ADVERTISEMENT

ಕೋಲಾರ | ಬಡತನದ ಕುಲುಮೆಯಲಿ ಕಮರಿದ ಕಂದಮ್ಮಗಳು

ದಿಗ್ಬಂಧನದ ಬಿಸಿಗೆ ತತ್ತರಿಸಿದ ಕುಟುಂಬ: ತುತ್ತು ಅನ್ನಕ್ಕೆ ಬೀದಿ ಬೀದಿಯಲ್ಲಿ ಅಲೆದಾಟ

ಜೆ.ಆರ್.ಗಿರೀಶ್
Published 5 ಏಪ್ರಿಲ್ 2020, 7:12 IST
Last Updated 5 ಏಪ್ರಿಲ್ 2020, 7:12 IST
ಕೋಲಾರದ ಸರ್ವಜ್ಞ ಉದ್ಯಾನದ ಬಳಿ ಬಯಲಲ್ಲೇ ತಂಗಿರುವ ಸಬೀರ್‌ ದಂಪತಿ ಕುಟುಂಬ.
ಕೋಲಾರದ ಸರ್ವಜ್ಞ ಉದ್ಯಾನದ ಬಳಿ ಬಯಲಲ್ಲೇ ತಂಗಿರುವ ಸಬೀರ್‌ ದಂಪತಿ ಕುಟುಂಬ.   

ಕೋಲಾರ: ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಜಾರಿಯಾಗಿರುವ ದಿಗ್ಬಂಧನ ಆದೇಶದಿಂದ ತತ್ತರಿಸಿರುವ ತಮಿಳುನಾಡು ಮೂಲದ ಬಡ ಕುಟುಂಬವೊಂದು ತುತ್ತು ಅನ್ನಕ್ಕಾಗಿ ಜಿಲ್ಲಾ ಕೇಂದ್ರದಲ್ಲಿ ಬೀದಿ ಬೀದಿ ಅಲೆಯುತ್ತಿದೆ.

ಕುಟುಂಬದ ಹೊಣೆ ಹೊತ್ತಿರುವ ಸಬೀರ್‌ ಅವರು ಹುಟ್ಟು ಅಂಗವಿಕಲರಾಗಿದ್ದು, ಇವರ ಎರಡೂ ಕಾಲುಗಳಿಗೆ ಸ್ವಾಧೀನವಿಲ್ಲ. ಸಬೀರ್‌ರ ಪತ್ನಿ ಫಾತಿಮಾ ಅವರ ಕಾಲುಗಳು ಅಪಘಾತದಲ್ಲಿ ಮುರಿದು ಹೋಗಿದ್ದು, ಸರ್ಜಿಕಲ್‌ ರಾಡ್‌ ಹಾಕಲಾಗಿದೆ. ಆದರೆ, ಅವರು ಎದ್ದು ಓಡಾಡುವ ಸ್ಥಿತಿಯಲ್ಲಿಲ್ಲ. ದಂಪತಿಗೆ ರೇಷ್ಮಾ ಮತ್ತು ಚಾಂದ್‌ಪಾಷಾ ಎಂಬ ಮಕ್ಕಳಿದ್ದು, ಬಡತನದ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಪತಿ ಮತ್ತು ಮಕ್ಕಳೊಂದಿಗೆ ನಗರದ ಟಮಕ ಬಳಿ ವಾಸವಿದ್ದ ಫಾತಿಮಾ ಮನೆಗಳಲ್ಲಿ ಮನೆಗೆಲಸ ಮಾಡಿ ಕುಟುಂಬ ನಡೆಸುತ್ತಿದ್ದರು. ಆದರೆ, ಆರು ತಿಂಗಳ ಹಿಂದೆ ಅಪಘಾತದಲ್ಲಿ ಕಾಲು ಕಳೆದುಕೊಂಡ ನಂತರ ಮನೆ ಮಾಲೀಕರು ಅವರನ್ನು ಕೆಲಸದಿಂದ ಬಿಡಿಸಿದ್ದಾರೆ. ಬದುಕಿಗೆ ಆಸರೆಯಾಗಿದ್ದ ಕೆಲಸ ಕಳೆದುಕೊಂಡ ಮೇಲೆ ಫಾತಿಮಾ ದಂಪತಿ ಮಕ್ಕಳೊಂದಿಗೆ ಭಿಕ್ಷೆ ಮಾಡಿ ಜೀವನ ಸಾಗಿಸುತ್ತಿದ್ದರು.

ADVERTISEMENT

ಟಮಕ ಬಳಿಯ ಶೆಡ್‌ನಲ್ಲಿದ್ದ ದಂಪತಿಯು ಬಾಡಿಗೆ ಕಟ್ಟದ ಕಾರಣಕ್ಕೆ ಶೆಡ್‌ ಮಾಲೀಕರು ಅವರನ್ನು 20 ದಿನಗಳ ಹಿಂದೆ ಶೆಡ್‌ನಿಂದ ಹೊರ ಹಾಕಿದ್ದಾರೆ. ಸ್ವಂತ ಸೂರಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಿರುವ ದಂಪತಿಯು ಮಕ್ಕಳೊಂದಿಗೆ ಉದ್ಯಾನಗಳಲ್ಲಿ, ರಸ್ತೆ ಬದಿಯ ಅಂಗಡಿ ಹಾಗೂ ಮರಗಳ ಕೆಳಗೆ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ.

ಭಿಕ್ಷೆಗೆ ಕುತ್ತು: ಇಡೀ ಕುಟುಂಬ ನಗರದ ಮಸೀದಿಗಳು, ದೇವಸ್ಥಾನಗಳು, ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೇಡಿ ಬಂದ ಹಣದಲ್ಲಿ ಜೀವನ ಸಾಗಿಸುತ್ತಿತ್ತು. ದಿಗ್ಬಂಧನ ಜಾರಿಯಾದ ನಂತರ ದೇವಸ್ಥಾನ ಹಾಗೂ ಮಸೀದಿಗಳನ್ನು ಮುಚ್ಚಲಾಗಿದ್ದು, ಕುಟುಂಬಕ್ಕೆ ಭಿಕ್ಷೆಯ ರೂಪದಲ್ಲಿ ಬರುತ್ತಿದ್ದ ಅಲ್ಪಸ್ವಲ್ಪ ಹಣಕ್ಕೂ ಕತ್ತರಿ ಬಿದ್ದಿದೆ.

ಸಬೀರ್‌ ಅವರು ದಿನವಿಡೀ ರಸ್ತೆಗಳಲ್ಲಿ ತೆವಳುತ್ತಾ ಭಿಕ್ಷೆ ಕೇಳುತ್ತಿದ್ದಾರೆ. ಮಕ್ಕಳು ತಾಯಿ ಫಾತಿಮಾರನ್ನು ವೀಲ್‌ಚೇರ್‌ನಲ್ಲಿ ಕೂರಿಸಿಕೊಂಡು ಭಿಕ್ಷೆಗಾಗಿ ಉರಿ ಬಿಸಿಲಿನಲ್ಲಿ ಗಲ್ಲಿ ಗಲ್ಲಿ ಸುತ್ತುತ್ತಿದ್ದಾರೆ. ದಿಗ್ಬಂಧನದ ಕಾರಣಕ್ಕೆ ರಸ್ತೆಗಳಲ್ಲಿ ಜನರ ಓಡಾಟ ವಿರಳವಾಗಿದ್ದು, ಕುಟುಂಬಕ್ಕೆ ದಿನದಲ್ಲಿ ₹ 50 ಸಿಗುವುದು ಸಹ ಕಷ್ಟವಾಗಿದೆ. ಜಿಲ್ಲೆಯ ಗಡಿಯನ್ನು ಬಂದ್‌ ಮಾಡಿರುವುದರಿಂದ ಕುಟುಂಬವು ತವರಿಗೂ ಹಿಂದಿರುಗಲಾಗದೆ ಜೀವನಕ್ಕೆ ಹಣವೂ ಇಲ್ಲದೆ ಅತಂತ್ರವಾಗಿದೆ.

ಹೋಟೆಲ್‌ ಹಾಗೂ ರಸ್ತೆ ಬದಿಯ ಅಂಗಡಿಗಳೆಲ್ಲಾ ಬಂದ್‌ ಆಗಿದ್ದು, ಕುಟುಂಬವು ಹಸಿವಿನಿಂದ ಕಂಗೆಟ್ಟಿದೆ. ದಂಪತಿಯು ಅಲ್ಪಸ್ವಲ್ಪ ಹಣದಲ್ಲಿ ಮಕ್ಕಳಿಗೆ ಟೀ, ಬನ್‌ ಕೊಡಿಸಿ ತಾವು ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಇತರೆ ಮಕ್ಕಳಂತೆ ಶಾಲೆಗೆ ಹೋಗಿ ನಲಿದಾಡಬೇಕಾದ ಕಂದಮ್ಮಗಳ ಜೀವನ ಬಡತನದ ಕುಲುಮೆಯಲ್ಲಿ ಕಮರುತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.