ADVERTISEMENT

ಶಾಲೆಗೆ ಮಾರ್ಗದರ್ಶಿ ಶಿಕ್ಷಕರ ನಿಯೋಜಿಸಿ

ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ: ಜಿಲ್ಲಾಧಿಕಾರಿ ಮಂಜುನಾಥ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 12:54 IST
Last Updated 9 ಅಕ್ಟೋಬರ್ 2019, 12:54 IST

ಕೋಲಾರ: ‘ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮತ್ತಷ್ಟು ಗುಣಾತ್ಮಕತೆ ಸಾಧಿಸಬೇಕು. ಈ ನಿಟ್ಟಿನಲ್ಲಿ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಸರಾಸರಿ ಫಲಿತಾಂಶಕ್ಕಿಂತ ಕಡಿಮೆ ಸಾಧನೆ ಮಾಡಿರುವ ಶಾಲೆಗಳಿಗೆ ತಜ್ಞ ಮಾರ್ಗದರ್ಶಿ ಶಿಕ್ಷಕರನ್ನು ನಿಯೋಜಿಸಿ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದರು.

ಇಲ್ಲಿ ಬುಧವಾರ 2019–20ನೇ ಸಾಲಿನ ಪ್ರೌಢ ಶಾಲಾ ಕಾರ್ಯಕ್ರಮ ಕೈಪಿಡಿ ‘ನಿತ್ಯ ಸ್ಫೂರ್ತಿ’ ಬಿಡುಗಡೆ ಮಾಡಿ ಮಾತನಾಡಿ, ‘ಜಿಲ್ಲೆಯು ಐದಾರು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ಅದೇ ರೀತಿ ಈ ಬಾರಿಯೂ ಗುಣಾತ್ಮಕತೆಗೆ ಒತ್ತು ಕೊಟ್ಟು ಫಲಿತಾಂಶ ಸಾಧನೆಯಲ್ಲಿ ಜಿಲ್ಲೆಯು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೇರಬೇಕು’ ಎಂದರು.

‘ಫಲಿತಾಂಶ ಗುರಿ ಸಾಧನೆಗೆ ವಾರ್ಷಿಕ ಕ್ರಿಯಾ ಯೋಜನೆ ಮೂಲಕ ಸಿದ್ಧತೆ ನಡೆಸಿ. ಕಳಪೆ ಫಲಿತಾಂಶ ಸಾಧನೆ ಮಾಡಿರುವ ಶಾಲೆಗಳಿಗೆ ತಮ್ಮ ವ್ಯಾಪ್ತಿಯ ಅಕ್ಕಪಕ್ಕದ ಶಾಲೆಗಳಲ್ಲಿನ ತಜ್ಞ ಮತ್ತು ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಬೇಕು. ಮಾರ್ಗದರ್ಶಿ ಶಿಕ್ಷಕರು ವಾರಕ್ಕೊಮ್ಮೆ ನಿಯೋಜಿತ ಶಾಲೆಗಳಿಗೆ ಹೋಗಿ ಮಕ್ಕಳ ಕಲಿಕೆ ಗುಣಮಟ್ಟ ಅವಲೋಕಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು’ ಎಂದು ತಿಳಿಸಿದರು.

ADVERTISEMENT

‘ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯು ಉತ್ತಮ ಸಾಧನೆ ಮಾಡುತ್ತಿದ್ದು, ಇದನ್ನು ಮುಂದುವರಿಸಿಕೊಂಡು ಹೋಗಲು ಕ್ರಮ ಕೈಗೊಳ್ಳಿ. ಫಲಿತಾಂಶ ಸುಧಾರಣೆಗೆ ಸಂಪೂರ್ಣ ಸಹಕಾರ ಕೊಡುತ್ತೇವೆ’ ಎಂದು ಸಂಸದ ಎಸ್.ಮುನಿಸ್ವಾಮಿ ಭರವಸೆ ನೀಡಿದರು.

ವರದಿ ನೀಡಿ: ‘ನೋಡಲ್ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಸೇತುಬಂಧ ಅನುಷ್ಠಾನ, ಪರಿಹಾರ ಬೋಧನೆ, ಶಾಲಾ ಅವಧಿಗೆ ಮುನ್ನ ಮತ್ತು ನಂತರ ವಿಶೇಷ ತರಗತಿ ನಡೆಸುತ್ತಿರುವ ಕುರಿತು ಪರಿಶೀಲನೆ ನಡೆಸಿ ವರದಿ ನೀಡಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಸೂಚಿಸಿದರು.

‘ಶಾಲೆಯಲ್ಲಿ ನಿರ್ವಹಿಸಬೇಕಾದ ದಾಖಲೆಪತ್ರಗಳು ವಿದ್ಯಾರ್ಥಿಗಳ ವೈಯಕ್ತಿಕ ಕಡತಗಳ ನಿರ್ವಹಣೆ, ವಿಷಯವಾರು ಹಿಂದುಳಿದ ವಿದ್ಯಾರ್ಥಿಗಳ ಮಾಹಿತಿ, ಅವರು ತೇರ್ಗಡೆ ಹೊಂದಲು ಕೈಗೊಂಡ ಕ್ರಮಗಳ ಕುರಿತು ಗಮನ ಹರಿಸಬೇಕು. ಮಕ್ಕಳ ಕಲಿಕೆ ಮಟ್ಟ ಉತ್ತಮಗೊಳಿಸಲು ಕಲಿಕೋಪಕರಣ ಬಳಕೆಗೆ ಒತ್ತು ಕೊಡಿ. ಮಕ್ಕಳ ಬರವಣಿಗೆ ಕೌಶಲ ವೃದ್ಧಿಗೆ ಕ್ರಮ ಕೈಗೊಳ್ಳಿ’ ಎಂದು ಸಲಹೆ ನೀಡಿದರು.

‘ಫಲಿತಾಶ ವೃದ್ಧಿಸುವ ದೃಷ್ಟಿಯಿಂದ ಶಾಲೆಗಳಿಗೆ ನೇಮಕಗೊಂಡಿರುವ ನೋಡಲ್ ಅಧಿಕಾರಿಗಳು ಶಾಲೆಯಲ್ಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಋಣಾತ್ಮಕ ಮತ್ತು ಧನಾತ್ಮಕ ಅಂಶಗಳನ್ನು ಉಲ್ಲೇಖಿಸಿ. ಪ್ರತಿ ಭೇಟಿಯ ನಂತರ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿಗೆ ವರದಿ ಕೊಡಿ’ ಎಂದು ಹೇಳಿದರು.

ಪಠ್ಯ ಬೋಧಿಸಿ: ‘ನಿತ್ಯ ಸ್ಫೂರ್ತಿ ಮಾರ್ಗದರ್ಶಿ ಕೈಪಿಡಿಯಲ್ಲಿ ಶಾಲೆಗಳಲ್ಲಿ ಪ್ರತಿ ತಿಂಗಳು ಕೈಗೊಳ್ಳಬೇಕಾದ ಶೈಕ್ಷಣಿಕ ಕಾರ್ಯಕ್ರಮ ಕುರಿತು ಅರಿವು ಮೂಡಿಸಲಾಗಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಫಲಿತಾಂಶ ತರಲು ಮುಖ್ಯ ಶಿಕ್ಷಕರು ಕ್ರಮ ವಹಿಸಬೇಕು. ಮುಖ್ಯ ಶಿಕ್ಷಕರು ಸಹ ಪಠ್ಯ ಬೋಧನೆ ಮಾಡಬೇಕು’ ಎಂದರು.

‘ಕಾಲಕಾಲಕ್ಕೆ ಸರಿಯಾಗಿ ಎಸ್‌ಡಿಎಂಸಿ ಸಭೆ, ಪೋಷಕರ ಸಭೆ ಕರೆದು ಮನೆಯಲ್ಲಿ ಮಕ್ಕಳಿಗೆ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವಂತೆ ಅರಿವು ಮೂಡಿಸಿ. ಬರವಣಿಗೆ ಕೌಶಲ ವೃದ್ಧಿ ಪಠ್ಯಪುಸ್ತಕ ಓದುವ ಅಭ್ಯಾಸ ಬೆಳೆಸುವುದು ನಿತ್ಯ ಸ್ಫೂರ್ತಿ ಕೈಪಿಡಿಯಲ್ಲಿನ ಅಂಶಗಳಾಗಿವೆ’ ಎಂದು ಮಾಹಿತಿ ನೀಡಿದರು.

‘ಜೂನಿಯರ್ ಕಾಲೇಜುಗಳು, ಅನುದಾನಿತ ಶಾಲೆಗಳ ಫಲಿತಾಂಶ ಕುಸಿತವೇ ಸ್ವಲ್ಪಮಟ್ಟಿನ ಹಿನ್ನಡೆಗೆ ಪ್ರಮುಖ ಕಾರಣ. ಹೀಗಾಗಿ ಜಿಲ್ಲೆಯ ಎಲ್ಲಾ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು, ಜೂನಿಯರ್ ಕಾಲೇಜುಗಳ ಉಪ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರ ಸಭೆಯ ನಡೆಸಿ ಫಲಿತಾಂಶ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ದೇಶನ ನೀಡಲಾಗಿದೆ’ ಎಂದು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್‌.ವಿ.ದರ್ಶನ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಕ್ಷೇತ್ರ ಶಿಕ್ಷಣ ಸಂಯೋಜಕ ಶ್ರೀನಿವಾಸಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ, ವಿಷಯ ಪರಿವೀಕ್ಷಕರಾದ ಗಾಯಿತ್ರಿ, ಶಶಿವಧನ, ಕೃಷ್ಣಪ್ಪ, ವಿ.ವೆಂಕಟೇಶಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.