ADVERTISEMENT

ಸಮಾಜದ ಅಭ್ಯುದಯಕ್ಕಾಗಿ ಸಂವಿಧಾನ ರಚನೆ

ಕೆಜಿಎಫ್‌ನಲ್ಲಿ ಬಿಜೆಪಿಯಿಂದ ನಡೆದ ಭೀಮನಡೆ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ ಸಿಂಹ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 5:35 IST
Last Updated 12 ಡಿಸೆಂಬರ್ 2025, 5:35 IST
ಕೆಜಿಎಫ್‌ ರಾಬರ್ಟಸನ್‌ಪೇಟೆಯಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರು ಭೀಮ ನಡೆ ಕಾರ್ಯಕ್ರಮದಡಿಯಲ್ಲಿ ಮೆರವಣಿಗೆ ನಡೆಸಿದರು. ಮಾಜಿ ಸಂಸದರಾದ ಪ್ರತಾಪ್‌ ಸಿಂಹ, ಎಸ್‌.ಮುನಿಸ್ವಾಮಿ ಇತರರು ಇದ್ದರು 
ಕೆಜಿಎಫ್‌ ರಾಬರ್ಟಸನ್‌ಪೇಟೆಯಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರು ಭೀಮ ನಡೆ ಕಾರ್ಯಕ್ರಮದಡಿಯಲ್ಲಿ ಮೆರವಣಿಗೆ ನಡೆಸಿದರು. ಮಾಜಿ ಸಂಸದರಾದ ಪ್ರತಾಪ್‌ ಸಿಂಹ, ಎಸ್‌.ಮುನಿಸ್ವಾಮಿ ಇತರರು ಇದ್ದರು    

ಕೆಜಿಎಫ್‌: ಅಂಬೇಡ್ಕರ್‌ ಅವರು ದಲಿತರಿಗೆ ಅನುಕೂಲವಾಗುವಂತೆ ಸಂವಿಧಾನ ರಚನೆ ಮಾಡಿದ್ದಾರೆ ಎಂಬ ಭಾವನೆ ಬೇಡ. ಇಡೀ ಮನುಕುಲದ ಎಲ್ಲಾ ಸಮುದಾಯದ ಅಭ್ಯುದಯಕ್ಕಾಗಿ ಸಂವಿಧಾನ ರಚಿಸಲಾಗಿದೆ ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪ ಸಿಂಹ ಅಭಿಪ್ರಾಯಪಟ್ಟರು.

ರಾಬರ್ಟಸನ್‌ಪೇಟೆಯಲ್ಲಿ ಗುರುವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ ಸಂವಿಧಾನ ಜಾಗೃತಿಗಾಗಿ ಭೀಮ ನಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮಶಾಸ್ತ್ರ ಒಪ್ಪುವುದಿಲ್ಲ ಎಂದು ಮಹಾರಾಷ್ಟ್ರದ ದೇವಾಲಯದೊಳಗೆ ಅಸ್ಪಶೃರನ್ನು ಒಳಗೆ ಬಿಡದಿದ್ದಾಗ ಅಂಬೇಡ್ಕರ್‌ ಅವರು ಏಳು ವರ್ಷಗಳ ಕಾಲ ಸಂಸ್ಕೃತ ವಿದ್ವಾಂಸರಿಂದ ಸಂಸ್ಕೃತ ಕಲಿತು. ಧರ್ಮಶಾಸ್ತ್ರದಲ್ಲಿ ದಲಿತರಿಗೆ ಪ್ರವೇಶ ಮಾಡುವುದನ್ನು ಎಲ್ಲಿಯೂ ನಿಷೇಧಿಸಿಲ್ಲ ಎಂದು ಪ್ರತಿಪಾದಿಸಿದರು. ಹುಟ್ಟು ಯಾವುದೇ ಜನಾಂಗದಲ್ಲಿ ಆಗಲಿ, ಜ್ಞಾನ ಪಡೆದವರು ಸಂಸ್ಕಾರ ಪಡೆಯುತ್ತಾರೆ. ವಾಲ್ಮೀಕಿ, ಕೃಷ್ಣ, ವಿಶ್ವಾಮಿತ್ರ, ವಿವೇಕಾನಂದ, ಮೊದಲಾದವರು ಉನ್ನತ ಜಾತಿಗೆ ಸೇರಿಲ್ಲದೆಯೂ ಜ್ಞಾನಿಗಳಾದರು. ಅದೇ ಸಾಲಿನಲ್ಲಿ ಅಂಬೇಡ್ಕರ್‌ ಅವರು ಸೇರುತ್ತಾರೆ ಎಂದು ಹೇಳಿದರು.

ಈಗಿನ ಸರ್ಕಾರದ ತಪ್ಪುಗಳನ್ನು ಮುಚ್ಚಿಕೊಳ್ಳಲು ಸಂವಿಧಾನ ಅಪಾಯದಲ್ಲಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಈಗ ಇರುವುದು ಮೂಲ ಅಂಬೇಡ್ಕರ್‌ ಸಂವಿಧಾನ ಅಲ್ಲ. ತುರ್ತು ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಅವರು ತಿದ್ದುಪಡಿ ಮಾಡಿದ ಸಂವಿಧಾನ ಎಂದು ದೂರಿದರು.

ADVERTISEMENT

ಅಂಬೇಡ್ಕರ್‌ ಹೆಸರೇಳಿಕೊಂಡು ಬಿಜೆಪಿ, ಸಂಘ ಪರಿವಾರವನ್ನು ಬೈಯುವ ಪರಿಪಾಠವನ್ನು ಕಾಂಗ್ರೆಸ್‌ ಅವರು ಮಾಡುತ್ತಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನದ ಆಶಯವನ್ನೇ ಬುಡಮೇಲು ಮಾಡುವ ಕೆಲಸ ಆಯಿತು. ರಾಜ್ಯದಲ್ಲಿ ಸಂವಿಧಾನ ಪುಸ್ತಕ ಮುದ್ರಣ ಮಾಡಿ ಹಂಚಿದ ಸಚಿವ ಮಹದೇವಪ್ಪ ಕೋಟ್ಯಂತರ ರೂಪಾಯಿ ಲೂಟಿ ಹೊಡೆದಿದ್ದಾರೆ ಎಂದು ಆರೋಪಿಸಿದರು.

ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಸಂವಿಧಾನ ರಚನೆಯಾದ ಹತ್ತು ವರ್ಷದಲ್ಲಿ ದೇಶದ ಸಂಪತ್ತನ್ನು ಬಡವರಿಗೆ ಹಂಚಬೇಕು ಎಂದು ಬಿ.ಆರ್.ಅಂಬೇಡ್ಕರ್‌ ಅವರು ಬಯಸಿದ್ದರು. 55 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷವು ಅವರ ಆಶಯವನ್ನು ಈಡೇರಿಸಲಿಲ್ಲ. ಅಂಬೇಡ್ಕರ್‌ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಮಂತ್ರಿಯಾಗಿರಲಿಲ್ಲ. ರಾಷ್ಟ್ರೀಯ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ರಾಜ್ಯದಲ್ಲಿ ದಲಿತರ ಸಮಸ್ಯೆಗಳಿಗೆ ಎಂದೂ ಪರಿಹಾರ ಸಿಕ್ಕಿಲ್ಲ. ದಲಿತರಿಗೆ ಮೀಸಲಾದ ಹಣವನ್ನು ಅಕ್ರಮವಾಗಿ ಬಳಸಿಕೊಳ್ಳಲಾಯಿತು. ಒಬ್ಬ ದಲಿತರಿಗೆ ಮನೆ ಕೊಡಲಿಲ್ಲ. ಭೂಮಿ ಹಂಚಲಿಲ್ಲ ಎಂದು ದೂರಿದರು.

ಕೆಜಿಎಫ್‌ ಶಾಸಕರು ಕ್ಷೇತ್ರದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ. ನಗರಸಭೆಯಲ್ಲಿ ₹ 200 ಕೋಟಿ ಅವ್ಯವಹಾರ ಆಗಿದೆ. ತಾಲ್ಲೂಕಿನಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳು ಬಿಜೆಪಿ ಅವಧಿಯಲ್ಲಿ ಆಗಿದ್ದವು ಎಂದು ಮಾಜಿ ಸಂಸದ ಎಸ್‌.ಮುನಿಸ್ವಾಮಿ ಆರೋಪಿಸಿದರು.

ಮಾಜಿ ಶಾಸಕ ವೈ.ಸಂಪಂಗಿ, ಮಾಲೂರಿನ ಮಂಜುನಾಥ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಓಂ ಶಕ್ತಿ ಚಲಪತಿ, ಮಾಜಿ ಸಚಿವ ವರ್ತೂರು ಪ್ರಕಾಶ್‌, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯರಾದ ಮಹೇಶ್‌, ಜಯಪ್ರಕಾಶ್‌ ನಾಯ್ಡು, ಅಶ್ವಿನಿ, ಕಮಲನಾಥನ್‌, ಲಕ್ಷ್ಮಿನಾರಾಯಣ, ಸುರೇಶ್‌ ಹಾಜರಿದ್ದರು.

ಕೆಲವೊಮ್ಮೆ ಸೂರ್ಯನಿಗೂ ಗ್ರಹಣ ಹಿಡಿಯುತ್ತದೆ...

ಹಾಗೆಯೇ ನಾನೂ ಮತ್ತು ಕೋಲಾರದ ಮುನಿಸ್ವಾಮಿ ಚುನಾವಣೆ ಎದುರಿಸದೇ ಮಾಜಿಗಳಾಗಿದ್ದೇವೆ - ಪ್ರತಾಪ್‌ ಸಿಂಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.