ADVERTISEMENT

ಬೆಂಗಳೂರು ಉತ್ತರ ವಿ.ವಿ ಘಟಿಕೋತ್ಸವ: ಮಕ್ಕಳ ಸಾಧನೆಗೆ ಪೋಷಕರ ಚಪ್ಪಾಳೆ!

46 ಅಭ್ಯರ್ಥಿಗಳಿಗೆ ಚಿನ್ನ, 23,126 ಅಭ್ಯರ್ಥಿಗಳಿಗೆ ಪದವಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 5:25 IST
Last Updated 2 ಆಗಸ್ಟ್ 2025, 5:25 IST
ಘಟಿಕೋತ್ಸವದಲ್ಲಿ ಚಿನ್ನದ ಪದಕಕ್ಕೆ ಭಾಜನರಾದ ಅಭ್ಯರ್ಥಿಗಳು ಪದಕ, ಪ್ರಮಾಣಪತ್ರ ತೋರಿಸಿ ಸಂಭ್ರಮಿಸಿದರು
ಘಟಿಕೋತ್ಸವದಲ್ಲಿ ಚಿನ್ನದ ಪದಕಕ್ಕೆ ಭಾಜನರಾದ ಅಭ್ಯರ್ಥಿಗಳು ಪದಕ, ಪ್ರಮಾಣಪತ್ರ ತೋರಿಸಿ ಸಂಭ್ರಮಿಸಿದರು    

ಕೋಲಾರ: ವೇದಿಕೆ ಹತ್ತಿ ಮಕ್ಕಳು ರಾಜ್ಯಪಾಲರಿಂದ ಪದಕ ಪಡೆಯುತ್ತಿದ್ದರೆ ಇತ್ತ ಸಭಾಂಗಣದಲ್ಲಿ ಕುಳಿತಿದ್ದ ಪೋಷಕರಲ್ಲಿ ಅತೀವ ಖುಷಿ. ಭಾವುಕತೆ ತುಂಬಿದ್ದ ಕಂಗಳಿಂದ ಮಕ್ಕಳ ಸಾಧನೆ ನೋಡುತ್ತಲೇ ಚಪ್ಪಾಳೆ ತಟ್ಟುತ್ತಿದ್ದರು.

ನಂದಿನಿ ಪ್ಯಾಲೇಸ್‌ನಲ್ಲಿ ಶುಕ್ರವಾರ ನಡೆದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 5ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕಂಡುಬಂದ ದೃಶ್ಯಗಳಿವು.

ವಿವಿಧ ಕೋರ್ಸ್‌ಗಳಲ್ಲಿ ಪ್ರಥಮ ರ‍್ಯಾಂಕ್‌ ಪಡೆದ ಅಭ್ಯರ್ಥಿಗಳಲ್ಲಿ ಸಾಧನೆಯ ಸಂಭ್ರಮ, ಸಂತೃಪ್ತಿಯ ಕ್ಷಣ. ಪೋಷಕರಲ್ಲಿ ಸಮಾಧಾನದ ಭಾವ. ಆ ಸಂಭ್ರಮದ ಜೊತೆಗೆ ತಮ್ಮ ಮುಂದಿನ ಕನಸುಗಳನ್ನು ಹಂಚಿಕೊಳ್ಳುತ್ತಿದ್ದರು. ಅವರಿಗೆ ಸ್ನೇಹಿತರು ಅಭಿನಂದನೆ ಸಲ್ಲಿಸುತ್ತಾ ಖುಷಿಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದರು.

ADVERTISEMENT

ಕೆಲವರಿಗೆ ಉನ್ನತ ಶಿಕ್ಷಣ, ಪಿಎಚ್‌.ಡಿ ಮಾಡುವಾಸೆ, ಇನ್ನು ಕೆಲವರಿಗೆ ಉದ್ಯೋಗ ಗಿಟ್ಟಿಸಿಕೊಳ್ಳುವ ತವಕ. ಅವರೆಲ್ಲಾ ನಂದಿನಿ ಪ್ಯಾಲೇಸ್‌ನ ಹೊರ ಆವರಣದಲ್ಲಿ ಪೋಷಕರು, ಗೆಳೆಯರೊಂದಿಗೆ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು.

2024–25ನೇ ಸಾಲಿನಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಯ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಪ್ರಥಮ ರ‍್ಯಾಂಕ್‌ ಪಡೆದಿರುವ 46 ವಿದ್ಯಾರ್ಥಿಗಳಿಗೆ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಹಾಗೂ ಸಮ ಕುಲಾಧಿಪತಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಚಿನ್ನದ ಪದಕ ಪ್ರದಾನ ಮಾಡಿದರು. 23,126 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಸ್ನಾತಕೋತ್ತರ (ಪಿಜಿ) ವಿಭಾಗದಲ್ಲಿ 26 ವಿದ್ಯಾರ್ಥಿಗಳು, ಸ್ನಾತಕ (ಯುಜಿ) ವಿಭಾಗದಲ್ಲಿ 18 ವಿದ್ಯಾರ್ಥಿಗಳು, ಬಿ.ಇಡಿ ಹಾಗೂ ಬಿಪಿ.ಇಡಿ ವಿಭಾಗದಲ್ಲಿ ತಲಾ ಒಬ್ಬರು ರ‍್ಯಾಂಕ್‌ ಪಡೆದಿದ್ದಾರೆ. ಸ್ನಾತಕ ವಿಭಾಗದಲ್ಲಿ 12,550, ಸ್ನಾತಕೋತ್ತರ ವಿಭಾಗದಲ್ಲಿ 3,993, ಬಿ.ಎಡ್‌ ಹಾಗೂ ಬಿಪಿ.ಎಡ್ ವಿಭಾಗದಲ್ಲಿ 2,505, ಪಿಜಿ ಡಿಪ್ಲೋಮಾ ಕೋರ್ಸ್‌ನ 9 ಹಾಗೂ ಸ್ವಾಯತ್ತ ಕಾಲೇಜುಗಳ 4,069 ಅಭ್ಯರ್ಥಿಗಳು ಸೇರಿದಂತೆ ಒಟ್ಟಾರೆ 23,126 ಅಭ್ಯರ್ಥಿಗಳು ಪದವಿ ಪ್ರಮಾಣಪತ್ರ ಪಡೆದರು.

ತಮ್ಮ ಓದಿನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕ ಸಾರ್ಥಕ ಭಾವದಲ್ಲಿ ಸಾಧಕರಿದ್ದರು. ಮುಂದಿನ ಗುರಿಯ ಕನಸುಗಳನ್ನು ಹಂಚಿಕೊಂಡರು.

ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಪೋಷಕರು ಗಣ್ಯರು ಉತ್ತರ ವಿಶ್ವವಿದ್ಯಾಲಯ ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.