ADVERTISEMENT

ಮತ್ತೆ 88 ಮಂದಿಗೆ ಸೋಂಕು

ಜಿಲ್ಲೆಯಲ್ಲಿ ಮುಂದುವರಿದ ಕೊರೊನಾ ಸೋಂಕಿನ ಓಟ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 15:29 IST
Last Updated 7 ಆಗಸ್ಟ್ 2020, 15:29 IST

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಓಟ ಮುಂದುವರಿದಿದ್ದು, ಹೊಸದಾಗಿ 88 ಮಂದಿಗೆ ಸೋಂಕು ತಗುಲಿರುವುದು ಶುಕ್ರವಾರ ದೃಢಪಟ್ಟಿದೆ.

ಹೊಸದಾಗಿ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆಗೆ ಹೋಲಿಸಿದರೆ ಗುಣಮುಖರಾಗುತ್ತಿರುವವರ ಸಂಖ್ಯೆ ಕೊಂಚ ಇಳಿಕೆಯಾಗಿರುವುದು ಆರೋಗ್ಯ ಇಲಾಖೆಯ ಆತಂಕ ಹೆಚ್ಚಿಸಿದೆ. ಶುಕ್ರವಾರ ಯಾವುದೇ ಸೋಂಕಿತರ ಸಾವು ಸಂಭವಿಸದಿರುವುದರಿಂದ ಜನ ನಿರಾಳರಾಗಿದ್ದಾರೆ.

ಸೋಂಕಿತರ ಸಂಪರ್ಕವು ಜಿಲ್ಲೆಗೆ ಕಂಟಕವಾಗಿ ಪರಿಣಮಿಸಿದೆ. ಸೋಂಕಿತರ ಸಂಪರ್ಕದಿಂದ ದೂರವಿರುವಂತೆ ಆರೋಗ್ಯ ಇಲಾಖೆಯು ಸಾಕಷ್ಟು ಜಾಗೃತಿ ಮೂಡಿಸಿದರೂ ಜನರ ನಿರ್ಲಕ್ಷ್ಯದಿಂದಾಗಿ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಶುಕ್ರವಾರ ದೃಢಪಟ್ಟಿರುವ 88 ಪ್ರಕರಣಗಳ ಪೈಕಿ 32 ಪ್ರಕರಣಗಳಲ್ಲಿ ಸೋಂಕಿತರ ಸಂಪರ್ಕದಿಂದಲೇ ಸೋಂಕು ಹರಡಿರುವುದು ಖಚಿತವಾಗಿದೆ.

ADVERTISEMENT

ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು 33 ಮಂದಿಗೆ ಸೋಂಕು ತಗುಲಿದೆ. ವಿಷಮ ಶೀತ ಜ್ವರದಿಂದ ಬಳಲುತ್ತಿರುವ 18 ಮಂದಿ, ಸೋಂಕಿತರ ಸಂಪರ್ಕದಿಂದ 8 ಮಂದಿ, ತೀವ್ರ ಉಸಿರಾಟ ಸಮಸ್ಯೆಯಿರುವ 6 ಮಂದಿಗೆ ಹಾಗೂ ಹೊರ ಜಿಲ್ಲೆಗೆ ಹೋಗಿದ್ದ ಒಬ್ಬರಿಗೆ ಸೋಂಕು ಹರಡಿದೆ.

ಮುಳಬಾಗಿಲು ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಕ್ಕೆ ತುತ್ತಾಗಿರುವ 3 ಮಂದಿಗೆ ಮತ್ತು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಇಬ್ಬರಿಗೆ ಸೋಂಕು ಬಂದಿದೆ. ಶ್ರೀನಿವಾಸಪುರ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರವಿರುವ ಒಬ್ಬರಿಗೆ ಹಾಗೂ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಒಬ್ಬರಿಗೆ ಸೋಂಕು ತಗುಲಿದೆ.

ಬಂಗಾರಪೇಟೆ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರವಿರುವ 4 ಮಂದಿ, ಸೋಂಕಿತರ ಸಂಪರ್ಕದಿಂದ ಇಬ್ಬರಿಗೆ ಮತ್ತು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಒಬ್ಬರಿಗೆ ಸೋಂಕು ಬಂದಿದೆ. ಕೆಜಿಎಫ್‌ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಕ್ಕೆ ತುತ್ತಾಗಿರುವ 7 ಮಂದಿ, ಹೊರ ಜಿಲ್ಲೆಗೆ ಹೋಗಿ ಬಂದಿದ್ದ 4 ಮಂದಿಗೆ ಮತ್ತು ಸೋಂಕಿತರ ಸಂಪರ್ಕದಿಂದ ಒಬ್ಬರಿಗೆ ಸೋಂಕು ಹರಡಿದೆ.

ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಅಲ್ಲದೇ, ಸುರಕ್ಷತಾ ಕ್ರಮವಾಗಿ ಇಡೀ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಕ್ವಾರಂಟೈನ್‌ ಮಾಡಲಾಗಿದೆ.

16 ಮಂದಿ ಗುಣಮುಖ: ಜಿಲ್ಲಾ ಕೇಂದ್ರದ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ಪೈಕಿ 16 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಶುಕ್ರವಾರ ಮನೆಗೆ ಮರಳಿದರು. ಮಾಲೂರು ಮತ್ತು ಕೆಜಿಎಫ್ ತಾಲ್ಲೂಕಿನ ತಲಾ 3 ಮಂದಿ, ಮುಳಬಾಗಿಲು ತಾಲ್ಲೂಕಿನ 7 ಮಂದಿ, ಶ್ರೀನಿವಾಸಪುರ ತಾಲ್ಲೂಕಿನ ಇಬ್ಬರು ಹಾಗೂ ಬಂಗಾರಪೇಟೆ ತಾಲ್ಲೂಕಿನ ಒಬ್ಬರನ್ನು ಆಸ್ಪತ್ರೆಯಿಂದ ಬೀಳ್ಕೊಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.