ADVERTISEMENT

ಕೊರೊನಾ ಸೋಂಕಿತರ ಸರಣಿ ಸಾವು

24 ತಾಸಿನಲ್ಲಿ 11 ಮಂದಿ ಕೊನೆಯುಸಿರು

​ಪ್ರಜಾವಾಣಿ ವಾರ್ತೆ
Published 15 ಮೇ 2021, 13:42 IST
Last Updated 15 ಮೇ 2021, 13:42 IST

ಕೋಲಾರ: ಜಿಲ್ಲೆಯಲ್ಲಿ ಕೋವಿಡ್‌ ರುದ್ರ ತಾಂಡವ ಮುಂದುವರಿದಿದ್ದು, ಕಳೆದ 24 ತಾಸಿನಲ್ಲಿ 11 ಮಂದಿ ಕೊರೊನಾ ಸೋಂಕಿತರು ಕೊನೆಯುಸಿರೆಳೆದಿದ್ದಾರೆ.

ಸೋಂಕಿತರ ಸಾವಿನ ನಾಗಲೋಟಕ್ಕೆ ಆರೋಗ್ಯ ಇಲಾಖೆ ಬೆಚ್ಚಿ ಬಿದ್ದಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಸೋಂಕಿತರ ಸರಣಿ ಸಂಭವಿಸುತ್ತಿದ್ದು, ಶುಕ್ರವಾರವಷ್ಟೇ 8 ಸೋಂಕಿತರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಶನಿವಾರ 11 ಸೋಂಕಿತರು ಅಸುನೀಗಿದ್ದು, ಒಟ್ಟಾರೆ ಸಾವಿನ ಸಂಖ್ಯೆ 295ಕ್ಕೆ ಏರಿಕೆಯಾಗಿದೆ.

ಮುಳಬಾಗಿಲು ತಾಲ್ಲೂಕಿನಲ್ಲಿ ಅತಿ ಹೆಚ್ಚು 6 ಮಂದಿ ಸೋಂಕಿತರು ಅಸುನೀಗಿದ್ದಾರೆ. ಉಳಿದಂತೆ ಮಾಲೂರು ತಾಲ್ಲೂಕಿನ 4 ಮಂದಿ ಮತ್ತು ಶ್ರೀನಿವಾಸಪುರ ತಾಲ್ಲೂಕಿನ ಒಬ್ಬರು ಸೋಂಕಿತರು ಮೃತಪಟ್ಟಿದ್ದಾರೆ.

ADVERTISEMENT

ಕೊರೊನಾ ಸೋಂಕು ಹರಡುವಿಕೆ ಮೇರೆ ಮೀರಿದ್ದು, ಹೊಸದಾಗಿ 778 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೋಲಾರ ತಾಲ್ಲೂಕಿನ 215 ಮಂದಿಗೆ, ಮಾಲೂರು ತಾಲ್ಲೂಕಿನ 188 ಮಂದಿಗೆ, ಬಂಗಾರಪೇಟೆ ತಾಲ್ಲೂಕಿನ 77 ಮಂದಿಗೆ, ಕೆಜಿಎಫ್‌ ತಾಲ್ಲೂಕಿನ 120 ಮಂದಿಗೆ, ಮುಳಬಾಗಿಲು ತಾಲ್ಲೂಕಿನ 85 ಮಂದಿಗೆ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ 93 ಮಂದಿಗೆ ಸೋಂಕು ಬಂದಿದೆ. ಇದರೊಂದಿಗೆ ಸಕ್ರಿಯ ಸೋಂಕಿತರ ಸಂಖ್ಯೆ 5,845ಕ್ಕೆ ಜಿಗಿದಿದೆ.

ಈ ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ. ಜಿಲ್ಲಾ ಕೇಂದ್ರದ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ಪೈಕಿ 152 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದರು.

ಕೋಲಾರ ತಾಲ್ಲೂಕಿನ 29 ಮಂದಿ, ಮಾಲೂರು ತಾಲ್ಲೂಕಿನ 25, ಬಂಗಾರಪೇಟೆ ತಾಲ್ಲೂಕಿನ 15, ಕೆಜಿಎಫ್‌ ತಾಲ್ಲೂಕಿನ 23, ಮುಳಬಾಗಿಲು ತಾಲ್ಲೂಕಿನ 6 ಮತ್ತು ಶ್ರೀನಿವಾಸಪುರ ತಾಲ್ಲೂಕಿನ 54 ಮಂದಿಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.