ADVERTISEMENT

ಲೆಕ್ಕ ಪರಿಶೋಧನೆ: ಜ.19ರ ಗಡುವು

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 14:16 IST
Last Updated 15 ಜನವರಿ 2022, 14:16 IST

ಕೋಲಾರ: ಅವಿಭಜಿತ ಜಿಲ್ಲೆಯ 197 ಸೊಸೈಟಿಗಳ ಪೈಕಿ ಲೆಕ್ಕ ಪರಿಶೋಧನೆ ಮುಗಿಸದ 3 ಸೊಸೈಟಿಗಳ ಸಿಇಒಗಳನ್ನು ತರಾಟೆಗೆ ತೆಗೆದುಕೊಂಡು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ‘ಮೈಗಳ್ಳತನ ಬಿಟ್ಟು ಜ.19ರೊಳಗೆ ಲೆಕ್ಕ ಪರಿಶೋಧನೆ ಪೂರ್ಣಗೊಳಿಸಿ’ ಎಂದು ತಾಕೀತು ಮಾಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪ್ಯಾಕ್ಸ್‌) ಅಧ್ಯಕ್ಷರು ಮತ್ತು ಸಿಇಒಗಳೊಂದಿಗೆ ಇಲ್ಲಿ ಶನಿವಾರ ಆನ್‌ಲೈನ್‌ ಮೂಲಕ ಸಭೆ ನಡೆಸಿದ ಅವರು, ‘ಮಾಲೂರು ತಾಲ್ಲೂಕಿನ ಟೇಕಲ್, ಚಿಂತಾಮಣಿ ತಾಲ್ಲೂಕಿನ ಯಗವಕೋಟೆ, ಟಿ.ಗೊಲ್ಲಹಳ್ಳಿ ಸೊಸೈಟಿಯ ಆಡಿಟ್ ಪೂರ್ಣಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪ್ಯಾಕ್ಸ್‌ಗಳ ಸಂಪೂರ್ಣ ಗಣಕೀಕರಣವು ದೇಶದಲ್ಲೇ ಐತಿಹಾಸಿಕ ಕ್ರಮ. ಈ ಸಾಧನೆ ಸುಲಭದ ಮಾತಲ್ಲ. ಹಬ್ಬ, ಭಾನುವಾರದ ರಜೆ ಮರೆತು ಕೆಲಸ ಮಾಡಿ. ಸೊಸೈಟಿ ಸಂಬಳ ನೀಡಿದರೆ ಮಾತ್ರ ಹಬ್ಬ ಆಚರಣೆ ಸಾಧ್ಯ. ಅನ್ನ ನೀಡುವ ಜಾಗ. ಬಡವರ ಕೆಲಸ ಮಾಡಿ ಮುಗಿಸಿ’ ಎಂದು ಸೂಚಿಸಿದರು.

ADVERTISEMENT

‘ಚಿಂತಾಮಣಿ ತಾಲ್ಲೂಕಿನ ಕುರುಬೂರು, ಬಾಗೇಪಲ್ಲಿ ತಾಲ್ಲೂಕಿನ ನಲ್ಲಪ್ಪರೆಡ್ಡಿಪಲ್ಲಿ, ಗೌರಿಬಿದನೂರು ತಾಲ್ಲೂಕಿನ ಕಡಬೂರು, ನ್ಯಾಮಗೊಂಡ್ಲು, ನಗರಗೆರೆ ಸೊಸೈಟಿಗಳ ಗಣಕೀಕರಣ ಕಾರ್ಯ ಅಂತಿಮ ಹಂತದಲ್ಲಿದ್ದು, ಜ.19ರೊಳಗೆ ಮುಗಿಯಲಿದೆ. ಉಳಿದ ಎಲ್ಲಾ ಸೊಸೈಟಿಗಳ ಗಣಕೀಕರಣ ಮುಗಿದಿದ್ದು, ಆನ್‌ಲೈನ್‌ ವಹಿವಾಟು ಆರಂಭಿಸಲಾಗಿದೆ’ ಎಂದು ವಿವರಿಸಿದರು.

‘ಸೊಸೈಟಿ ಮತ್ತು ಡಿಸಿಸಿ ಬ್ಯಾಂಕ್‌ ನಂಬಿರುವ ರೈತರು, ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಬೇಕು. ವಹಿವಾಟು ಪಾರದರ್ಶಕವಾಗಿದ್ದರೆ ಮಾತ್ರ ಗ್ರಾಹಕರು ನಂಬುತ್ತಾರೆ. ಕೆಲ ಪ್ಯಾಕ್ಸ್‌ಗಳ ವಹಿವಾಟಿನ ಕುರಿತು ಅನುಮಾನಗಳಿವೆ. ಹೀಗಾಗಿ ಅಲ್ಲಿ ಉಳಿತಾಯ ಖಾತೆ ತೆರೆಯುವ ಧೈರ್ಯ ಮಾಡುತ್ತಿಲ್ಲ. ಸಾಲ ಮರುಪಾವತಿಗೂ ಹಿನ್ನಡೆಯಾಗುತ್ತಿದೆ’ ಎಂದರು.

ಭದ್ರ ಬುನಾದಿ: ‘ಸೊಸೈಟಿಗಳ ಗಣಕೀಕರಣ ಒಂದು ಮೈಲಿಗಲ್ಲು. ಗ್ರಾಹಕರ ನಂಬಿಕೆ, ವಿಶ್ವಾಸಕ್ಕೆ ಭದ್ರ ಬುನಾದಿಯಾಗಲಿದೆ. ವಹಿವಾಟಿನ ಮಾಹಿತಿ ಕ್ಷಣಾರ್ಧದಲ್ಲಿ ಮೊಬೈಲ್‌ಗೆ ತಲುಪುವುದರಿಂದ ಮಹಿಳೆಯರು, ರೈತರು ಧೈರ್ಯದಿಂದ ಪ್ಯಾಕ್ಸ್‌ಗಳಲ್ಲಿ ವ್ಯವಹಾರ ಮಾಡುತ್ತಾರೆ’ ಎಂದು ಅಭಿಪ್ರಾಯಪಟ್ಟರು.

ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್‌, ವಿ-ಸಾಫ್ಟ್ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.