ADVERTISEMENT

ಅಂಬೇಡ್ಕರ್ ದೇಶದ ಆಶಾಕಿರಣ: ಜಿಲ್ಲಾಧಿಕಾರಿ ಮಂಜುನಾಥ್‌ ಬಣ್ಣನೆ

ಪರಿನಿರ್ವಾಣ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 13:00 IST
Last Updated 6 ಡಿಸೆಂಬರ್ 2019, 13:00 IST
ಕೋಲಾರದಲ್ಲಿ ಶುಕ್ರವಾರ ನಡೆದ ಅಂಬೇಡ್ಕರ್‌ರ ಪರಿನಿರ್ವಾಣ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹಾಗೂ ಗಣ್ಯರು ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಕೋಲಾರದಲ್ಲಿ ಶುಕ್ರವಾರ ನಡೆದ ಅಂಬೇಡ್ಕರ್‌ರ ಪರಿನಿರ್ವಾಣ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹಾಗೂ ಗಣ್ಯರು ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.   

ಕೋಲಾರ: ‘ಶೋಷಿತರ ಭವಿಷ್ಯ ಉಜ್ವಲಗೊಳಿಸಿದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ದೇಶದ ಆಶಾಕಿರಣ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಸ್ಮರಿಸಿದರು.

ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಇಲ್ಲಿ ಶುಕ್ರವಾರ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ‘ಅಪರೂಪದ ವ್ಯಕ್ತಿತ್ವ ಹಾಗೂ ಸರಸ್ವತಿ ಸಂಪತ್ತು ಹೊಂದಿದ್ದ ಅಂಬೇಡ್ಕರ್‌ ದೇಶದಲ್ಲಿ ಜನಿಸದಿದ್ದರೆ ದಲಿತರು ನಿರ್ಭಯವಾಗಿ ಬದುಕಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಜಗತ್ತಿನಲ್ಲಿ ಅಂಬೇಡ್ಕರ್‌ ಹೆಸರು ಎಲ್ಲರಿಗೂ ಚಿರಪರಿಚಿತ. ದೇಶದ ಅಸ್ತಿತ್ವ ಇರುವವರೆಗೂ ಅವರ ಹೆಸರು ಪ್ರಚಲಿತ. ಅವರ ರಚನೆಯ ಸಂವಿಧಾನವನ್ನು ಗೌರವಿಸುವುದು ಪಾಲಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಭಾರತದಂತಹ ಬಲಿಷ್ಠ ರಾಷ್ಟ್ರ ಕಟ್ಟುವಲ್ಲಿ ಸಂವಿಧಾನದ ಆಶಯ ಮಹತ್ವದ್ದು. ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ರ ಪರಿಶ್ರಮದ ಬಗ್ಗೆ ಇಡೀ ದಿನ ಮಾತನಾಡಿದರೂ ಸಾಲದು’ ಎಂದು ಬಣ್ಣಿಸಿದರು.

ADVERTISEMENT

‘ಪ್ರಕೃತಿಯು ಎಲ್ಲರಿಗೂ ಗಾಳಿ, ಬೆಳಕು, ನೀರನ್ನು ಸಮನಾಗಿ ನೀಡಿದ್ದರೂ ಜಾತೀಯತೆ, ಮೌಢ್ಯತೆ, ಮೈಲಿಗೆ ಹೆಸರಿನಲ್ಲಿ ದಲಿತರನ್ನು ಶೋಷಿಸಲಾಗುತ್ತಿತ್ತು. ಅಂಬೇಡ್ಕರ್ ದೌರ್ಜನ್ಯಕ್ಕೆ ಒಳಗಾದವರಿಗೆ ಮತ್ತು ಅವಮಾನ ಅನುಭವಿಸಿದವರ ಪರವಾಗಿ ದೊಡ್ಡ ಕ್ರಾಂತಿ ಮಾಡಿ ಸಮಾನತೆಯ ಅರಿವು ಮೂಡಿಸಿದರು. ಅವರ ಶ್ರಮದಿಂದ ಬದಲಾವಣೆ ಪರ್ವ ಆರಂಭವಾಗಿ ಸುಧಾರಣೆ ಕಾಣುವಂತಾಯಿತು’ ಎಂದು ಹೇಳಿದರು.

‘ಶೋಷಿತರು ಅನುಭವಿಸಿದ ನೋವು ಗಮನಿಸಿದ ಅಂಬೇಡ್ಕರ್ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ದೊರೆಯಬೇಕೆಂಬ ಉದ್ದೇಶದಿಂದ ಸಂವಿಧಾನ ರಚಿಸಿದರು. ಆ ಸಂವಿಧಾನದಿಂದಲೇ ಪ್ರತಿಯೊಬ್ಬರು ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಅಂಬೇಡ್ಕರ್‌ ವಿಚಾರಧಾರೆ ಸ್ವಚ್ಛ ಸಮಾಜಕ್ಕೆ ಪೂರಕ. ದೇಶದ ಪ್ರಜೆಗಳು ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಸೇವೆ ಸ್ಮರಿಸಬೇಕು: ‘ಅಂಬೇಡ್ಕರ್ ರಚನೆಯ ಪುಸ್ತಕಗಳನ್ನು ಓದಿದರೆ ಮಾತ್ರ ಅವರ ವಿಚಾರಧಾರೆ ತಿಳಿಯಲು ಸಾಧ್ಯ. ಅವರು ಚಿಕ್ಕ ವಯಸ್ಸಿನಲ್ಲೇ ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆ ಮಾಡಿದರು. ಪ್ರತಿ ಪ್ರಜೆಗೂ ಸಮಾನ ಹಕ್ಕು ಕಲ್ಪಿಸುವುದರಿಂದ ಹಿಡಿದು ಜೀವನ ನಡೆಸಲು ಅಗತ್ಯ ಸೌಕರ್ಯಗಳನ್ನು ಕಾನೂನಿನ ಅಡಿಯಲ್ಲಿ ಪಡೆಯುವುದನ್ನು ತೋರಿಸಿಕೊಟ್ಟರು. ಪ್ರತಿಯೊಬ್ಬರು ಅವರ ಸೇವೆ ಸ್ಮರಿಸಬೇಕು’ ಎಂದು ತಿಳಿಸಿದರು.

‘ಅಂಬೇಡ್ಕರ್‌ ಹಲವು ಜಾತಿ, ಭಾಷೆ, ಧರ್ಮ, ಪಂಗಡ ಒಳಗೊಂಡ ರಾಷ್ಟ್ರದಲ್ಲಿ ವಿವಿಧತೆಯಲ್ಲಿ ಏಕತೆ ಮೂಡಿಸಿದರು. ದೇಶದ ಪ್ರಗತಿ ಹಾಗೂ ಪ್ರಜೆಗಳಿಗೆ ಸಮಾನತೆ ತಂದುಕೊಟ್ಟ ಮಹಾನ್‌ ವ್ಯಕ್ತಿ. ಅವರು ರಚಿಸಿದ ನೀಡಿದ ಸಂವಿಧಾನದ ಅಡಿಯಲ್ಲಿ ದೇಶದ ವ್ಯವಸ್ಥೆ ನಡೆಯುತ್ತಿದೆ. ಅವರ ತತ್ವಾದರ್ಶ ಭಾಷಣಕ್ಕೆ ಸೀಮಿತಗೊಳಿಸದೆ ನಡವಳಿಕೆ ಮತ್ತು ಸಂಸ್ಕೃತಿಯಾಗಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪುಷ್ಪನಮನ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್‌.ವಿ.ದರ್ಶನ್‌ ಸೇರಿದಂತೆ ಹಲವು ಅಧಿಕಾರಿಗಳು ನಚಿಕೇತನ ವಿದ್ಯಾರ್ಥಿನಿಲಯ ಆವರಣದಲ್ಲಿನ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಟಿ.ಚನ್ನಯ್ಯ ರಂಗಮಂದಿರದಲ್ಲಿ ಗಣ್ಯರು ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಡಿವೈಎಸ್ಪಿ ಆರ್.ವಿ.ಚೌಡಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಾಜಣ್ಣ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಾಜಿ, ನಗರಸಭೆ ಸದಸ್ಯರಾದ ಅಂಬರೀಶ್, ಎನ್.ಅಪೂರ್ವ, ಆಯುಕ್ತ ಶ್ರೀಕಾಂತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.