.