ADVERTISEMENT

ಮದ್ಯ ನಿಷೇಧ: ಆದೇಶ ಹಿಂಪಡೆಯುವುದಿಲ್ಲ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 14:19 IST
Last Updated 1 ಏಪ್ರಿಲ್ 2020, 14:19 IST

ಕೋಲಾರ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಏ.14ರವರೆಗೆ ಮದ್ಯ ಮಾರಾಟ ಮತ್ತು ಸಾಗಣೆ ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ ಈ ಆದೇಶ ಹಿಂಪಡೆಯುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ತಿಳಿಸಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೇರಳ ರಾಜ್ಯದಲ್ಲಿ ಮದ್ಯ ಸೇವನೆ ಚಟ ಇರುವವರಿಗೆ ಮಾತ್ರ ವೈದ್ಯರ ಶಿಫಾರಸ್ಸಿನ ಮೇಲೆ ಮದ್ಯ ನೀಡಲು ನಿರ್ಧರಿಸಲಾಗಿತ್ತು. ಆದರೆ, ವೈದ್ಯರು ಶಿಫಾರಸು ಪತ್ರ ನೀಡಲು ನಿರಾಕರಿಸಿದರು. ಹೀಗಾಗಿ ಮದ್ಯ ನೀಡುವ ನಿರ್ಧಾರ ಕೈಬಿಡಲಾಯಿತು. ಮದ್ಯ ಸೇವನೆ ಚಟ ಇರುವವರು ತಾಳ್ಮೆಯಿಂದ ಇರಬೇಕು’ ಎಂದು ಮನವಿ ಮಾಡಿದರು.

‘ಕೊರೊನಾ ಸೋಂಕಿನ ಕಾರಣಕ್ಕೆ ದೇಶದೆಲ್ಲೆಡೆ ದಿಗ್ಬಂಧನ ಜಾರಿಯಲ್ಲಿದೆ. ಜಿಲ್ಲೆಯ ಜನ ಏ.14ರವರೆಗೆ ಮನೆಗಳಲ್ಲೇ ಇದ್ದು, ಭಾರತವನ್ನು ಕೋವಿಡ್‌–19 ಮುಕ್ತ ದೇಶವಾಗಿ ಮಾಡಲು ಸಹಕರಿಸಬೇಕು. ಸೋಂಕು ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಕಾರ್ಯಪಡೆ ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲೆಯು ತಮಿಳುನಾಡು ಮತ್ತು ಆಂಧ್ರಪ್ರದೇಶದ ಗಡಿಯಲ್ಲಿದ್ದು, ಗಡಿ ಭಾಗಗಳಲ್ಲಿ ಚೆಕ್‌ಪೋಸ್ಟ್‌ ತೆರೆಯಲಾಗಿದೆ’ ಎಂದು ವಿವರಿಸಿದರು.

ADVERTISEMENT

ತರಕಾರಿ ಪೂರೈಕೆ: ‘ಜಿಲ್ಲೆಯ ಜನರ ಮನೆ ಬಾಗಿಲಿಗೆ ತರಕಾರಿ, ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ದಿಗ್ಬಂಧನದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಹಲವು ಸೌಲಭ್ಯ ಮತ್ತು ರಿಯಾಯಿತಿ ಘೋಷಿಸಿವೆ. ಜಿಲ್ಲೆಯ ರೈತರು ಬೆಳೆದಿರುವ ತರಕಾರಿಗಳು ವ್ಯರ್ಥವಾಗದಂತೆ ಬೇರೆ ಜಿಲ್ಲೆಗಳಿಗೆ ಸರಬರಾಜು ಮಾಡಲು ವ್ಯವಸ್ಥೆ ಮಾಡುತ್ತೇವೆ’ ಎಂದು ಸಂಸದ ಎಸ್‌.ಮುನಿಸ್ವಾಮಿ ಭರವಸೆ ನೀಡಿದರು.

‘ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಸ್ತೆಗಳಲ್ಲಿ ಜನರ ಕಡಿಮೆಯಾಗಿರುವುದರಿಂದ ರಾಸಾಯನಿಕ ಹೊಗೆ ಸಿಂಪಡಣೆ ಮಾಡಿಸಲಾಗುತ್ತಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.