ADVERTISEMENT

ಆಯುರ್ವೇದ ವೈದ್ಯಕೀಯ ಕ್ಷೇತ್ರದ ಬುನಾದಿ

ಕೊರೊನಾ ಸೋಂಕಿತರಿಗೆ ಸಂಸದ ಮುನಿಸ್ವಾಮಿ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 15:07 IST
Last Updated 1 ಜೂನ್ 2021, 15:07 IST
ಆಯುಷ್ ಇಲಾಖೆಯು ಕೋಲಾರ ತಾಲ್ಲೂಕಿನ ಮಂಗಸಂದ್ರದ ಕೋವಿಡ್ ಆರೈಕೆ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸದ ಎಸ್.ಮುನಿಸ್ವಾಮಿ ಕೊರೊನಾ ಸೋಂಕಿತರಿಗೆ ನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಔಷಧಗಳನ್ನು ವಿತರಿಸಿದರು.
ಆಯುಷ್ ಇಲಾಖೆಯು ಕೋಲಾರ ತಾಲ್ಲೂಕಿನ ಮಂಗಸಂದ್ರದ ಕೋವಿಡ್ ಆರೈಕೆ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸದ ಎಸ್.ಮುನಿಸ್ವಾಮಿ ಕೊರೊನಾ ಸೋಂಕಿತರಿಗೆ ನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಔಷಧಗಳನ್ನು ವಿತರಿಸಿದರು.   

ಕೋಲಾರ: ‘ಕೊರೊನಾ ಸೋಂಕಿತರು ಆತಂಕಪಡದೆ ವೈದ್ಯರ ಸಲಹೆಯಂತೆ ಔಷಧ ಮಾತ್ರೆ ಪಡೆಯಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಔಷಧಗಳನ್ನು ಸೇವಿಸಿ ಶೀಘ್ರವಾಗಿ ಗುಣಮುಖರಾಗಬೇಕು’ ಎಂದು ಸಂಸದ ಎಸ್.ಮುನಿಸ್ವಾಮಿ ಸಲಹೆ ನೀಡಿದರು.

ಆಯುಷ್ ಇಲಾಖೆಯು ತಾಲ್ಲೂಕಿನ ಮಂಗಸಂದ್ರದ ಕೋವಿಡ್ ಆರೈಕೆ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಆಯುಷ್ ಅಭಿಯಾನದಡಿ ಪೂರೈಕೆಯಾಗಿರುವ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಔಷಧಗಳನ್ನು ಕೊರೊನಾ ಸೋಂಕಿತರಿಗೆ ವಿತರಿಸಿ ಮಾತನಾಡಿದರು.

‘ಋಷಿಮುನಿಗಳ ಪರಂಪರೆಯಿಂದ ಬಂದ ಆಯುರ್ವೇದ ಪದ್ಧತಿಯು ವೈದ್ಯಕೀಯ ಕ್ಷೇತ್ರದ ಬುನಾದಿ. ಆಯುರ್ವೇದ ಪದ್ಧತಿಯು ಉತ್ತಮ ಆರೋಗ್ಯಕ್ಕೆ ಸಹಕಾರಿ. ಪ್ರಸ್ತುತ ದೇಶದ ಎಲ್ಲೆಡೆ ಜನರ ಆರೋಗ್ಯ ಪರಿಪಾಲನೆಗೆ ಆಯುರ್ವೇದ ಪದ್ಧತಿ ಬಳಕೆಯಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ದೇಸಿ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿ ಆರೋಗ್ಯದ ಅನೇಕ ಸಮಸ್ಯೆಗಳಿಗೆ ಉತ್ತಮ ಪರಿಹಾರವಿದೆ. ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಆಯುರ್ವೇದ ಔಷಧಗಳು ಹೆಚ್ಚು ಪರಿಣಾಮಕಾರಿ. ಆದರೆ, ಆಯುರ್ವೇದ ವೈದ್ಯಕೀಯ ಪದ್ಧತಿ ಬಗ್ಗೆ ಜನರಿಗೆ ಹೆಚ್ಚಿನ ಅರಿವಿಲ್ಲ’ ಎಂದು ವಿಷಾದಿಸಿದರು.

‘ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಔಷಧಗಳ ಸೇವನೆಯಿಂದ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಅನಾರೋಗ್ಯ ಸಮಸ್ಯೆಗೆ ಜನರ ಜೀವನ ಕ್ರಮವೇ ಮುಖ್ಯ ಕಾರಣ. ಆಹಾರ ಸೇವನೆ ಕ್ರಮದ ಬಗ್ಗೆ ಜನ ಆಸಕ್ತಿ ವಹಿಸದ ಕಾರಣ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಆಯಾ ದೇಶ ಮತ್ತು ಪರಿಸರಕ್ಕೆ ತಕ್ಕಂತೆ ಆಹಾರ ಸೇವನೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಪೌರಾಣಿಕ ಹಿನ್ನೆಲೆ: ‘ದೇವತೆಗಳು ಹಾಗೂ ದಾನವರು ಸಮುದ್ರ ಮಥನ ನಡೆಸಿದ ಸಂದರ್ಭದಲ್ಲಿ ಅಮೃತ ಕಲಶದೊಂದಿಗೆ ಆಯುರ್ವೇದ ಶಾಸ್ತ್ರದ ಜತೆ ಧನ್ವಂತರಿ ಉದ್ಭವಿಸಿದ್ದು ಎಂಬ ಪೌರಾಣಿಕ ಹಿನ್ನೆಲೆಯಿದೆ. ಯೋಗವು ಆಯುರ್ವೇದದ ಭಾಗವಾಗಿದೆ’ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಘವೇಂದ್ರ ಶೆಟ್ಟಿಗಾರ್ ವಿವರಿಸಿದರು.

‘ಭಾರಧ್ವಜ, ಆತ್ರೇಯ, ಕಶ್ಯಪ ಋಷಿಮುನಿಗಳು ಆಯುರ್ವೇದ ಕಲಿತು ಭೂಮಿಯಲ್ಲಿ ವಾಸಿಸುತ್ತಿದ್ದ ಜನರ ಆರೋಗ್ಯ ಪಾಲನೆಗಾಗಿ ಪ್ರಚುರಪಡಿಸಿದರು ಎಂದು ಗ್ರಂಥಗಳಲ್ಲಿ ಉಲ್ಲೇಖವಿದೆ. ಆಹಾರ, ನಿದ್ರೆ, ಬ್ರಹ್ಮಚರ್ಯವು ಆಯುರ್ವೇದದ ಉಪಸ್ತಂಭಗಳು. 5 ರೀತಿಯ ವೈದ್ಯ ಪದ್ಧತಿಗಳನ್ನು ಆಯುರ್ವೇದ ಒಳಗೊಂಡಿದೆ. ಬೇರೆ ಬೇರೆ ವಿಧಾನದಿಂದ ಕಾಯಿಲೆ ತಡೆಗಟ್ಟಿ ಆರೋಗ್ಯ ಉತ್ತಮಗೊಳಿಸಬಹುದು’ ಎಂದರು.

‘ಆಯಸ್ಸು ಮತ್ತು ಆರೋಗ್ಯ ಹೆಚ್ಚಿಸುವ ಜ್ಞಾನ ಪಡೆಯುವುದೇ ಆಯುರ್ವೇದ. ವೇದ ಎಂದರೆ ಜ್ಞಾನ. ಜೀವನದ ಆಯಸ್ಸು 100 ವರ್ಷಗಳಾದರೆ ಅದರಲ್ಲಿ ಬ್ರಹ್ಮ ಚರ್ಯದ ನಂತರ ಬರುವ ಗೃಹಸ್ತಾಶ್ರಮವು ಅತ್ಯಂತ ಮುಖ್ಯವಾದ ಆಶ್ರಮ. ಸಮಾಜವನ್ನು ಮುಂದುವರಿಸಿಕೊಂಡು ಹೋಗುವ ಮತ್ತು ಎಲ್ಲರಿಗೂ ಆಶ್ರಯ ನೀಡುವ ಆಶ್ರಮವಾಗಿದೆ’ ಎಂದು ತಿಳಿಸಿದರು.

ಸಹಾಯಕ ಆಡಳಿತಾಧಿಕಾರಿ ಎಂ.ನಾಗಲಕ್ಷ್ಮಿ, ಆಯುಷ್ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.