ADVERTISEMENT

62 ಅಡಿ ಎತ್ತರದ ಏಕಶಿಲಾ ವಿಗ್ರಹ ಕೆತ್ತನೆ

ಬೆಂಗಳೂರಿನ ಕಾಚರಕನಹಳ್ಳಿಯಲ್ಲಿ ಪ್ರತಿಷ್ಠಾಪನೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 10:04 IST
Last Updated 27 ಮಾರ್ಚ್ 2018, 10:04 IST

ಕೋಲಾರ: ‘ರಾಮಲಕ್ಷ್ಮಣ ಸಮೇತ ಹನುಮಾನ್ ದೇವರ 62 ಅಡಿ ಎತ್ತರದ ಏಕಶಿಲಾ ವಿಗ್ರಹವನ್ನು ಬೆಂಗಳೂರಿನ ಕಾಚರಕನಹಳ್ಳಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲು ಸಿದ್ಧತೆ ಮಾಡಲಾಗಿದೆ’ ಎಂದು ರಾಮಚೈತನ್ಯ ವರ್ಧಿನಿ ಟ್ರಸ್ಟ್‌ ಅಧ್ಯಕ್ಷ ಎಂ.ಎನ್.ರೆಡ್ಡಿ ತಿಳಿಸಿದರು.

ತಾಲ್ಲೂಕಿನ ಬೈರಸಂದ್ರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ವಿಶ್ವದಲ್ಲೇ ಅತಿ ಎತ್ತರದ 62 ಅಡಿ ಉದ್ದ ಮತ್ತು 750 ಟನ್ ತೂಕದ ಈ ವಿಗ್ರಹವನ್ನು ಬೈರಸಂದ್ರದಲ್ಲಿ ಕೆತ್ತಿಸಲಾಗುತ್ತಿದೆ. ವಿಗ್ರಹವನ್ನು ಭಾರಿ ಗಾತ್ರದ ವಾಹನಗಳ ಮೂಲಕ ಸಾಗಿಸಲಾಗುತ್ತದೆ’ ಎಂದರು.

‘ಏಕಶಿಲೆಗಾಗಿ ಸುಮಾರು 6 ತಿಂಗಳ ಕಾಲ ಹುಡುಕಾಟ ನಡೆಸಿದ್ದು, ಕೊನೆಗೆ ಬೈರಸಂದ್ರದ ಮುನಿರಾಜ್ ಎಂಬುವರ ಜಮೀನಿನಲ್ಲಿ ಕಲ್ಲು ಸಿಕ್ಕಿತು. ಶಿಲ್ಪಿಗಳು ಈ ಕಲ್ಲು ಸೂಕ್ತವೆಂದು ತಿಳಿಸಿದ್ದರಿಂದ ಇದೇ ಕಲ್ಲನ್ನು ಆಯ್ಕೆ ಮಾಡಲಾಯಿತು’ ಎಂದು ವಿವರಿಸಿದರು.

ADVERTISEMENT

₹ 10 ಕೋಟಿ ವೆಚ್ಚ: ‘ದಕ್ಷಿಣದ ಅಯೋಧ್ಯೆ ಎಂದು ಹೆಸರಾಗಿರುವ ಕಾಚರಕನಹಳ್ಳಿಗೆ 2007ರಲ್ಲಿ ಬಂದಿದ್ದ ರಾಘವೇಂದ್ರ ಭಾರತಿ ಸ್ವಾಮೀಜಿಯ ಪ್ರೇರಣೆಯಂತೆ ಬೃಹತ್ ಏಕಶಿಲಾ ಹನುಮಾನ್ ವಿಗ್ರಹ ಪ್ರತಿಷ್ಠಾಪಿಸಲು ಮುಂದಾಗಿದ್ದೇವೆ. ವಿಗ್ರಹ ಪ್ರತಿಷ್ಠಾಪನೆ ಮುಕ್ತಾಯ ಹಂತ ತಲುಪುವ ವೇಳೆಗೆ ಸುಮಾರು ₹ 10 ಕೋಟಿ ವೆಚ್ಚವಾಗಲಿದೆ. ವಿಗ್ರಹ ಸಾಗಣೆಗೆ ₹ 3.50 ಕೋಟಿ ಖರ್ಚಾಗುತ್ತದೆ. ಕಾಚರಕನಹಳ್ಳಿಗೆ 86 ಕಿ.ಮೀ ದೂರವಿದ್ದು, ವಿಗ್ರಹ ಸಾಗಿಸಲು ತಾಂತ್ರಿಕರ ನೆರವು ಪಡೆಯಲಾಗುತ್ತದೆ’ ಎಂದು ತಿಳಿಸಿದರು.

ಕೃಷ್ಣ ಶಿಲೆ: ‘ಏಕಶಿಲೆಗೆ ಸಿಕ್ಕಿರುವ ಕಲ್ಲು ಕೃಷ್ಣ ಶಿಲೆಯಾಗಿದೆ. ಶಿಲ್ಪಶಾಸ್ತ್ರ ಮತ್ತು ಹಿಂದೂ ಶಾಸ್ತ್ರದ ಅನ್ವಯವೇ ಈ ಕಲ್ಲನ್ನು ಆಯ್ಕೆ ಮಾಡಿದ್ದೇವೆ. ಕೆತ್ತನೆ ಕಾರ್ಯ ಶೇ 60ರಷ್ಟು ಮುಗಿದಿದೆ. ಕೆತ್ತನೆ ಕಾರ್ಯ ಸಂಪೂರ್ಣ ಮುಗಿದ ನಂತರ 60 ಅಡಿ ಆಳದ ಅಡಿಪಾಯ ಹಾಕಿ ವಿಗ್ರಹ ಪ್ರತಿಷ್ಠಾಪಿಸಲಾಗುತ್ತದೆ’ ಎಂದು ಶಿಲ್ಪಿ ರಾಜಶೇಖರಾಚಾರ್ಯ ತಿಳಿಸಿದರು.

ಗೋವಿಂದರಾಜ್, ಆರ್‍ಎಸ್‍ಎಸ್ ಪ್ರಮುಖ್ ಪ್ರಕಾಶ್‌, ಪ್ರಕಾಶ್ ರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.