ADVERTISEMENT

ಆಯುಷ್ಮಾನ್‌ ಭಾರತ್‌: ಕೋಲಾರ ಜಿಲ್ಲೆ ಪ್ರಥಮ

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:31 IST
Last Updated 24 ಸೆಪ್ಟೆಂಬರ್ 2019, 19:31 IST

ಕೋಲಾರ: ‘ಆಯುಷ್ಮಾನ್ ಭಾರತ್‌ ಮತ್ತು ಆರೋಗ್ಯ ಕರ್ನಾಟಕ ಯೋಜನೆ ಸೇವೆ ನೀಡುವಲ್ಲಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆ ಜಾರಿಯಾಗಿ ಸೆ.23ಕ್ಕೆ ಒಂದು ವರ್ಷವಾಯಿತು. ಈ ಅವಧಿಯಲ್ಲಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು ಹಾಗೂ ನೋಂದಾಯಿತ ಆಸ್ಪತ್ರೆಗಳು ಉತ್ತಮ ಆರೋಗ್ಯ ಸೇವೆ ನೀಡಿ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ದಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ವರ್ಷಕ್ಕೆ ₹ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಇದರಲ್ಲಿ ಕೇಂದ್ರ ಸರ್ಕಾರ ಶೇ 60ರಷ್ಟು ಮತ್ತು ರಾಜ್ಯ ಸರ್ಕಾರ ಶೇ 40ರಷ್ಟು ವೆಚ್ಚ ಭರಿಸುತ್ತದೆ. ಎಪಿಎಲ್ ಕುಟುಂಬಗಳಿಗೆ ಸರ್ಕಾರ ಶೇ 30ರಷ್ಟು (ವರ್ಷಕ್ಕೆ ಗರಿಷ್ಠ ₹ 1.50 ಲಕ್ಷ) ಚಿಕಿತ್ಸಾ ವೆಚ್ಚ ಭರಿಸುತ್ತದೆ. ಉಳಿದ ಶೇ 70ರಷ್ಟು ವೆಚ್ಚವನ್ನು ರೋಗಿ ನೀಡಬೇಕು’ ಎಂದು ವಿವರಿಸಿದರು.

ADVERTISEMENT

‘ಜಿಲ್ಲೆಯಲ್ಲಿ 1,75,881 ಆರೋಗ್ಯ ಕಾರ್ಡ್‌ ನೋಂದಣಿ ಮಾಡಲಾಗಿದೆ. ಈವರೆಗೆ ₹ 2.50 ಕೋಟಿ ಅನುದಾನದಲ್ಲಿ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ. ಸುವರ್ಣ ಆರೋಗ್ಯ ಟ್ರಸ್ಟ್ ಸೌಲಭ್ಯದಡಿ ಜಿಲ್ಲೆಗೆ ಈವರೆಗೆ ₹ 1.11 ಕೋಟಿ ಬಿಡುಗಡೆಯಾಗಿದೆ’ ಎಂದು ಮಾಹಿತಿ ನೀಡಿದರು.

ಸೆ.30 ಮತ್ತು ಅ.1ರಂದು ದೆಹಲಿಯಲ್ಲಿ ನಡೆಯುವ ಆರೋಗ್ಯ ಮಂಥನ ಕಾರ್ಯಕ್ರಮದಲ್ಲಿ ಶ್ರೀ ನರಸಿಂಹರಾಜ (ಎಸ್ಎನ್ಆರ್) ಜಿಲ್ಲಾ ಆಸ್ಪತ್ರೆಗೆ ಉತ್ತಮ ಆಸ್ಪತ್ರೆ ಪ್ರಶಸ್ತಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ ನಕಲಿ ಕ್ಲಿನಿಕ್‌ಗಳನ್ನು ಬಂದ್ ಮಾಡಿಸಲಾಗಿದೆ. ಕರ್ನಾಟಕ ವೈದ್ಯಕೀಯ ಮಂಡಳಿ ಅಥವಾ ಆಯುಷ್‌ ಇಲಾಖೆಯಲ್ಲಿ ಅನುಮತಿ ಪಡೆದಿದ್ದರೆ ಮಾತ್ರ ಅವಕಾಶ ನೀಡಲಾಗುತ್ತದೆ’ ಎಂದರು.

ಸ್ವಚ್ಛತಾ ಕಾರ್ಯಕ್ರಮ: ‘ಕೇಂದ್ರ ಸರ್ಕಾರವು ಅ.2ರಂದು ದೇಶದೆಲ್ಲೆಡೆ ಸ್ವಚ್ಛತಾ ಸೇವಾ ಅರಿವು ಕಾರ್ಯಕ್ರಮ ಹಮ್ಮಿಕೊಂಡಿದೆ. ಆ ದಿನ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಸಂಗ್ರಹಿಸಿ ಪುನರ್ ಬಳಕೆ ಮಾಡುವ ಕಾರ್ಖಾನೆಗಳಿಗೆ ನೀಡಲಾಗುವುದು. ಕೋಲಾರ ನಗರದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ರಸ್ತೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಕೆಲ ರಸ್ತೆಗಳ ದುರಸ್ತಿ ಕಾರ್ಯವನ್ನು ನಗರಸಭೆಯು ಮೂರ್ನಾಲ್ಕು ದಿನದಲ್ಲಿ ಆರಂಭಿಸಲಿದೆ. ಎಲ್ಲಾ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆ ನಿರ್ಮಾಣ ಮಾಡಲಿದೆ’ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ದರ್ಶನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.