ADVERTISEMENT

ಅನುದಾನಕ್ಕೆ ಪೌರಾಡಳಿತ ಸಚಿವರಿಗೆ ಮನವಿ

ರಸ್ತೆ ಅಭಿವೃದ್ಧಿ–ನಗರಸಭೆ ನೂತನ ಕಟ್ಟಡ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 16:10 IST
Last Updated 19 ಫೆಬ್ರುವರಿ 2021, 16:10 IST
ಕೋಲಾರ ನಗರಸಭೆ ಅಧ್ಯಕ್ಷೆ ಆರ್‌.ಶ್ವೇತಾ ಮತ್ತು ಸದಸ್ಯರ ನಿಯೋಗವು ಬೆಂಗಳೂರಿನಲ್ಲಿ ಶುಕ್ರವಾರ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ಅವರನ್ನು ಸನ್ಮಾನಿಸಿ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಕೋರಿತು.
ಕೋಲಾರ ನಗರಸಭೆ ಅಧ್ಯಕ್ಷೆ ಆರ್‌.ಶ್ವೇತಾ ಮತ್ತು ಸದಸ್ಯರ ನಿಯೋಗವು ಬೆಂಗಳೂರಿನಲ್ಲಿ ಶುಕ್ರವಾರ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ಅವರನ್ನು ಸನ್ಮಾನಿಸಿ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಕೋರಿತು.   

ಕೋಲಾರ: ನಗರದ ರಸ್ತೆಗಳ ಅಭಿವೃದ್ಧಿ ಹಾಗೂ ನಗರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೋರಿ ನಗರಸಭೆ ಅಧ್ಯಕ್ಷೆ ಆರ್‌.ಶ್ವೇತಾ ಮತ್ತು ಸದಸ್ಯರು ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಅಧ್ಯಕ್ಷರು ಮತ್ತು ಸದಸ್ಯರು, ‘ನಗರಸಭೆ ವ್ಯಾಪ್ತಿಯ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ರಸ್ತೆಗಳ ಅಭಿವೃದ್ಧಿಗೆ ಸುಮಾರು ₹ 20 ಕೋಟಿ ಅನುದಾನ ಬೇಕು. ತುಂಬಾ ಹಳೆಯದಾದ ಕೋಲಾರ ನಗರಸಭೆ ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು, ದೈನಂದಿನ ಕಾರ್ಯ ಚಟುವಟಿಕೆ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ’ ಎಂದು ಹೇಳಿದರು.

‘ನಗರಸಭೆ ಕಟ್ಟಡವು ಕಿರಿದಾಗಿದ್ದು, ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಕೆಲಸ ಕಾರ್ಯಕ್ಕೆ ಕಟ್ಟಡ ಸಾಕಾಗುತ್ತಿಲ್ಲ. ಆದ್ದರಿಂದ ಈ ಹಳೇ ಕಟ್ಟಡ ಕೆಡವಿ ಅದೇ ಜಾಗದಲ್ಲಿ ಹೊಸದಾಗಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಬೇಕು. ನೂತನ ಕಟ್ಟಡಕ್ಕೆ ₹ 4 ಕೋಟಿ ವೆಚ್ಚವಾಗಲಿದ್ದು, ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಬೇಕು’ ಎಂದು ಸಚಿವರಿಗೆ ಕೋರಿದರು.

ADVERTISEMENT

‘ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸರ್ಕಾರದಿಂದ ಮಂಜೂರಾಗಿದ್ದ ₹5 ಕೋಟಿ ಅನುದಾನ ತಡೆಹಿಡಿಯಲಾಗಿದೆ. ಈ ಅನುದಾನ ಬಿಡುಗಡೆ ಮಾಡಿದರೆ ನಗರದ ಅಭಿವೃದ್ಧಿ ಸಹಾಯವಾಗುತ್ತದೆ’ ಎಂದು ನಗರಸಭೆ ಉಪಾಧ್ಯಕ್ಷ ಎನ್.ಎಸ್.ಪ್ರವೀಣ್‌ಗೌಡ ಮನವಿ ಮಾಡಿದರು.

ಸಿಬ್ಬಂದಿ ಕೊರತೆ: ‘ನಗರಸಭೆಯಲ್ಲಿ ಸಾಕಷ್ಟು ಹುದ್ದೆ ಖಾಲಿಯಿದ್ದು, ದೈನಂದಿನ ಕಾರ್ಯ ಚಟುವಟಿಕೆಗಳ ನಿರ್ವಹಣೆಗೆ ಸಮಸ್ಯೆಯಾಗಿದೆ. ಸಿಬ್ಬಂದಿ ಕೊರತೆಯ ಕಾರಣಕ್ಕೆ ಸಕಾಲದಲ್ಲಿ ಸಾರ್ವಜನಿಕರ ಕೆಲಸ ಆಗುತ್ತಿಲ್ಲ. ಇದರಿಂದ ಜನರು ಕಚೇರಿಗೆ ಅಲೆಯುವ ಪರಿಸ್ಥಿತಿ ಸೃಷ್ಟಿಯಾಗಿದೆ. ಮತ್ತೊಂದೆಡೆ ಹಾಲಿ ಸಿಬ್ಬಂದಿ ಮೇಲೆ ಕಾರ್ಯ ಒತ್ತಡ ಹೆಚ್ಚಿದೆ. ಖಾಲಿ ಹುದ್ದೆ ಭರ್ತಿ ಮಾಡಬೇಕು’ ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಮಂಜುನಾಥ್‌ ಕೋರಿದರು.

ನಗರಸಭೆ ಸದಸ್ಯರಾದ ನಾರಾಯಣಮ್ಮ, ರಂಗಮ್ಮ, ಎನ್‌.ಅಪೂರ್ವ, ಆರ್‌.ಗುಣಶೇಖರ್, ಮಂಜುನಾಥ್, ಅಝ್ರ ನಸ್ರೀನ್ ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.