ADVERTISEMENT

ಕಂಟಕವಾಗಿರುವ ಕೆಡಿಎ ಉದ್ಯಾನ

ಉದ್ಯಾನದ ತುಂಬ ಕಳೆ ಗಿಡಗಳು; ವಿಷಜಂತುಗಳ ಕಾಟ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 10:32 IST
Last Updated 10 ಏಪ್ರಿಲ್ 2020, 10:32 IST
ಬಂಗಾರಪೇಟೆ ಅಬ್ದುಲ್‌ ವಹಾಬ್ ಬಡಾವಣೆಯಲ್ಲಿ ಕೆಡಿಎ ನಿರ್ಮಿಸಿರುವ ಉದ್ಯಾನದ ಬಾಗಿಲಿಗೆ ಬೀಗ ಹಾಕಲಾಗಿದೆ
ಬಂಗಾರಪೇಟೆ ಅಬ್ದುಲ್‌ ವಹಾಬ್ ಬಡಾವಣೆಯಲ್ಲಿ ಕೆಡಿಎ ನಿರ್ಮಿಸಿರುವ ಉದ್ಯಾನದ ಬಾಗಿಲಿಗೆ ಬೀಗ ಹಾಕಲಾಗಿದೆ   

ಬಂಗಾರಪೇಟೆ: ಕೆಜಿಎಫ್ ಅಭಿವೃದ್ಧಿ ಪ್ರಾಧಿಕಾರ ಪಟ್ಟಣದ ಅಬ್ದುಲ್ ವಹಾಬ್ ಬಡಾವಣೆಯಲ್ಲಿ ನಿರ್ಮಿಸಿರುವ ಉದ್ಯಾನ ಮತ್ತು ಸುತ್ತಲಿನ ಜಾಗ ನಿವಾಸಿಗಳಿಗೆ ಕಂಟಕ ತಂದೊಡ್ಡುವಂತಿದೆ. ದಶಕದ ಹಿಂದೆ ನಿರ್ಮಿಸಿದ ಈ ಉದ್ಯಾನ ಇದುವರೆಗೂ ಉದ್ಘಾಟನೆ ಆಗದಿರುವುದು ನಿವಾಸಿಗಳ ದೌರ್ಭಾಗ್ಯವಾಗಿದೆ.

ಉದ್ಯಾನದ ಪೂರ್ವ ಮತ್ತು ಪಶ್ಚಿಮಕ್ಕೆ ಮೋರಿ ನೀರು ನಿಂತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಏಳೆಂಟು ಗುಂಟೆ ವಿಸ್ತೀರ್ಣದಲ್ಲಿ ಸುಮಾರು ₹7 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಉದ್ಯಾನದಲ್ಲಿ ಮರಗಿಡಗಳು ಬೆಳೆದುನಿಂತಿವೆ. ಉದ್ಯಾನದ ಒಳಗೆ ಓಡಾಡಲು ಸುತ್ತ ಸಿಮೆಂಟ್ ಇಟ್ಟಿಗೆ, ಹಾಸುಗಳನ್ನು ಹಾಕಲಾಗಿದೆ. ಸುತ್ತುಗೋಡೆ ಮೇಲೆಲ್ಲಾ ಕಳೆಬಳ್ಳಿಗಳು
ಆವರಿಸಿದೆ.

ADVERTISEMENT

ಉದ್ಯಾನ ನಿರ್ಮಾಣದಿಂದ ನಿವಾಸಿಗಳಿಗೆ ಅನುಕೂಲಕ್ಕಿಂತ ಅನಾನುಕೂಲ ಹೆಚ್ಚಿದೆ. ಉದ್ಯಾನದಲ್ಲಿ ಅನುಪಯುಕ್ತ ಗಿಡಗಳು ಬೆಳೆದು ಪೊದೆಗಳಾಗಿವೆ. ಹಾವುಗಳ ಓಡಾಟ ಹೆಚ್ಚಿದ್ದು, ಉದ್ಯಾನದ ಪಕ್ಕ ಓಡಾಡಲು ಭಯ ಪಡುವಂತಾಗಿದೆ.

ಉದ್ಯಾನಕ್ಕೆ ಅಂಟಿಕೊಂಡತೆ ಮುಜರಾಯಿ ಇಲಾಖೆಗೆ ಸೇರಿದ ಎರಡು ಎಕರೆ ಮತ್ತು ಖಾಸಗಿ ಜಾಗವಿದೆ. ಅಲ್ಲಿ ಮುಳ್ಳು ಮರಗಳು ಬೆಳೆನಿಂತಿವೆ. ಅದೇ ಜಾಗದಲ್ಲಿ ಕೋಳಿ ಪುಕ್ಕ, ಪ್ಲಾಸ್ಟಿಕ್ ವಸ್ತುಗಳ ರಾಶಿ ಹರಡಿದೆ.

ಬಂಗಾರಪೇಟೆಯ ಶಂಶುದ್ದಿನ್ ಬಾಬು ಅವರೇ ಕೆಜಿಎಫ್ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಉದ್ಯಾನವನ್ನು ಸಾರ್ವಜನಿಕ ಬಳಕೆಗೆ ತೆರೆಯುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

*
ಮುನಿಯಮ್ಮ ಬಡಾವಣೆ ರಸ್ತೆ ಮತ್ತು ಅಡ್ಡ ರಸ್ತೆಗಳ ನಾಮಫಲಕ ಅಳವಡಿಸಿ ವರ್ಷ ಕಳೆದಿದೆ. ಇದುವರೆಗೂ ಅದರ ಮೇಲೆ ಏನನ್ನೂ ಬರೆದಿಲ್ಲ.
–ಶಿವಕುಮಾರ್, ಮುನಿಯಮ್ಮ ಬಡಾವಣೆ

*
ಪಟ್ಟಣದ ಅಬ್ದುಲ್ ಖಾದರ್ ಬಡಾವಣೆಯಲ್ಲಿನ ಉದ್ಯಾನ ಸಾರ್ವಜನಿಕ ಬಳಕೆಗೆ ತೆರದೇಯಿಲ್ಲ. ಅನೈತಿಕ ಚಟುವಟಿಕೆಗೆ ಎಡೆಮಾಡಿದೆ.
–ಸೋಮಶೇಖರ್, ನಿವೃತ್ತ ಪೊಲೀಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.