ADVERTISEMENT

ಶೋಷಿತರ ಒಳಿತಿಗೆ ಶ್ರಮಿಸಿದ ಅಂಬೇಡ್ಕರ್‌

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 15:16 IST
Last Updated 7 ಡಿಸೆಂಬರ್ 2021, 15:16 IST

ನರಸಾಪುರ: ಗ್ರಾಮದಲ್ಲಿ ಸೋಮವಾರ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಪರಿನಿರ್ವಾಣ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಗ್ರಾಮದ ಅಂಬೇಡ್ಕರ್ ನಗರದ ವೃತ್ತದಲ್ಲಿನ ಅಂಬೇಡ್ಕರ್‌ ಭಾವಚಿತ್ರಕ್ಕೆ ಜೈ ಭೀಮ್‌ ಸಂಘಟನೆ ಸದಸ್ಯರು ಮಾಲಾರ್ಪಣೆ ಮಾಡಿ ಮೇಣದ ಬತ್ತಿ ಹಚ್ಚಿ ನಮನ ಸಲ್ಲಿಸಿದರು.

‘ಅಂಬೇಡ್ಕರ್‌ ಎಲ್ಲರಿಗೂ ನ್ಯಾಯ, ಎಲ್ಲರಿಗೂ ಸಮಬಾಳು ಎಂಬ ತತ್ವಾದರ್ಶ ಮೈಗೂಡಿಸಿಕೊಂಡು ಯಾವುದೇ ಹಂತದಲ್ಲಿ ತಮ್ಮ ಸಿದ್ಧಾಂತಕ್ಕೆ ಲೋಪವಾಗದಂತೆ ಬದುಕಿದರು. ಶೋಷಿತರ ಒಳಿತಿಗಾಗಿ ಹಗಲಿರುಳು ಶ್ರಮಿಸಿದ ಅವರು ವಿಶ್ವವೇ ಕಂಡ ಮೇಧಾವಿ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು ಬಣ್ಣಿಸಿದರು.

ADVERTISEMENT

‘ಅಸ್ಪೃಶತೆ ನಿರ್ಮೂಲನೆ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ ಕಲ್ಪಿಸುವ ಉದ್ದೇಶದಿಂದ ಅಂಬೇಡ್ಕರ್‌ ಸಂವಿಧಾನ ರಚಿಸಿದರು. ಅವರ ಪರಿಶ್ರಮದ ಫಲವಾಗಿ ರಾಷ್ಟ್ರದ ಸುವ್ಯವಸ್ಥಿತ ಆಡಳಿತಕ್ಕೆ ಸಂವಿಧಾನ ರೂಪುಗೊಂಡಿದೆ. ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅಂಬೇಡ್ಕರ್‌ ಕಾರ್ಯ ನಿರ್ವಹಿಸಿದರು. ಅವರ ತತ್ವಾದರ್ಶವನ್ನು ಎಲ್ಲರೂ ಪಾಲಿಸಬೇಕು’ ಎಂದು ಸಲಹೆ ನೀಡಿದರು.

‘ಅಂಬೇಡ್ಕರ್‌ ವಿಚಾರಗಳು ಸಂಪೂರ್ಣವಾಗಿ ಜನರಿಗೆ ಗೊತ್ತಿಲ್ಲ. ಸಮಾಜಕ್ಕೆ ಅವರ ವ್ಯಾಪಕತೆ ತಿಳಿಸುವ ಕೆಲಸ ಆಗಬೇಕು. ಸಮಾಜದಲ್ಲಿ ಎಂತಹ ಪರಿಸ್ಥಿಯಲ್ಲೂ ಸಮಸ್ಯೆ ಇದ್ದೇ ಇರುತ್ತವೆ. ಸಮಸ್ಯೆ ಹೇಗೆ ನಿವಾರಿಸಬಹುದು ಎಂಬುದನ್ನು ಅಂಬೇಡ್ಕರ್ ತೋರಿಸಿಕೊಟ್ಟಿದ್ದಾರೆ’ ಎಂದು ಸ್ಮರಿಸಿದರು.

ಗ್ರಾಮದ ಮುಖಂಡರಾದ ಸತೀಶ್, ತಿಮ್ಮರಾಯಪ್ಪ, ಚೇತನ್, ಮುನಿರಾಜು, ಸಾಯಿ ಜೀವನ್, ವೆಂಕಟೇಶ್, ಚೇತನ್, ಪ್ರಕಾಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.