ADVERTISEMENT

ಕೋವಿಡ್‌ 3ನೇ ಅಲೆ ನಿರ್ವಹಣೆ: ಕೋಟಿ ಡೋಸ್‌ ಲಸಿಕೆಗೆ ಕೇಂದ್ರಕ್ಕೆ ಮನವಿ

ಆರೋಗ್ಯ ಸಚಿವ ಸುಧಾಕರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 14:08 IST
Last Updated 1 ಸೆಪ್ಟೆಂಬರ್ 2021, 14:08 IST
ಕೋಲಾರ ತಾಲ್ಲೂಕಿನ ಮುದುವಾಡಿ ಗ್ರಾಮದಲ್ಲಿ ಬುಧವಾರ ನಡೆದ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮಾತನಾಡಿದರು
ಕೋಲಾರ ತಾಲ್ಲೂಕಿನ ಮುದುವಾಡಿ ಗ್ರಾಮದಲ್ಲಿ ಬುಧವಾರ ನಡೆದ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮಾತನಾಡಿದರು   

ಕೋಲಾರ: ‘ರಾಜ್ಯದಲ್ಲಿ ಕೋವಿಡ್‌ ಮೂರನೇ ಅಲೆ ನಿರ್ವಹಣೆಗೆ 1 ಕೋಟಿ ಡೋಸ್‌ ಲಸಿಕೆ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ರಾಜ್ಯದಲ್ಲಿ ಸದ್ಯ 1.12 ಕೋಟಿ ಡೋಸ್‌ ಲಸಿಕೆಯಿದೆ. ಈವರೆಗೆ 4.39 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ತಾಲ್ಲೂಕಿನ ಮುದುವಾಡಿ ಗ್ರಾಮದಲ್ಲಿ ಬುಧವಾರ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿ, ‘ಕೋವಿಡ್‌ ತಡೆಗೆ ಎಲ್ಲರೂ ಲಸಿಕೆ ಹಾಕಿಸಿಕೊಂಡು ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ಆರೋಗ್ಯವೇ ಭಾಗ್ಯ. ಆರೋಗ್ಯವಿಲ್ಲದಿದ್ದರೆ ಎಲ್ಲವೂ ನಶ್ವರ. ಕೋವಿಡ್‌ನಿಂದ ಇಡೀ ಜಗತ್ತು ತತ್ತರಿಸಿದೆ. ಒಂದೂವರೆ ವರ್ಷದಲ್ಲಿ ಎಲ್ಲಾ ಕ್ಷೇತ್ರಗಳು ನಷ್ಟ ಅನುಭವಿಸಿವೆ. ಸೋಂಕಿನಿಂದ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹೆಚ್ಚಿನ ನಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡಿ ದೊಡ್ಡ ಆಶಾಕಿರಣವಾಗಿದೆ’ ಎಂದು ಹೇಳಿದರು.

ADVERTISEMENT

‘ಜನರಿಗೆ ಕೋವಿಡ್‌ ಲಸಿಕೆ ನೀಡುವುದು ಸರ್ಕಾರದ ಜವಾಬ್ದಾರಿ, ದೇಶದ ಅನೇಕ ರಾಜ್ಯಗಳಲ್ಲಿ ಬೇರೆ ಬೇರೆ ಸರ್ಕಾರ ಇದೆ. ಆದರೆ, ಪ್ರಧಾನಿ ಮೋದಿ ಅವರು ಎಲ್ಲಾ ಭಾರತೀಯರಿಗೆ ಲಸಿಕೆ ಸಿಗಲಿ ಎಂಬ ಉದ್ದೇಶಕ್ಕೆ ₹ 35 ಸಾವಿರ ಕೋಟಿ ಮೀಸಲಿರಿಸಿದ್ದಾರೆ. ಲಸಿಕೆ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸಿ ಸುಳ್ಳು ಪ್ರಚಾರ ಮಾಡಿದವರು ಯಾರು ಎಂಬುದನ್ನು ಪ್ರಸ್ತಾಪಿಸುವುದಿಲ್ಲ. ಯಾರು ಏನು ಹೇಳಿದರೂ ಜನ ನಂಬಲ್ಲ. ಮೋದಿ, ಬಿಜೆಪಿ ಲಸಿಕೆ ಎಂದರೂ ಲಸಿಕೆ ತೆಗೆದುಕೊಳ್ಳುವ ಜನರ ಸಾಲು ಮಾತ್ರ ಕಡಿಮೆಯಾಗಿಲ್ಲ’ ಎಂದರು.

‘ರಾಜ್ಯದಲ್ಲಿ ಹೊಸ ಮಾದರಿಯಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಈಗ ₹ 2 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುತ್ತದೆ. ಮುಂದೆ ಸುಮಾರು ₹ 8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಆರೋಗ್ಯ ಕೇಂದ್ರಗಳು 12 ಹಾಸಿಗೆ ಸಾಮರ್ಥ್ಯ ಹೊಂದಿರುತ್ತವೆ. ತೀವ್ರ ನಿಗಾ ಘಟಕ, ದಿನದ 24 ತಾಸೂ ಕಾರ್ಯ ನಿರ್ವಹಿಸಲು 3 ವೈದ್ಯರನ್ನು ನೇಮಿಸಲಾಗುವುದು’ ಎಂದು ವಿವರಿಸಿದರು.

ಕ್ರಾಂತಿಕಾರಿ ಹೆಜ್ಜೆ: ‘ನಾಲ್ಕೈದು ತಿಂಗಳಲ್ಲಿ ಆರೋಗ್ಯ ಇಲಾಖೆಯಲ್ಲಿ ಕ್ರಾಂತಿಕಾರಿ ಹೆಜ್ಜೆ ಇಡಲಾಗಿದೆ. ಹೊಸದಾಗಿ 4 ಸಾವಿರ ವೈದ್ಯರನ್ನು ನೇಮಿಸಲಾಗಿದೆ. ಕಳೆದ 30 ವರ್ಷದಲ್ಲಿ ಯಾವುದೇ ಸರ್ಕಾರ ಈ ಕೆಲಸ ಮಾಡಿಲ್ಲ. ಡಿಸೆಂಬರ್ ವೇಳೆಗೆ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ 2 ಡೋಸ್ ಕೋವಿಡ್‌ ಲಸಿಕೆ ಹಾಕಲಾಗುತ್ತದೆ. 5 ಕೋಟಿ ಜನರಿಗೆ ಶೇ 100ರಷ್ಟು ಲಸಿಕೆ ನೀಡುವವರೆಗೆ ಜನ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಆರೋಗ್ಯ ಇಲಾಖೆ ಸಿಬ್ಬಂದಿ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಆಗ ಮಾತ್ರ ಜನರಿಗೆ ಇಲಾಖೆ ಮೇಳೆ ವಿಶ್ವಾಸ ಬರುತ್ತದೆ. ಪ್ರೀತಿ, ದಯೆ, ಅನುಕಂಪದ ಗುಣ ಇಟ್ಟುಕೊಂಡು ಕೆಲಸ ಮಾಡಬೇಕು. ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಮುಂದೆ ಜನರ ಕೆಲಸ ದೇವರ ಕೆಲಸ ಎಂದು ವಾಕ್ಯ ಬರೆಸಲಾಗುವುದು. ಈ ನಿಟ್ಟಿನಲ್ಲಿ ಇಲಾಖೆ ಕೆಲಸ ಮಾಡುತ್ತದೆ’ ಎಂದು ಮಾಹಿತಿ ನೀಡಿದರು.

‘ಆ.26ರಂದು ಮುಖ್ಯಮಂತ್ರಿಗಳ ಜತೆ ದೆಹಲಿಗೆ ಹೋಗಿದ್ದಾಗ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ. ಕೆ.ಸಿ ವ್ಯಾಲಿ, ಎಚ್‍.ಎನ್ ವ್ಯಾಲಿ ಮತ್ತು ಎತ್ತಿನಹೊಳೆ ಯೋಜನೆಗೆ ಪರ್ಯಾಯವಾಗಿ ಹೊಸ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿಗಳು ಕೇಂದ್ರದ ನೀರಾವರಿ ಸಚಿವರಿಗೆ ಮನವಿ ಮಾಡಿದ್ದಾರೆ. ಎತ್ತಿನಹೊಳೆ ಯೋಜನೆಗೆ ವೇಗ ನೀಡುವ ಜತೆಗೆ ಬಯಲುಸೀಮೆ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು ಹರಿಸುವ ಬಗ್ಗೆ ಕೇಂದ್ರ ಬದ್ಧತೆ ಹೊಂದಿದೆ’ ಎಂದರು.

ತಾಲ್ಲೂಕಿನಲ್ಲಿ ಕಚೇರಿ: ಪಕ್ಷದ ವತಿಯಿಂದ ಸಾರ್ವಜನಿಕರ ಕುಂದು ಕೊರತೆ ಆಲಿಸಲು ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಕಚೇರಿ ತೆರೆಯಲಾಗುತ್ತದೆ. ಜನರ ಸಮಸ್ಯೆ ಆಲಿಸಿ ಅಧಿಕಾರಿಗಳ ಮೂಲಕ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಭರವಸೆ ನೀಡಿದರು.

‘ಜನರು ತಮ್ಮ ಸಮಸ್ಯೆಗಳ ಇತ್ಯರ್ಥಕ್ಕೆ ತಿಂಗಳುಗಟ್ಟಲೇ ಸರ್ಕಾರಿ ಕಚೇರಿಗಳಿಗೆ ಅಲೆಯುವ ಪರಿಸ್ಥಿತಿಯಿದೆ. ಇದನ್ನು ತಪ್ಪಿಸಲು ಎಲ್ಲಾ ತಾಲ್ಲೂಕಿನಲ್ಲಿ ಕಚೇರಿ ತೆರೆದು ಸ್ಥಳದಲ್ಲೇ ಕುಂದು ಕೊರತೆ ಆಲಿಸಲಾಗುವುದು. ಅಧಿಕಾರಿಗಳು ಗೊತ್ತುಪಡಿಸಿದ ದಿನದಂದು ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸುತ್ತೇವೆ. ರಾಜಕೀಯ ಶಾಶ್ವತವಲ್ಲ. ಒಳ್ಳೆಯ ಕೆಲಸ ಮಾತ್ರ ಶಾಶ್ವತ, ಅದಕ್ಕೆ ಒತ್ತು ನೀಡುತ್ತೇವೆ’ ಸ್ಪಷ್ಟಪಡಿಸಿದರು.

ಸಂಸದ ಎಸ್.ಮುನಿಸ್ವಾಮಿ, ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡೆಕ್ಕಾ ಸುರೇಶ್‌ಬಾಬು, ಆರೋಗ್ಯ ಇಲಾಖೆ ನಿರ್ದೇಶಕ ಅಪ್ಪಾಸಾಹೇಬ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.