ಕೋಲಾರ: ‘ರಾಜ್ಯ ರಾಜಕಾರಣ ದುಸ್ಥಿತಿಯಲ್ಲಿದ್ದು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಕುರ್ಚಿ ಕಿತ್ತಾಟ ವಿಚಾರವಾಗಿ ಖರ್ಚು ಮಾಡಿಕೊಂಡು ಖಾಸಗಿ ವಿಮಾನದಲ್ಲಿ ಆಗಾಗ್ಗೆ ದೆಹಲಿಗೆ ಹೋಗಿ ಬರುತ್ತಿದ್ದಾರೆ. ಇಂತಹ ಕೆಟ್ಟ ಆಡಳಿತಕ್ಕಿಂತಲೂ ರಾಜ್ಯಪಾಲರ ಆಡಳಿತ ಬರುವುದೇ ಸೂಕ್ತ’ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ವಾಗ್ದಾಳಿ ನಡೆಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯ ಹಾಗೂ ಕೇಂದ್ರದಲ್ಲಿ ಸರ್ಕಾರಗಳು ಗಬ್ಬೆದ್ದು ಹೋಗಿವೆ. ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ವಿಚಾರದಲ್ಲಿ ಗೊಂದಲ ನಿರ್ಮಾಣವಾಗಿದೆ. ಇನ್ನು ಇ.ಡಿಗೆ ರಾಜ್ಯಕ್ಕೆ, ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕುತ್ತಿದೆ’ ಎಂದರು.
‘ರಾಜ್ಯದಲ್ಲಿ ಕಾಂಗ್ರೆಸ್‍ನ ಪ್ರತಿ ಶಾಸಕರಿಗೆ ₹50 ಕೋಟಿ ಅನುದಾನ ಕೊಟ್ಟು ಬಿಜೆಪಿ, ಜೆಡಿಎಸ್‌ನವರೆಗೆ ಕೇವಲ ₹25 ಕೋಟಿ ನೀಡಿ ತಾರತಮ್ಯ, ದ್ವೇಷ ರಾಜಕಾರಣ ಮಾಡಲಾಗುತ್ತಿದೆ. ಹಿಂದೆ ಬಿಜೆಪಿಯವರ ಅಧಿಕಾರದಲ್ಲಿದ್ದಾಗಲೂ ಇದೇ ರೀತಿ ಕೆಲಸ ಮಾಡಿದ್ದರು’ ಎಂದು ಹರಿಹಾಯ್ದರು.
‘ಕಾಂಗ್ರೆಸ್, ಬಿಜೆಪಿ ಕೋಮುವಾದ ಹಾಗೂ ಭ್ರಷ್ಟಾಚಾರ ವಿಚಾರದಲ್ಲಿ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಅಧಿಕಾರಿಗಳ ಮುಖೇನ ಹಣ ಲೂಟಿ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈಚೆಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಂಸ್ಥೆಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಸಣ್ಣ ಕಚೇರಿಯಿಂದ ಹಿಡಿದು ವಿಧಾನಸೌಧದವರೆಗೆ ಲಂಚ ಸಾಮಾನ್ಯವಾಗಿದ್ದು, ಬದಲಾವಣೆ ದೂರದೃಷ್ಟಿಯಿಂದ ಸಂಘಟನೆಗೆ ಮುಂದಾಗಿದ್ದೇವೆ’ ಎಂದರು.
‘ಕೋಲಾರವು ಮಾವು, ಟೊಮೆಟೊಗೆ ಖ್ಯಾತಿಯಾಗಿದೆ. ನಾವು ರೈತರ ಪರವಿದ್ದು ಮಾವು, ಟೊಮೆಟೊಗೆ ಸೂಕ್ತ ಬೆಂಬಲ ಬೆಲೆ ಸಿಗಬೇಕು. ಸಂಸ್ಕರಣಾ ಘಟಕ ಆಗಬೇಕು. ಅರಣ್ಯ ಒತ್ತುವರಿ ವಿರುದ್ಧ ಕ್ರಮ ಆಗಬೇಕು, ವೈದ್ಯಕೀಯ ಕಾಲೇಜು, ಕೈಗಾರಿಕಾ ವಲಯ ಆಗಬೇಕು. ಕೈಗಾರಿಕೆಗಳಿಗೆ ರೈತರ ಫಲವತ್ತಾದ ಭೂಮಿ ಸ್ವಾಧೀನ ಕೈಬಿಟ್ಟು ಬೆಂಗಳೂರಿನಾಚೆಯ ಜಿಲ್ಲೆಗಳಲ್ಲಿನ ವ್ಯರ್ಥ ಭೂಮಿಗಳಲ್ಲಿ ಜಾಗ ಒದಗಿಸಿಕೊಡಬೇಕು’ ಎಂದು ಆಗ್ರಹಿಸಿದರು.
‘ಸಣ್ಣ ಪುಟ್ಟ ಅಂಗಡಿ ಮಾಲೀಕರಿಗೆ ಜಿಎಸ್‌ಟಿ ಹಾಕಿ ದುರಂತ ಮಾಡಿಟ್ಟಿದ್ದಾರೆ. ಈ ಶೋಷಣೆಯನ್ನು ನಾನು ಖಂಡಿಸುತ್ತೇನೆ’ ಎಂದರು.
ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ ಗುಂಡಪ್ಪ ಮಾತನಾಡಿ, ‘ಬೇರು ಮಟ್ಟದಿಂದ ಪಕ್ಷ ಕಟ್ಟುತ್ತಿದ್ದು, ಈ ಚುನಾವಣೆಯಲ್ಲಿ ಉತ್ತಮ ಕೆಲಸ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ’ ಎಂದು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟಾಚಲಪತಿ ಮಾತನಾಡಿ, ‘ಕಾರ್ಯಕರ್ತರನ್ನು ಒಟ್ಟುಗೂಡಿಸುತ್ತಿದ್ದೇವೆ, ಹೋರಾಟ ಮಾಡುತ್ತಿದ್ದೇವೆ. ಜನಪರವಾಗಿ ನಿಲ್ಲುತ್ತೇವೆ, ನಿರಂತರ ಕೆಲಸ ಮಾಡುತ್ತೇವೆ’ ಎಂದರು.
ಇದೇ ವೇಳ ಪಕ್ಷಕ್ಕೆ ಸೇರ್ಪಡೆಗೊಂಡ ನವಾಜ್ ಅವರನ್ನು ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಯುವ ಘಟಕದ ಅಧ್ಯಕ್ಷ ಲೋಹಿತ್ ಕುಮಾರ್, ರಾಜ್ಯ ಮುಖಂಡರಾದ ಸುರೇಶ್, ಉಷಾ ಮೋಹನ್, ರವಿಕುಮಾರ್, ನಾಗರಾಜ್ ಇದ್ದರು.
ವಿರೋಧ ಪಕ್ಷ ಸಂಪೂರ್ಣ ನಿಷ್ಕ್ರಿಯ
‘ರಾಜ್ಯದಲ್ಲಿ ವಿರೋಧ ಪಕ್ಷ ಸಂಪೂರ್ಣ ನಿಷ್ಕ್ರಿಯವಾಗಿದೆ. ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಇನ್ನು ಬಿಜೆಪಿ ಜೊತೆ ಸೇರಿಕೊಂಡಿರುವ ಜೆಡಿಎಸ್ ಪಕ್ಷದ ಅಂತ್ಯ ಸನಿಹವಾಗುತ್ತಿದೆ’ ಎಂದು ‘ಮುಖ್ಯಮಂತ್ರಿ’ ಚಂದ್ರು ತರಾಟೆಗೆ ತೆಗೆದುಕೊಂಡರು. ‘ಮೇಕೆದಾಟು ಮಹದಾಯಿ ಕೃಷ್ಣಾ ವಿಚಾರಗಳಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ. ರಾಜ್ಯದ ಹಿತ ಬಂದಾಗ ಇನ್ನಿತರ ಸಮಸ್ಯೆ ಬಂದಾಗ ಧ್ವನಿ ಎತ್ತುವ ಕೆಲಸ ಮಾಡಬೇಕಿತ್ತು. ಆದರೆ ವಿರೋಧ ಪಕ್ಷವಾಗಿರುವ ಬಿಜೆಪಿ ವಿಫಲವಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೂಡ ಮೋಸ ಮಾಡುತ್ತಿದೆ. ಮಹದಾಯಿ ವಿಚಾರದಲ್ಲಿ ಗೋವಾ ಕ್ಯಾತೆ ತೆಗೆದಿದೆ. ರಾಜ್ಯ ಸರ್ಕಾರ ಧ್ವನಿ ಎತ್ತಿದ್ದು ನಾವೂ ಸ್ಪಂದಿಸಿದ್ದೇವೆ. ಆದರೆ ರಾಜ್ಯದಲ್ಲಿ ಅಷ್ಟೊಂದು ಬಿಜೆಪಿ ಸಂಸದರಿದ್ದು ಪ್ರಧಾನಿಗೆ ಹಕ್ಕೊತ್ತಾಯ ಮಾಡಬೇಕಿತ್ತು’ ಎಂದರು.
17 ವಾರ್ಡ್‌ಗಳಲ್ಲೂ ಎಎಪಿ ಸ್ಪರ್ಧೆ
ಕೋಲಾರ ತಾಲ್ಲೂಕಿನ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಎಲ್ಲಾ 17 ವಾರ್ಡ್‍ಗಳಿಗೆ ಆಮ್ ಆದ್ಮಿ ಪಕ್ಷವು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ‘ಮುಖ್ಯಮಂತ್ರಿ’ ಚಂದ್ರು ತಿಳಿಸಿದರು. ‘ನಮ್ಮದು ಸಾಮಾನ್ಯ ಜನರ ಪಕ್ಷವಾಗಿದ್ದು ಸಾಮಾನ್ಯ ಅಭ್ಯರ್ಥಿಗಳನ್ನೇ ಘೋಷಿಸಲಾಗುವುದು. ಬೇರೆ ಪಕ್ಷದವರು ಮತದಾನಕ್ಕಿಂತ 2 ದಿನ ಮೊದಲೇ ಕೆಲಸ ಮಾಡಿ ಗೆಲ್ಲುವ ಆರ್ಥಿಕ ಶಕ್ತಿ ಹೊಂದಿದ್ದು ನಾವು ಈಗಿಂದಲೇ ಕೆಲಸ ಪ್ರಾರಂಭ ಮಾಡುತ್ತೇವೆ’ ಎಂದರು. ‘ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ನಮ್ಮ ಪಕ್ಷ ಬೆಳೆಸಲು ಪಣ ತೊಟ್ಟಿದ್ದು ಜಾತ್ಯತೀತ ಭ್ರಷ್ಟಾಚಾರ ಮುಕ್ತ ಶಿಕ್ಷಣ ಆರೋಗ್ಯ ಉಚಿತವಾಗಿ ನೀಡಬೇಕು ಎನ್ನುವುದು ನಮ್ಮ ಧ್ಯೇಯವಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.