ADVERTISEMENT

‘ಜನ ಸೇವೆಗಾಗಿ ರಾಜಕೀಯ ಪ್ರವೇಶ’

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 9:18 IST
Last Updated 7 ಫೆಬ್ರುವರಿ 2018, 9:18 IST

ಮುಳಬಾಗಿಲು: ‘ನಾನು ಜನ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆಯೇ ಹೊರತು ಹಣ ಮಾಡುವುದಕ್ಕಲ್ಲ. ಚುನಾವಣೆಯಲ್ಲಿ ಕ್ಷೇತ್ರದ ಜನರೇ ವಿರೋಧಿಗಳಿಗೆ ತಕ್ಕ ಉತ್ತರ ನೀಡುತ್ತಾರೆ’ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.

ತಾಲ್ಲೂಕಿನ ಎಂ.ಅಗ್ರಹಾರ ಗ್ರಾಮದಲ್ಲಿ ಸೋಮವಾರ ₹ 78 ಲಕ್ಷ ವೆಚ್ಚದ ಸಂಪರ್ಕ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಜನರ ಆಶೀರ್ವಾದದಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಜನ ಪ್ರಶ್ನಿಸಿದರೆ ಉತ್ತರಿಸುತ್ತೇನೆ. ದಾರಿಯಲ್ಲಿ ಹೋಗುವವರಿಗೆಲ್ಲಾ ಉತ್ತರ ಕೊಡಲು ಸಿದ್ಧನಿಲ್ಲ ಎಂದರು.

ವಿವಿಧ ಯೋಜನೆಗಳಡಿ ಸುಮಾರು ₹ 1,500 ಕೋಟಿ ವೆಚ್ಚದಲ್ಲಿ ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಜತೆಗೆ ವೈಯಕ್ತಿಕವಾಗಿ ಜನರಿಗೆ ಹಲವು ಸೌಕರ್ಯ ಕಲ್ಪಿಸಿದ್ದೇನೆ. ಕಾಂಗ್ರೆಸ್‌ನಿಂದ ಚುನಾವಣೆಗೆ ಟಿಕೆಟ್‌ ಸಿಗಲಿದ್ದು, ಅಧಿಕ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ನೈತಿಕತೆ ಇಲ್ಲ: ರಾಜ್ಯ ಬಿಜೆಪಿ ನಾಯಕರು ಹಲವು ಹಗರಣಗಳಲ್ಲಿ ಸಿಲುಕಿ ಜೈಲಿಗೆ ಹೋಗಿ ಬಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಉತ್ತಮ ಆಡಳಿತ ನೀಡಿದೆ. ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಆ ಪಕ್ಷದ ಮುಖಂಡರೊಬ್ಬರು ಕೊತ್ತೂರು ಮಂಜುನಾಥ್‌ ಅವರನ್ನು ತಾಲ್ಲೂಕಿನಿಂದ ಓಡಿಸಿ ಎಂದು ಹೇಳಿ ದ್ದಾರೆ. ಜೈಲು ಸೇರಿದ ವ್ಯಕ್ತಿಗಳ ಪಕ್ಕದಲ್ಲಿ ಕುಳಿತು ತನ್ನ ವಿರುದ್ಧ ಮಾತನಾಡಲು ಅವರಿಗೆ ನೈತಿಕತೆ ಇಲ್ಲ ಎಂದರು.

ಕಾಮಗಾರಿ ವಿಳಂಬ: ‘ಅನುದಾನದ ಕೊರತೆಯಿಂದಾಗಿ ರಸ್ತೆ ಕಾಮಗಾರಿ ವಿಳಂಬವಾಗಿತ್ತು. ಶಾಸಕರ ಶ್ರಮದಿಂದಾಗಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರವೇ ಕಾಮಗಾರಿ ಪೂರ್ಣಗೊಳಿಸುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಸ ಅರವಿಂದ್ ಭರವಸೆ ನೀಡಿದರು.

ಶಾಸಕರು ವಿಶೇಷ ಘಟಕ ಯೋಜನೆಯಡಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸುವ ಮೂಲಕ ಪ್ರತಿ ಗ್ರಾಮದಲ್ಲೂ ಸಿ.ಸಿ ರಸ್ತೆ ಕಾಮಗಾರಿ ಆರಂಭಿಸಿದ್ದಾರೆ. ಹನುಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ₹ 1.20 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಗುತ್ತಿಗೆದಾರರು ಕಾಲ ಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು.

ಎಪಿಎಂಸಿ ನಿರ್ದೇಶಕ ಆರ್.ಪೆದ್ದಪ್ಪಯ್ಯ, ಉತ್ತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿಳ್ಳಮ್ಮ, ಉಪಾಧ್ಯಕ್ಷ ಸುಬ್ರಮಣಿ, ಗುತ್ತಿಗೆದಾರ ಅಶೋಕ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶ್ರೀನಿವಾಸ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.