ADVERTISEMENT

ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 9:58 IST
Last Updated 18 ನವೆಂಬರ್ 2020, 9:58 IST
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಶಿಕ್ಷಕ ಗೆಳೆಯರ ಬಳಗದ ಸದಸ್ಯರು ಕೋಲಾರದಲ್ಲಿ ಬುಧವಾರ ಡಿಡಿಪಿಐ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಶಿಕ್ಷಕ ಗೆಳೆಯರ ಬಳಗದ ಸದಸ್ಯರು ಕೋಲಾರದಲ್ಲಿ ಬುಧವಾರ ಡಿಡಿಪಿಐ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.   

ಕೋಲಾರ: ಶಿಕ್ಷಕರ ಮುಂಬಡ್ತಿ ವಿಳಂಬ, ವೈದ್ಯಕೀಯ ಬಿಲ್‌ ಮರುಪಾವತಿಗೆ ಅನುದಾನ ಕೊರತೆ ಸೇರಿದಂತೆ ವಿವಿಧ ಸಮಸ್ಯೆ ನಿವಾರಣೆಗೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಶಿಕ್ಷಕ ಗೆಳೆಯರ ಬಳಗದ ಸದಸ್ಯರು ಇಲ್ಲಿ ಬುಧವಾರ ಡಿಡಿಪಿಐ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

‘ಶಿಕ್ಷಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಾಥಮಿಕ ಶಾಲೆಗಳಿಂದ ಪ್ರೌಢ ಶಾಲೆಗಳಿಗೆ ಮುಂಬಡ್ತಿ ನೀಡುವಲ್ಲಿ ವಿಳಂಬವಾಗಿದೆ. ಬಡ್ತಿ ಮುಖ್ಯ ಶಿಕ್ಷಕರ ಕೌನ್ಸೆಲಿಂಗ್‌ ತಡವಾಗಿದೆ’ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್ ಹೇಳಿದರು.

‘ಶಿಕ್ಷಕರ ವೈದ್ಯಕೀಯ ಬಿಲ್‌ ಮರು ಪಾವತಿಗೆ ಅನುದಾನವಿಲ್ಲ. ಶೀಘ್ರವೇ ಅನುದಾನ ಬಿಡುಗಡೆ ಮಾಡಿ ಬಿಲ್‌ ಮಂಜೂರಾತಿಗೆ ಕ್ರಮ ತೆಗೆದುಕೊಳ್ಳಬೇಕು. 2016ರಲ್ಲಿ ನೇಮಕಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ತಾರತಮ್ಯ ಸರಿಪಡಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಜಿಲ್ಲಾ ಕೇಂದ್ರದಲ್ಲಿ ಗುರುಭವನವಿಲ್ಲ. ಶೀಘ್ರವೇ ಗುರುಭವನ ಕಾಮಗಾರಿ ಆರಂಭಿಸಬೇಕು. ಸಂಕಷ್ಟದ ಸಮಯದಲ್ಲಿ ಸಹಾಯವಾಗಲಿ ಎಂಬ ಕಾರಣದಿಂದ ಶಿಕ್ಷಕರು ಸಾಮಾನ್ಯ ಭವಿಷ್ಯನಿಧಿ ಸಾಲಕ್ಕೆ ಅರ್ಜಿ ಸಲ್ಲಿಸುತ್ತಾರೆ. ಆದರೆ, ಸಾಲ ಮಂಜೂರಾತಿ ವಿಳಂಬವಾಗುತ್ತಿದೆ. ಶೀಘ್ರವಾಗಿ ಸಾಲ ಮಂಜೂರು ಮಾಡಿ ಶಿಕ್ಷಕರ ಅಲೆದಾಟ ತಪ್ಪಿಸಬೇಕು. ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ ಪ್ರಕ್ರಿಯೆ ಪಾರದರ್ಶಕವಾಗಿ ನಡೆಸಬೇಕು’ ಎಂದು ಶಿಕ್ಷಕರ ಗೆಳೆಯರ ಬಳಗದ ಸದಸ್ಯರು ಕೋರಿದರು.

ಪರಿಹಾರಕ್ಕೆ ಪ್ರಯತ್ನ: ಮನವಿಗೆ ಸ್ಪಂದಿಸಿದ ಡಿಡಿಪಿಐ, ‘ಜಿಲ್ಲೆಗೆ ಇತ್ತೀಚೆಗಷ್ಟೇ ವರ್ಗಾವಣೆಯಾಗಿ ಬಂದಿದ್ದು, ಶಿಕ್ಷಕರ ಸಮಸ್ಯೆಗಳನ್ನು ಅರಿಯುತ್ತಿದ್ದೇನೆ. ಶಿಕ್ಷಕರ ಎಲ್ಲಾ ಸಮಸ್ಯೆಗಳಿಗೂ ನನ್ನ ಅಧಿಕಾರ ಮಿತಿಯಲ್ಲಿ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡುತ್ತೇನೆ. ಶೈಕ್ಷಣಿಕ ಸಾಧನೆ ಹಾಗೂ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಶಿಕ್ಷಕರು ಸಹಕಾರ ನೀಡಬೇಕು’ ಎಂದು ಕೋರಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಶಿಕ್ಷಕ ಗೆಳೆಯರ ಬಳಗದ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.