ADVERTISEMENT

ರೈತನ ಬದುಕು ಹಸುನಾಗಿಸಿದ ಹೈನುಗಾರಿಕೆ

ಐದು ವರ್ಷಗಳಲ್ಲಿ 2ರಿಂದ 30ಕ್ಕೆ ಜಿಗಿದ ಹಸುಗಳ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 6:25 IST
Last Updated 25 ಜೂನ್ 2025, 6:25 IST
ಬಂಗಾರಪೇಟೆ ತಾಲ್ಲೂಕಿನ ತೊಪ್ಪನಹಳ್ಳಿಯಲ್ಲಿ ರಾಮಚಂದ್ರಪ್ಪ ಅವರ ಶೆಡ್‌ನಲ್ಲಿರುವ ಹಸುಗಳು
ಬಂಗಾರಪೇಟೆ ತಾಲ್ಲೂಕಿನ ತೊಪ್ಪನಹಳ್ಳಿಯಲ್ಲಿ ರಾಮಚಂದ್ರಪ್ಪ ಅವರ ಶೆಡ್‌ನಲ್ಲಿರುವ ಹಸುಗಳು   

ಬಂಗಾರಪೇಟೆ: ಕೃಷಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಭಾವನೆ ಬಹುತೇಕರಲ್ಲಿದೆ. ಆದರೆ, ತಾಲ್ಲೂಕಿನ ತೊಪ್ಪನಹಳ್ಳಿ ಗ್ರಾಮದ ರೈತ ರಾಮಚಂದ್ರಪ್ಪ ಅವರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ವಾರ್ಷಿಕ ₹15 ಲಕ್ಷ ಆದಾಯ ಗಳಿಸುತ್ತಿದ್ದಾರೆ. 

ರಾಮಚಂದ್ರಪ್ಪ ಐದು ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿದ್ದು, ಹಾಲು, ಸಗಣಿ, ಗೊಬ್ಬರವನ್ನು ಮಾರಾಟ ಮಾಡಿ, ಉತ್ತಮ ಆದಾಯ ಗಳಿಸುತ್ತಿದ್ದಾರೆ. 

ರಾಮಚಂದ್ರಪ್ಪ ಅವರು ಮದಲಿಗೆ ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದರು. ಸ್ವ ಉದ್ಯೋಗ ಆರಂಭಿಸಿ, ಸ್ವಾವಲಂಬಿಯಾಗಿ ಜೀವಿಸಬೇಕು ಎಂಬ ಆಕಾಂಕ್ಷೆಯೊಂದಿಗೆ ಅವರು ಎಲೆಕ್ಟ್ರಿಕ್ ಉದ್ಯೋಗವನ್ನು ತೊರೆದು, ಗ್ರಾಮಕ್ಕೆ ಬಂದರು. 

ADVERTISEMENT

ಹಸುಗಳನ್ನು ನೆರಳಿನಲ್ಲಿ ಕಟ್ಟಿಹಾಕಲು ನೈಸರ್ಗಿಕವಾಗಿ ಮತ್ತು ಕಡಿಮೆ ಬಂಡವಾಳದಲ್ಲಿ ತೆಂಗಿನ ಗೆರೆಗಳಲ್ಲಿ ಮೇಲ್ಚಾವಣಿ ನಿರ್ಮಿಸಿದ್ದು, ಹಸುಗಳನ್ನು ಹೆಚ್ಚಿನ ಸೆಕೆಯಿಂದ ರಕ್ಷಣೆ ನೀಡಿದೆ. 

50x20 ಅಡಿ ಉದ್ದದ ಎರಡು ಕೊಟ್ಟಿಗೆಗಳನ್ನು ನಿರ್ಮಿಸಿದ್ದು, 20 ಹಸುಗಳನ್ನು ಸಾಕುತ್ತಿದ್ದಾರೆ. ಈ ಹಸುಗಳು ಪ್ರತಿನಿತ್ಯ 70–80 ಲೀಟರ್ ಹಾಲು ಕರೆಯುತ್ತವೆ. ಈ ಮೂಲಕ ಶ್ರದ್ಧೆಯಿಂದ ಹೈನುಗಾರಿಕೆ ಮಾಡಿದರೆ, ಉತ್ತಮ ಸಂಪಾದನೆ ಮಾಡಬಹುದು ಎಂಬುದಕ್ಕೆ ಇವರು ಮಾದರಿಯಾಗಿದ್ದಾರೆ. 

ಎಚ್‌ಎಫ್, ಜೆರ್ಸಿ ಮತ್ತು ಆಲ್ ಬ್ಲಾಕ್ ಹಸುಗಳನ್ನು ಸಾಕಣೆ ಮಾಡಲಾಗುತ್ತಿದೆ. ಎಚ್‌ಎಫ್‌ ತಳಿಯಲ್ಲಿ ಹೆಚ್ಚು ಹಾಲು, ಜೆರ್ಸಿಯಲ್ಲಿ ಕೊಬ್ಬಿನಾಂಶ, ಆಲ್ ಬ್ಲಾಕ್‌ ತಳಿಯಲ್ಲಿ ಈ ಎರಡೂ ಅಂಶ ಇರಲಿದೆ. 

ಹಸುಗಳ ಮೇವಿಗಾಗಿ ಮೂರು ಎಕರೆ ಜಮೀನು ಗುತ್ತಿಗೆ ಪಡೆದಿದ್ದು, ಎರಡು ಎಕರೆಯಲ್ಲಿ ಹಸುಗಳಿಗೆ ಅಗತ್ಯವಿರುವ ಹುಲ್ಲು ಬೆಳೆಯುತ್ತಿದ್ದಾರೆ. ಮತ್ತೊಂದು ಎಕರೆಯಲ್ಲಿ ಮುಸುಕಿನ ಜೋಳೆ ಬೆಳೆದಿದ್ದಾರೆ. ಸುಮಾರು ಐದು ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿರುವ ಅವರು, ಮೊದಲಿಗೆ ಎರಡು ಹಸುವಿನಿಂದ ಇದೀಗ 10 ಕರುಗಳು ಸೇರಿದಂತೆ ಒಟ್ಟಾರೆ 30 ಹಸುಗಳಿವೆ. ಜತೆಗೆ, ಇದೀಗ ಇವರು ನಾಲ್ಕು ಮಂದಿಗೆ ಉದ್ಯೋಗವನ್ನೂ ನೀಡಿದ್ದಾರೆ. 

ತಿಂಗಳಿಗೆ ಒಂದು ಲಕ್ಷದವರೆಗೆ ಆದಾಯ ಗಳಿಸುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ. ಇದರ ಜೊತೆಗೆ ಗೊಬ್ಬರದ ಗೊಂಡಿಗಳನ್ನು ನಿರ್ಮಾಣ ಮಾಡಿದ್ದು, ಮತ್ತೆ ಅದೆ ಗೊಬ್ಬರವನ್ನು ಬಳಿಸುವ ಮೂಲಕ ಸಾವಯವ ಕೃಷಿಯನ್ನು ಮಾಡುತ್ತಿದ್ದಾರೆ ಮತ್ತು ಗೊಬ್ಬರವನ್ನು ಮಾರಾಟ ಮಾಡಿ ಇದರಿಂದಲೂ ಆದಾಯವನ್ನು ಗಳಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.