ಟೇಕಲ್: ಕೆ.ಜಿ.ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂತಮ್ಮ ಬೆಟ್ಟದ ತಪ್ಪಲಿನಲ್ಲಿ ಸದ್ಯ ಯಾವುದೇ ಯಂತ್ರೋಪಕರಣ ಬಳಸದೆ ಕಲ್ಲು ಒಡೆಯಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರದಿಂದ ಮುಂದಿನ ಸೂಚನೆ ಬರುವವರೆಗೂ ಯಂತ್ರೋಪಕರಣ ಬಳಸಿ ಕಲ್ಲು ಒಡೆಯುವ ಕೆಲಸ ಮಾಡಬಾರದು ಎಂದು ಶಾಸಕ ಕೆ. ವೈ ನಂಜೇಗೌಡ ಹೇಳಿದರು.
ಬುಧವಾರ ಕಲ್ಲು ಕುಟಿಗರು ಮತ್ತು ತಾಲ್ಲೂಕು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿಯಮ ಮತ್ತು ಟಾಸ್ಕ್ ಫೋರ್ಸ್ ಮಾರ್ಗಸೂಚಿ ಅನುಸಾರ ಮುಂದಿನ ದಿನಗಳಲ್ಲಿ ಸಣ್ಣಪುಟ್ಟ ಯಂತ್ರೋಪಕರಣ ಬಳಸಲು ಕಲ್ಪಿಸಲಾಗುವುದು. ಬ್ಲಾಕ್ ಹಂಚಿಕೆ ವೇಳೆ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಸಾಂಪ್ರದಾಯಿಕ ಕಲ್ಲು ಕುಟಿಗ ವೃತ್ತಿಯವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾನೂನು ವ್ಯಾಪ್ತಿಯಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಚಿವರು ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ ಎಂದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜಿಲ್ಲಾ ಹಿರಿಯ ಅಧಿಕಾರಿ ರಾಜೇಶ್, ತಹಶೀಲ್ದಾರ್ ಕೆ.ರಮೇಶ್, ಅರಣ್ಯ ಸಂರಕ್ಷಣಾಧಿಕಾರಿ ಧನಲಕ್ಷ್ಮಿ , ಸರ್ಕಲ್ ಇನ್‌ಸ್ಪೆಕ್ಟರ್ ವಸಂತ್ ಕುಮಾರ್, ಸುನಿಲ್ ಕುಮಾರ್, ರಮೇಶ್ ಗೌಡ, ವಿನೋದ್ ಗೌಡ, ಕೆ.ಎಸ್.ವೆಂಕಟೇಶ್ ಗೌಡ, ಎಸ್.ಜಿ. ರಾಮಮೂರ್ತಿ, ಪ್ರಗತಿ ಶ್ರೀನಿವಾಸ್ ಮತ್ತು ಕಲ್ಲು ಕುಟಿಗರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.