ADVERTISEMENT

ಹವಾಮಾನ ಆಧಾರಿತ ವಿಮೆಗೆ ಮನವಿ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಹೇಳಿಕೆ

ಪಿಎಂಎಫ್‌ಬಿವೈ ಪ್ರಯೋಜನ ಶೂನ್ಯ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 12:01 IST
Last Updated 22 ಏಪ್ರಿಲ್ 2020, 12:01 IST
ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯ ಸಾಧಕ ಬಾಧಕ ಕುರಿತು ಕೋಲಾರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ಅವರೊಂದಿಗೆ ಚರ್ಚಿಸಿದರು.
ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯ ಸಾಧಕ ಬಾಧಕ ಕುರಿತು ಕೋಲಾರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ಅವರೊಂದಿಗೆ ಚರ್ಚಿಸಿದರು.   

ಕೋಲಾರ: ‘ಸರ್ಕಾರ ಜಿಲ್ಲೆಯ ಟೊಮೆಟೊ ಬೆಳೆಗಾರರಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗೆ ಅವಕಾಶ ಕಲ್ಪಿಸಬೇಕು’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಮನವಿ ಮಾಡಿದರು.

ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ (ಪಿಎಂಎಫ್‌ಬಿವೈ) ಅಳವಡಿಕೆಗೆ ಸಂಬಂಧ ಸರ್ಕಾರಿ ಆದೇಶದ ಸಾಧಕ ಬಾಧಕ ಕುರಿತು ಇಲ್ಲಿ ಬುಧವಾರ ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ‘ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಿಂದ ಜಿಲ್ಲೆಯ ಟೊಮೆಟೊ ಬೆಳೆಗಾರರಿಗೆ ಯಾವುದೇ ಪ್ರಯೋಜನವಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಜಿಲ್ಲೆಯ ರೈತರು ಟೊಮೆಟೊ ಬೆಳೆಯಲ್ಲಿ ನಿಗದಿಗಿಂತ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಫಸಲ್‌ ಭಿಮಾ ಯೋಜನೆಯಡಿ ಇಳುವರಿಗೆ ವಿಮೆ ನೀಡುವುದರಿಂದಾಗಿ ಕಳೆದ 4 ವರ್ಷಗಳಲ್ಲಿ ಜಿಲ್ಲೆಯ ಯಾವೊಬ್ಬ ಟೊಮೆಟೊ ಬೆಳೆಗಾರರು ವಿಮೆ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯಲ್ಲಿ ಬೆಳೆಯುವ ಟೊಮೆಟೊ ಹೆಕ್ಟೇರ್‌ಗೆ ₹ 4,800ರಂತೆ ವಿಮಾ ಕಂತು ಪಾವತಿಸಲು ರೈತರ ಸಾಲಕ್ಕೆ ₹ 16 ಕೋಟಿಗೂ ಹೆಚ್ಚು ಹಣ ಸೇರಿಕೊಳ್ಳುತ್ತದೆ. ಆದರೆ, ಪ್ರಯೋಜನ ಮಾತ್ರ ಶೂನ್ಯ. ಹೀಗಾಗಿ ಇದರ ಅಳವಡಿಕೆ ಬೇಡ’ ಎಂದು ಸಲಹೆ ನೀಡಿದರು.

ಪ್ರಸ್ತಾವ ಸಲ್ಲಿಕೆ: ‘ಫಸಲ್ ಭಿಮಾ ಯೋಜನೆ ಬದಲಿಗೆ ಹವಾಮಾನ ಆಧಾರಿತ ವಿಮಾ ಯೋಜನೆ ಅಳವಡಿಕೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರ ಇದಕ್ಕೆ ಒಪ್ಪಿದರೆ ಜಿಲ್ಲೆಯ ಟೊಮೆಟೊ ಬೆಳೆಗಾರರಿಗೆ ಹೆಚ್ಚಿನ ಅನುಕೂಲವಾಗುತ್ತದೆ’ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ತಿಳಿಸಿದರು.

‘ತೋಟಗಾರಿಕಾ ಇಲಾಖೆ ವತಿಯಿಂದ ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆದು ಜಿಲ್ಲೆಯ ರೈತರು ಸುಮಾರು 1.50 ಟನ್‌ನಷ್ಟು ತರಕಾರಿಗಳನ್ನು ನೇರವಾಗಿ ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಿಗೆ ಸರಬರಾಜು ಮಾಡಲು ಅವಕಾಶ ಕಲ್ಪಿಸಲಾಗಿದೆ. ನಾಲ್ಕೈದು ರೈತರು ಸೇರಿ ಎಲ್ಲಾ ರೀತಿಯ ತರಕಾರಿ ಪ್ಯಾಕಿಂಗ್ ಮಾಡಿ ದಿನವೂ ಬೆಂಗಳೂರಿಗೆ ಸರಬರಾಜು ಮಾಡುತ್ತಿದ್ದು, ಉತ್ತಮ ಬೆಲೆ ಸಿಗುತ್ತಿದೆ. ಇದೇ ರೀತಿ ಮತ್ತಷ್ಟು ರೈತರಿಗೆ ಅನುಕೂಲ ಕಲ್ಪಿಸುತ್ತೇವೆ’ ಎಂದರು.

‘ಗ್ರಾಹಕರಿಗೆ ಉತ್ತಮ ತರಕಾರಿ ಸಿಗುವುದರ ಜತೆಗೆ ಮಧ್ಯವರ್ತಿಗಳ ಕಾಟ ತಪ್ಪುತ್ತದೆ. ಬರುವ ಹಣ ನೇರವಾಗಿ ರೈತರ ಜೇಬು ಸೇರುತ್ತದೆ. ವೇಮಗಲ್, ಮಾಲೂರು, ಶ್ರೀನಿವಾಸಪುರದಲ್ಲಿನ ಆಹಾರ ಸಂಸ್ಕರಣಾ ಘಟಕಗಳ ಕಾರ್ಯಾರಂಭಕ್ಕೆ ಜಿಲ್ಲಾಧಿಕಾರಿ ಒಪ್ಪಿಗೆ ನೀಡಿದ್ದಾರೆ. ಇದರಿಂದ ರೈತರ ಸ್ವಲ್ಪ ಪ್ರಮಾಣದ ತರಕಾರಿ ಖರೀದಿ ಆಗುವುದರಿಂದ ಬೆಲೆ ಸ್ಥಿರತೆ ಸಾಧ್ಯವಾಗುತ್ತದೆ’ ಎಂದು ಮಾಹಿತಿ ನೀಡಿದರು.

ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರವಿ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಖಲೀಂ ಉಲ್ಲಾ, ನಾಗೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.