ADVERTISEMENT

600 ವಿವಿಧ ಭತ್ತದ ತಳಿ ಉತ್ಪಾದನೆ

ಪೊನ್ನಂಪೇಟೆ: ಕೃಷಿ ಸಂಶೋಧನಾ ಕೇಂದ್ರ

ಪ್ರಜಾವಾಣಿ ವಿಶೇಷ
Published 5 ಆಗಸ್ಟ್ 2013, 8:26 IST
Last Updated 5 ಆಗಸ್ಟ್ 2013, 8:26 IST

ಗೋಣಿಕೊಪ್ಪಲು: ಸಮೀಪದ ಪೊನ್ನಂಪೇಟೆ ಭಾಗದಲ್ಲಿ ಕಾಫಿ ತೋಟ ಇರುವಷ್ಟೇ ಪ್ರಮಾಣದಲ್ಲಿ ಗದ್ದೆ ಬಯಲೂ ಇದೆ. ಹೀಗಾಗಿ ಪೊನ್ನಂಪೇಟೆ ದೇಶದ ಭತ್ತ ಉತ್ಪಾದನೆಯಲ್ಲಿ ಪ್ರಾಮುಖ್ಯತೆ ಪಡೆದಿದೆ.  ಈ ಭಾಗದಲ್ಲಿ ಭತ್ತಕ್ಕೆ ಬೆಂಕಿ ರೋಗ ಹರಡುವುರಿಂದ ರೋಗ ಪತ್ತೆ, ನಿಯಂತ್ರಣ ಹೊಸ ತಳಿ ಉತ್ಪಾದನೆ ದೃಷ್ಟಿಯಿಂದ 1951ರಲ್ಲಿಯೇ ಇಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಗೊಳಿಸಲಾಗಿದೆ. ಈ ಕೇಂದ್ರದಲ್ಲಿ ಪ್ರಸಕ್ತ ಸಾಲಿನಲ್ಲಿ 600ಕ್ಕೂ ಅಧಿಕ ಬತ್ತದ ತಳಿಗಳನ್ನು ಉತ್ಪಾದಿಸಲಾಗಿದೆ.

ಪಟ್ಟಣದ ಪಕ್ಕದಲ್ಲಿಯೇ ಇರುವ ಕೃಷಿ ಸಂಶೋಧನಾ ಕೇಂದ್ರಕ್ಕೆ ವಿಶಾಲವಾದ ಗದ್ದೆ ಬಯಲಿದೆ. ಇಲ್ಲಿ ನೂರಾರು ಬಗೆಯ ಭತ್ತದ ತಳಿಗಳನ್ನು ಬಿತ್ತನೆ ಮಾಡಿ ಅವುಗಳ ಗುಣಾವಗುಣಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ.  ಹೈದರಾಬಾದಿನ ಭತ್ತ ಉತ್ಪಾದನಾ ಕೇಂದ್ರದವರು ರವಾನಿಸಿರುವ 600 ಭತ್ತದ ತಳಿಗಳನ್ನು ಇಲ್ಲಿ ಬಿತ್ತನೆ ಮಾಡಲಾಗಿದೆ. ಗದ್ದೆಯಲ್ಲಿ ಪುಟ್ಟ ಚೌಕಾಕಾರದ ಪಾತಿಗಳಲ್ಲಿ ಭತ್ತದ ಬೀಜವನ್ನು ಬಿತ್ತಲಾಗಿದೆ. ಮತ್ತೊಂದು ಕಡೆ 148 ತಳಿಗಳನ್ನು  ಪ್ರತ್ಯೇಕವಾಗಿ ಬಿತ್ತಲಾಗಿದೆ.

   ಈ ತಳಿಗಳಿಗೆ ಯಾವುದೇ ರಾಸಾಯನಿಕ ಗೊಬ್ಬರ ಹಾಕಿಲ್ಲ. ಪಾತಿಗಳಿಗೆ ನೀರು ತುಂಬಿಸಿಲ್ಲ.  ಕೇವಲ ಮಳೆ ನೀರಿನ ತೇವಾಂಶದಲ್ಲಿ ಸಸಿಗಳನ್ನು ಸ್ವಾಭಾವಿಕವಾಗಿ ಬೆಳೆಸಲಾಗುತ್ತಿದೆ. ಮಳೆ ನೀರು ಹೊರಗೆ ಸುಲಭವಾಗಿ ಹರಿದು ಹೋಗುವಂತೆ ಕಂದಕ ತೋಡಲಾಗಿದೆ. ಕೇಂದ್ರದಲ್ಲಿ  ಕೃಷಿ ತಜ್ಞರು ಇದ್ದಾರೆ. 

ಸಂಶೋಧನಾ ಕೇಂದ್ರದಲ್ಲಿರುವ ಜಾನುವಾರ ಗಳಿಗೆ ಮೇವು ಮತ್ತು ಭತ್ತಕ್ಕಾಗಿ ಶರಾವತಿ ತಳಿ ಯನ್ನು ಬಿತ್ತನೆ ಮಾಡಲಾಗಿದೆ. ಈ ತಳಿ ಉತ್ತಮ ಇಳುವರಿ ನೀಡುವುದಲ್ಲದೆ ಸಮೃದ್ಧ ಹುಲ್ಲು ಲಭಿಸುತ್ತದೆ ಎನ್ನುತ್ತಾರೆ ವಿಜ್ಞಾನಿ ದೇವರಾಜು.

ತಜ್ಞರ  ನುಡಿ: ಸಸಿಗಳನ್ನು ನಾಟಿ ಮಾಡಿದ ಬಳಿಕ ಅವುಗಳ ಲಕ್ಷಣಗಳನ್ನು ಅಧ್ಯಯನ ಮಾಡಿ ಹೈದರಾಬಾದಿನ ಭತ್ತ ಕೇಂದ್ರಕ್ಕೆ   ವರದಿ ನೀಡಲಾಗುತ್ತಿದೆ. ಪ್ರತಿ ತಳಿಗಳಿಗೆ ಕೋಡ್ ಸಂಖ್ಯೆ ಮಾತ್ರ ಕೊಡಲಾಗಿದೆ. ಬಳಿಕ ಹೈದರಾಬಾದಿನಲ್ಲಿ ಅವುಗಳಿಗೆ ನಾಮಕರಣ ಮಾಡಲಾಗುತ್ತದೆ.  ಫಿಲಿಪ್ಪಿನ್ಸ್‌ನ ಅಂತರಾಷ್ಟ್ರೀಯ ಭತ್ತ ಉತ್ಪಾದನಾ ಕೇಂದ್ರದಿಂದಲೂ ಭತ್ತ ತಳಿಗಳು ಬರುತ್ತಿವೆ. ಅವುಗಳನ್ನೆಲ್ಲ  ಬಿತ್ತನೆ ಮಾಡಿ ಸಂಶೋಧನೆಗೊಳ ಪಡಿಸಲಾಗಿದೆ.  ಕೃಷಿ ವಿಶ್ವವಿದ್ಯಾಲಯದ ಪೊನ್ನಂಪೇಟೆ ಅರಣ್ಯ ಕಾಲೇಜಿನ ಸಹಕಾರ ದಿಂದಲೂ ಭತ್ತದ ತಳಿಗಳನ್ನು  ಉತ್ಪಾದಿಸಲಾಗು ತ್ತಿದೆ. ಎಂದು ಕೃಷಿ ವಿಜ್ಞಾನಿ ಡಾ.ದೇವರಾಜು ತಿಳಿಸಿದ್ದಾರೆ.

ಒಂದು ತಿಂಗಳು ತುಂಬಿದ ಸಸಿಗಳನ್ನು ಕಿತ್ತು ನಾಟಿ ಮಾಡಲಾಗುತ್ತದೆ. ಗದ್ದೆಗೆ ಯಾವುದೇ  ರಸಾಯನಿಕ ಗೊಬ್ಬರ ಹಾಕುವುದಿಲ್ಲ. ಜತೆಗೆ ರೋಗ ಬಂದರೆ ಔಷಧಿ ಕೂಡ ಸಿಂಪಡಣೆ ಮಾಡುವುದಿಲ್ಲ. ಇದರಿಂದ ಪರಿಸರದಲ್ಲಿ  ಸಹಜವಾಗಿ ಬೆಂಕಿರೋಗ ನಿರೋಧಕ ಶಕ್ತಿಹೊಂದಿ ಬೆಳೆಯುವ ಭತ್ತವನ್ನು ಪತ್ತೆ ಹಚ್ಚಬಹುದು. ದೇಶದಲ್ಲಿಯೇ ಬ್ರಹ್ಮಾವರ ಮತ್ತು ಪೊನ್ನಂಪೇಟೆ ಪ್ರದೇಶದ ಭತ್ತದ ಬೆಳೆ ಅತಿಹೆಚ್ಚು ಬೆಂಕಿರೋಗಕ್ಕೆ ತುತ್ತಾಗುತ್ತದೆ.

ಮಳೆ, ಬಿಸಿಲಿನಿಂದ ಕೂಡಿರುವ ಪೊನ್ನಂಪೇಟೆ ಸುತ್ತಮುತ್ತಲಿನ ಹವಾಗುಣದಲ್ಲಿ ಬೆಂಕಿ ರೋಗಕ್ಕೆ ತುತ್ತಾಗದೆ ಬೆಳೆಯುವ ಭತ್ತದ ತಳಿಯನ್ನು ದೇಶದ ಯಾವುದೇ ಭಾಗದಲ್ಲಿ ಬೆಳೆಯಬಹುದು. ಅದಕ್ಕೆ  ರೋಗ ನಿರೋಧಕ ಶಕ್ತಿ ಇರುತ್ತದೆ ಎಂದು ಕೃಷಿ ತಜ್ಞ ಬಿ. ಮಂಜುನಾಥ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.