ADVERTISEMENT

ಕೋಲಾರ| ಚೆಕ್‌ ಡ್ಯಾಂ ಎತ್ತರ ತಗ್ಗಿಸಲು ಯತ್ನ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 14:28 IST
Last Updated 8 ಜನವರಿ 2020, 14:28 IST
ಕೋಲಾರ ತಾಲ್ಲೂಕಿನ ಎಸ್‌.ಅಗ್ರಹಾರ ಕೆರೆಯಿಂದ ಕೆಸಿ ವ್ಯಾಲಿ ನೀರು ಜನ್ನಘಟ್ಟ ಕೆರೆಗೆ ಹರಿಯುತ್ತಿರುವ ಕಾಲುವೆಯಲ್ಲಿ ಚೆಕ್‌ ಡ್ಯಾಂ ಎತ್ತರ ಕಡಿಮೆ ಮಾಡಿರುವುದು.
ಕೋಲಾರ ತಾಲ್ಲೂಕಿನ ಎಸ್‌.ಅಗ್ರಹಾರ ಕೆರೆಯಿಂದ ಕೆಸಿ ವ್ಯಾಲಿ ನೀರು ಜನ್ನಘಟ್ಟ ಕೆರೆಗೆ ಹರಿಯುತ್ತಿರುವ ಕಾಲುವೆಯಲ್ಲಿ ಚೆಕ್‌ ಡ್ಯಾಂ ಎತ್ತರ ಕಡಿಮೆ ಮಾಡಿರುವುದು.   

ಕೋಲಾರ: ಕೆಸಿ ವ್ಯಾಲಿ ನೀರು ಜನ್ನಘಟ್ಟ ಕೆರೆಗೆ ನಿಧಾನವಾಗಿ ಹರಿಯುತ್ತಿದ್ದು, ಹರಿವಿನ ವೇಗ ಹೆಚ್ಚಿಸಲು ಮಾರ್ಗ ಮದ್ಯದ ಚಿಟ್ನಹಳ್ಳಿ, ಅಂಕತಟ್ಟಿ ಸಮೀಪ ಚೆಕ್‌ ಡ್ಯಾಂ ಎತ್ತರ ತಗ್ಗಿಸಿದ್ದು, ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಎಸ್‌.ಅಗ್ರಹಾರ ದೊಡ್ಡ ಕೆರೆಗೆ ಕೆಸಿ ವ್ಯಾಲಿ ನೀರು ಹರಿಯುತ್ತಿದ್ದು ಕೋಡಿ ಹೋಗಿದೆ. ಸುಮಾರು ದಿನಗಳಿಂದ ತಾಲ್ಲೂಕಿನ ಜನ್ನಘಟ್ಟ ಕೆರೆಗೂ ಹರಿಯುತ್ತಿದೆ. ನೀರು ನಿಧಾನವಾಗಿ ಹರಿಯುತ್ತಿದ್ದು ಇದರ ವೇಗ ಹೆಚ್ಚಿಸಲು ಚೆಕ್ ಡ್ಯಾಂ ಎತ್ತರ ತಗ್ಗಿಸಲು ಹಾನಿ ಮಾಡಿದ್ದಾರೆ’ ಎಂದು ಆಕ್ರೋಶವ್ಯಕ್ತಪಡಿಸಿದರು.

‘ಅಗ್ರಹಾರ ಕೆರೆಯಿಂದ ಜನ್ನಘಟ್ಟ ಕೆರೆಗೆ ಸಂಪರ್ಕವಿರುವ ಪಾಲಾರ್ ನದಿಯಲ್ಲಿ ಜಿಲ್ಲಾ ಪಂಚಾಯಿತಿಯಿಂದ 9 ಚೆಕ್ ಡ್ಯಾಂ ನಿರ್ಮಿಸಲಾಗಿದ್ದು, ಇವು ತುಂಬಲು ಸುಮಾರು ದಿನಗಳೇ ಬೇಕಾಯಿತು. ಇದರಿಂದ ಕೆರೆಗೆ ನೀರು ನಿಧಾನವಾಗಿ ಹರಿಯುತ್ತಿದೆ. ಪಂಪ್ ಹೌಸ್ ಬಳಿಗೆ ನೀರು ಬಾರದ ಹಿನ್ನಲೆಯಲ್ಲಿ ಜನ್ನಘಟ್ಟ ಗ್ರಾಮಸ್ಥರೇ ಎತ್ತರ ಕಡಿಮೆ ಮಾಡಿಸಿರಬಹುದು’ ಎಂದು ದೂರಿದರು.

ADVERTISEMENT

‘ಗುತ್ತಿಗೆ ಕಂಪನಿಯ ಕಾರ್ಮಿಕರು ಬುಧವಾರ ಬೆಳಿಗ್ಗೆ ಚಿಟ್ನಹಳ್ಳಿ ಬಳಿಯ ಚೆಕ್‌ಡ್ಯಾಂನ ಎತ್ತರ ತಗ್ಗಿಸುವ ಸಲುವಾಗಿ ಯಂತ್ರದ ಸಹಾಯದಿಂದ ಕೊರೆಯುವ ಕೆಲಸ ಆರಂಭಿಸಿದ್ದರು. ವಿಷಯ ತಿಳಿದ ಚಿಟ್ನಹಳ್ಳಿ ಮತ್ತು ಅಂಕತಟ್ಟಿಯ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಕೊರೆಯುವ ಯಂತ್ರ,ಟ್ರ್ಯಾಕ್ಟರ್ ವಾಹನಗಳನ್ನು ವಶಕ್ಕೆ ಪಡೆದುಕೊಂಡು ಚೆಕ್‌ಡ್ಯಾಂ ಎತ್ತರ ತಗ್ಗಿಸಲು ಹೇಳಿದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುವಂತೆ ತಾಕೀತು ಮಾಡಿದರು.

ಸ್ಥಳಕ್ಕೆ ಆಗಮಿಸಿದ ಕೆಸಿ ವ್ಯಾಲಿ ಯೋಜನೆ ಎಂಜಿನಿಯರ್ ಕೃಷ್ಣಪ್ಪ ಮಾತನಾಡಿ, ‘ಕೆಸಿ ವ್ಯಾಲಿ ನೀರು ಹರಿಯುವ ಪ್ರದೇಶದಲ್ಲಿ ನಿರ್ಮಿಸಿರುವ ಚೆಕ್‌ಡ್ಯಾಂಗಳ ಎತ್ತರ ಹೆಚ್ಚಿದ್ದರಿಂದ ನೀರು ಸರಾಗವಾಗಿ ಹರಿಯುತ್ತಿಲಿಲ್ಲ. ತಗ್ಗು ಪ್ರದೇಶದ ಜಮೀನಿಗೂ ನೀರು ಹರಿಯುತ್ತಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನಲೆಯಲ್ಲಿ ಎತ್ತರ ತಗ್ಗಿಸಲಾಗುತ್ತಿದೆ ಹೊರತು ಹೊಡೆಯುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.