ADVERTISEMENT

ನಾಳೆ ಅಂಬೇಡ್ಕರ್‌ ಪುಸ್ತಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 9:16 IST
Last Updated 5 ಡಿಸೆಂಬರ್ 2019, 9:16 IST

ಕೋಲಾರ: ‘ಅಂಬೇಡ್ಕರ್‌ರ 63ನೇ ಪರಿನಿರ್ವಾಣ ದಿನದ ಅಂಗವಾಗಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಡಿ.6ರಂದು ಅಂಬೇಡ್ಕರ್ ಮತ್ತು ಅವರ ಪುಸ್ತಕಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬುಡ್ಡಿ ದೀಪ ಪ್ರಕಾಶನವು ಆಯೋಜಿಸಿರುವ ಈ ಪ್ರದರ್ಶನದಲ್ಲಿ ಅಂಬೇಡ್ಕರ್‌ರಿಂದ ಹಾಗೂ ಅಂಬೇಡ್ಕರ್‌ಗೆ ಸಂಬಂಧಿಸಿದಂತೆ ರಚನೆಯಾಗಿರುವ ಪುಸ್ತಕಗಳಲ್ಲಿ ಕೆಲವನ್ನು ಸಂಗ್ರಹಿಸಿ ಪ್ರದರ್ಶಿಸಲಾಗುವುದು’ ಎಂದು ಹೇಳಿದರು.

‘ಜಾತಿ, ಮತ, ರಾಷ್ಟ್ರೀಯತೆ ಆಚೆಗೆ ಅಂಬೇಡ್ಕರ್‌ ಚಿಂತನೆ ನಂಬಿರುವ ಯಾರೇ ಆಗಲಿ ತಮ್ಮ ಸಂಗ್ರಹದಲ್ಲಿರುವ ಕೃತಿಗಳನ್ನು ತಂದು ಬೆಳಿಗ್ಗೆ 10.30ರಿಂದ ಸಂಜೆ 6 ಗಂಟೆವರೆಗೆ ಪ್ರದರ್ಶಿಸಿ ಮರಳಿ ಕೊಂಡೊಯ್ಯಬಹುದು. ಅಂಬೇಡ್ಕರ್‌ ಪುಸ್ತಕ ಪ್ರಪಂಚ ಕುರಿತು ಮಾತನಾಡಬಹುದು. ಇದಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.

ADVERTISEMENT

‘ಬೆಳಿಗ್ಗೆ 10.30ರಿಂದ ಸಂಜೆ 6ರವರೆಗೆ ಪುಸ್ತಕ ಪ್ರದರ್ಶನ, ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1.30ರವರೆಗೆ ರಕ್ತದಾನ ಶಿಬಿರ, ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ವಿಚಾರ ಸಂಕಿರಣ ನಡೆಯುತ್ತದೆ. ಮೈಸೂರಿನ ಉರಿಲಿಂಗಿ ಪೆದ್ದಿಮಠದ ಜ್ಞಾನ ಪ್ರಕಾಶ್‌ ಸ್ವಾಮೀಜಿಯು ಅಂಬೇಡ್ಕರ್‌ರ ಕೊನೆ ದಿನಗಳ ಕುರಿತು ವಿಷಯ ಮಂಡಿಸುತ್ತಾರೆ’ ಎಂದು ವಿವರಿಸಿದರು.

‘ಅಂಬೇಡ್ಕರ್‌ರ ಬರವಣಿಗೆ ಮತ್ತು ಚಿಂತನೆ ಬಹು ರೂಪೀಕರಣ, ಇವತ್ತಿನ ಚಾರಿತ್ರಿಕ ಜರೂರು ಕುರಿತು ನಾನು ವಿಷಯ ಮಂಡಿಸುತ್ತೇನೆ. ಉಪ ವಿಭಾಗಾಧಿಕಾರಿ ವಿ.ಸೋಮಶೇಖರ್, ದಲಿತ ಮುಖಂಡ ರಾಜಪ್ಪ ಅತಿಥಿಗಳಾಗಿ ಭಾಗವಹಿಸುತ್ತಾರೆ. 2020ರ ಜ.20ರೊಳಗೆ ‘ನಮ್ಮ ಅಂಬೇಡ್ಕರ್’ ನಾಟಕವನ್ನು ಪ್ರದರ್ಶಿಸಲು ಸಿದ್ಧತೆ ನಡೆದಿದ್ದು, ಈ ನಾಟಕ ರಾಜ್ಯದ ೩೦ ಜಿಲ್ಲೆ ಹಾಗೂ ದೇಶ ವಿದೇಶದಲ್ಲಿ ಪ್ರದರ್ಶನಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.

‘ಅಂಬೇಡ್ಕರ್ ಚಿಂತನೆಗಳಿಂದ ಮಾತ್ರ ಭಾರತವನ್ನು ಸದೃಢ ರಾಷ್ಟ್ರವಾಗಿ ಉಳಿಸಬಹುದು. ಅದಕ್ಕಾಗಿ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಹೇಳಿದರು.

ತೆರೆದ ವಿಶ್ವವಿದ್ಯಾಲಯ: ‘ಬದುಕಿದ್ದ ಅಂಬೇಡ್ಕರ್‌ಗಿಂತಲೂ ಬದುಕಿಲ್ಲದ ಅಂಬೇಡ್ಕರ್‌ರು ಸಾಕಷ್ಟು ಬಲಾಢ್ಯರಾಗಿದ್ದಾರೆ. ಅಂಬೇಡ್ಕರ್‌ ತೆರೆದ ವಿಶ್ವವಿದ್ಯಾಲಯವಿದ್ದಂತೆ. ದೇಶದಲ್ಲಿರುವ ಅವರ ಒಂದೊಂದು ಪ್ರತಿಮೆಯೂ ಪುಸ್ತಕಗಳಿದ್ದಂತೆ’ ಎಂದು ಚಿಂತಕ ಶಂಕರ್ ಬಣ್ಣಿಸಿದರು.

ಕೆಪಿಟಿಸಿಎಲ್‌ ಪರಿಶಿಷ್ಟ ಜಾತಿ ಮತ್ತು ವರ್ಗಗಳ ನೌಕರರ ಕಲ್ಯಾಣ ಸಂಸ್ಥೆ ಸದಸ್ಯರಾದ ಎನ್.ವೆಂಕಟೇಶ್, ಮುನೇಶ್, ದಲಿತ ಮುಖಂಡರಾದ ರಾಜಪ್ಪ, ಅಶ್ವತ್ಥನಾರಾಯಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.