ADVERTISEMENT

ಮಹನೀಯರ ಆದರ್ಶಗಳ ಅರಿವು ಮೂಡಿಸಿ: ಶಾಸಕಿ ಎಂ.ರೂಪಕಲಾ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 14:43 IST
Last Updated 28 ಏಪ್ರಿಲ್ 2025, 14:43 IST
ಕೆಜಿಎಫ್‌ ತಾಲ್ಲೂಕು ಆಡಳಿತ ಸೌಧದಲ್ಲಿ ಸೋಮವಾರ ನಡದ ಬಸವ ಮತ್ತು ಶಂಕರಾಚಾರ್ಯರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಶಾಸಕಿ ಎಂ.ರೂಪಕಲಾ ಮಾತನಾಡಿದರು. ತಹಶೀಲ್ದಾರ್‌ ಕೆ.ನಾಗವೇಣಿ, ಆಯುಕ್ತ ಪವನ್‌ಕುಮಾರ್‌ ಇತರರು ಇದ್ದರು
ಕೆಜಿಎಫ್‌ ತಾಲ್ಲೂಕು ಆಡಳಿತ ಸೌಧದಲ್ಲಿ ಸೋಮವಾರ ನಡದ ಬಸವ ಮತ್ತು ಶಂಕರಾಚಾರ್ಯರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಶಾಸಕಿ ಎಂ.ರೂಪಕಲಾ ಮಾತನಾಡಿದರು. ತಹಶೀಲ್ದಾರ್‌ ಕೆ.ನಾಗವೇಣಿ, ಆಯುಕ್ತ ಪವನ್‌ಕುಮಾರ್‌ ಇತರರು ಇದ್ದರು   

ಕೆಜಿಎಫ್‌: ಎಲ್ಲಾ ಮಹನೀಯರ ಸಾಧನೆಗಳನ್ನು ಗುರುತಿಸಿ, ಗೌರವಿಸಬೇಕು. ಅವರ ಆದರ್ಶಗಳನ್ನು ಸಮಾಜಕ್ಕೆ ಪರಿಚಯಿಸಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪೂರ್ವಭಾವಿ ಸಭೆಗಳನ್ನು ಕನಿಷ್ಠ ಹತ್ತು ದಿನ ಮೊದಲೇ ಕರೆಯಬೇಕು. ಇದರಿಂದಾಗಿ ಸಿದ್ಧತೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.

ತಾಲ್ಲೂಕು ಆಡಳಿತ ಸೌಧದಲ್ಲಿ ಸೋಮವಾರ ನಡೆದ ಬಸವ ಮತ್ತು ಶಂಕರಾಚಾರ್ಯರ ಜಯಂತಿಯಲ್ಲಿ ಮಾತನಾಡಿದರು. ಈ ಸಲ ಈ ಇಬ್ಬರು ಮಹನೀಯರ ಜಯಂತಿ ಸಿದ್ಧತೆಗೆ ಸಾಕಷ್ಟು ಸಮಯಾವಕಾಶ ಇರಲಿಲ್ಲ. ಮುಂದಿನ ದಿನಗಳಲ್ಲಿ ಮಹನೀಯರ ಜಯಂತಿ ಸಂಬಂಧವಾಗಿ ಪೂರ್ವಭಾವಿ ಸಭೆಯನ್ನು ಕೊನೆಪಕ್ಷ ಹತ್ತು ದಿನಗಳ ಮೊದಲೇ ಕರೆಯಲಾಗುತ್ತದೆ. ಇದರಿಂದಾಗಿ ಸಿದ್ಧತೆಗೆ ಅನುಕೂಲವಾಗಲಿದೆ. ಈ ಬಾರಿ ಆದ ಲೋಪ ಮುಂದಿನ ದಿನಗಳಲ್ಲಿ ಆಗುವುದಿಲ್ಲ ಎಂದು ಹೇಳಿದರು.

ವೀರಶೈವ ಸಮಾಜದ ಮುಖಂಡ ಬಾ.ಹಾ.ಶೇಖರಪ್ಪ, ಅಶೋಕ್‌ ಲೋಣಿ, ಕುಬೇರಪ್ಪ, ಸುರೇಶ್‌ ಹೂಗಾರ ಮಾತನಾಡಿ, ಸಾಂಸ್ಕೃತಿಕ ನಾಯಕ ಬಸವಣ್ಣನ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಬೇಕು. ಅವರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಕಬೇಕು. ಬೆಮಲ್‌ ಬಸವ ಸಮಿತಿಗೆ ಅನುದಾನ ಕೊಡಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಶಂಕರಾಚಾರ್ಯ ಜಯಂತಿಗೆ ಮೊದಲು ಸರ್ಕಾರ ಅನುದಾನ ಕೊಡುತ್ತಿತ್ತು. ಕಳೆದ ಬಾರಿ ಕೊಡಲಿಲ್ಲ. ಈ ಬಾರಿಯಾದರೂ ಅನುದಾನ ನೀಡಬೇಕು ಎಂದು ಅರ್ಚಕರ ಸಂಘದ ಮುಖಂಡ ಗುರು ದೀಕ್ಷಿತ್‌ ಮನವಿ ಮಾಡಿದರು. ಶಂಕರಮಠ ಶಿಥಿಲವಾಗಿದೆ. ಅದನ್ನು ದುರಸ್ತಿ ಮಾಡಲು ಶಾಸಕರ ನಿಧಿಯಿಂದ ಹಣ ಬಿಡುಗಡೆ ಮಾಡಬೇಕು ಎಂದು ನಾಗೇಂದ್ರ ಕೋರಿದರು.

ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಉಪಾಧ್ಯಕ್ಷ ಜರ್ಮನ್‌ ಜೂಲಿಯಸ್‌, ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ, ತಹಶೀಲ್ದಾರ್‌ ಕೆ.ನಾಗವೇಣಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವೆಂಕಟೇಶಪ್ಪ, ಆಯುಕ್ತ ಪವನ್‌ಕುಮಾರ್‌, ಇನ್‌ಸ್ಪೆಕ್ಟರ್‌ ನವೀನ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಗಳಾದ ಶಿವಕುಮಾರ್‌, ರಾಜಶೇಖರ್‌, ಹೇಮಲತಾ, ಮಂಜುನಾಥ್‌, ಹೇಮಲತಾ, ಅಶ್ವಥ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.