ADVERTISEMENT

ಕೋಲಾರ: ಗಾಣೋದ್ಯಮ ಪ್ರಾಧಿಕಾರ ರಚನೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 13:55 IST
Last Updated 4 ಡಿಸೆಂಬರ್ 2020, 13:55 IST

ಕೋಲಾರ: ‘ಗಾಣಿಗ ಸಮುದಾಯದ ಕುಲ ಕಸುಬಿನ ಉಳಿವಿಗೆ ಮತ್ತು ಸಮುದಾಯದ ಅಭಿವೃದ್ಧಿಗೆ ಗಾಣೋದ್ಯಮ ಪ್ರಾಧಿಕಾರ ಅಥವಾ ತೈಲ ನಿಗಮ ರಚಿಸಬೇಕು’ ಎಂದು ಜಿಲ್ಲಾ ಗಾಣಿಗರ ಸಂಘದ ಗೌರವಾಧ್ಯಕ್ಷ ಟಿ.ಎಂ.ಅಶೋಕ್‌ಕುಮಾರ್ ಒತ್ತಾಯಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ತೈಲೋತ್ಪಾದನೆಯು ಗಾಣಿಗ ಸಮುದಾಯದ ಕುಲ ಕಸುಬು. ಸಮುದಾಯದ ಜನರು ಪೂರ್ವಜರ ಕಾಲದಿಂದಲೂ ಈ ಕೆಲಸ ಮಾಡುತ್ತಾ ಬದುಕು ಸಾಗಿಸುತ್ತಿದ್ದಾರೆ. ಸಮುದಾಯದ ಹಿತದೃಷ್ಟಿಯಿಂದ ಗಾಣೋದ್ಯಮ ಪ್ರಾಧಿಕಾರ ಸ್ಥಾಪಿಸಿ ₹ 100 ಕೋಟಿ ಮೀಸಲಿಡಬೇಕು’ ಎಂದು ಮನವಿ ಮಾಡಿದರು.

‘ಗಾಣಿಗ ಸಮಾಜದವರು ಶೇಂಗಾ ಬೀಜ, ಎಳ್ಳು, ಹೊಂಗೆ, ಕೊಬ್ಬರಿಯಿಂದ ಎಣ್ಣೆ ತೆಗೆದು ಮಾರಾಟ ಮಾಡುವುದರ ಜತೆಗೆ ಕೃಷಿಯಲ್ಲೂ ತೊಡಗಿಕೊಂಡಿದ್ದಾರೆ. ಹಾಲು ಉತ್ಪಾದನೆ, ರೇಷ್ಮೆ, ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ದೇಶಕ್ಕೆ ಆರ್ಥಿಕತೆಗೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.

ADVERTISEMENT

‘20ನೇ ಶತಮಾನದ ಆರಂಭದಲ್ಲಿ ದೇಶದಲ್ಲಿ ಸುಮಾರು 5 ಲಕ್ಷ ಗಾಣಗಳಿದ್ದವು. ಆಧುನಿಕ ಯಂತ್ರೋಪಕರಣಗಳು ಬಂದ ನಂತರ ಗಾಣಗಳು ಮೂಲೆಗುಂಪಾಗಿವೆ. ಇಡೀ ದೇಶಕ್ಕೆ ಬೆಳಕು ನೀಡಿದ ಗಾಣಿಗ ಜನಾಂಗದವರು ಮೂಲ ವೃತ್ತಿ ಬಿಟ್ಟು ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದಾರೆ. ದೀಪದ ಕೆಳಗೆ ಕತ್ತಲು ಎಂಬಂತೆ ಗಾಣಿಗ ಸಮುದಾಯ ಈಗ ಕತ್ತಲೆಯಲ್ಲಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಮುದಾಯಕ್ಕೆ ಪ್ರಾಧಿಕಾರ ಅಥವಾ ನಿಗಮ ನೀಡುವ ಮೂಲಕ ಗಾಣಿಗ ಸಮಾಜದವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕರಿಸಬೇಕು. ತೈಲ ನಿಗಮ ಸ್ಥಾಪನೆ, ಎಣ್ಣೆ ಉತ್ಪಾದನೆಗೆ ಸೌಕರ್ಯ ನೀಡಿಕೆ, ತೈಲ ಮಾರುಕಟ್ಟೆ ವಿಸ್ತರಣೆ, ತೈಲ ಉದ್ಯಮವನ್ನು ಬೃಹತ್ ಕೈಗಾರಿಕೆ ಎಂದು ಪರಿಗಣಿಸುವುದು, ಸಬ್ಸಿಡಿ ರೂಪದಲ್ಲಿ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಮುಖ್ಯಮಂತ್ರಿಗಳಿಗೆ ಸಲ್ಲಿಸುತ್ತೇವೆ’ ಎಂದರು.

ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಚಂದ್ರಶೇಖರ್, ಕಾರ್ಯಾಧ್ಯಕ್ಷ ಟಿ.ಎಂ.ವೆಂಕಟೇಶ್, ನಗರ ಘಟಕದ ಅಧ್ಯಕ್ಷ ಕೃಷ್ಣ, ಪ್ರಧಾನ ಕಾರ್ಯದರ್ಶಿ ಜೆ.ಎನ್.ರಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.