ಬಂಗಾರಪೇಟೆ: ತಾಲ್ಲೂಕಿನ ಗಡಿಭಾಗ ಹಾಗೂ ಕಾಡಂಚಿನ ಗ್ರಾಮ ಕದಿರಿನತ್ತ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ, ಅವುಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.
ಕದಿರಿನತ್ತ ಗ್ರಾಮದ ಸುತ್ತಲೂ ಅರಣ್ಯ ಪ್ರದೇಶವಿದೆ. ಕಾಡಾನೆ ಸೇರಿದಂತೆ ಇನ್ನಿತರ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ರೈತರು ಬೆಳೆದ ಬೆಳೆ ಕಾಡುಪ್ರಾಣಿಗಳ ದಾಳಿಗೆ ಹಾನಿಯಾಗುತ್ತಿದೆ. ಆನೆ ದಾಳಿಯಿಂದ ಈವರೆಗೆ 16 ರೈತರು ಮೃತಪಟ್ಟಿದ್ದಾರೆ. ಗ್ರಾಮಸ್ಥರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಕಾಡು ಪ್ರಾಣಿಗಳ ಹಾವಳಿ ಮತ್ತು ಆನೆಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಳವಂಚಿ ಗ್ರಾಮದಿಂದ ಕದಿರಿನತ್ತ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 5 ಕಿ.ಮೀ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಜನ ಮತ್ತು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಹೊಸ ರಸ್ತೆ ನಿರ್ಮಾಣಕ್ಕೆ ಮನವಿ ಮಾಡಲಾಗಿದೆ ಎಂದರು.
ಗ್ರಾಮದಲ್ಲಿ ಹೈಮಾಸ್ಟ್ ದೀಪ ಅಳವಡಿಸಿ, ಗಡಿ ಭಾಗಗಳ ಗ್ರಾಮಗಳು ಹಾಗೂ ತೋಟದ ಮನೆಗಳಿಗೆ ಸೋಲಾರ್ ದೀಪ ಅಳವಡಿಸಲು ಸೂಚಿಸಲಾಗಿದೆ. ಗ್ರಾಮಸ್ಥರು ಸರ್ವೆ ನಂಬರ್‌ಗಳಲ್ಲಿ ಮನೆ ನಿರ್ಮಿಸಿಕೊಂಡ ಕಾರಣ ಖಾತಾ ಮಾಡಿಸಿಕೊಂಡು ಪಂಚಾಯಿತಿಯವರು ತೆರಿಗೆ ಕಟ್ಟಿಸಿಕೊಳ್ಳುತ್ತಿರುವ ಆರೋಪವಿದೆ. ಆದರೆ ಇದು ಸೂಕ್ತವಲ್ಲ ಎಂದರು.
ಗ್ರಾಮದ ಸುತ್ತ ಬೆಟ್ಟಗಳಿರುವ ಕಾರಣ ಮಳೆ ನೀರು ವ್ಯರ್ಥವಾಗಿ ತಮಿಳುನಾಡು ಭಾಗಕ್ಕೆ ಹರಿದುಹೋಗುತ್ತಿದೆ. ಇದರ ತಡೆಗಾಗಿ ರೈತ ಸಂಘದವರು ಮನವಿ ಮಾಡಿದ್ದು, ಅಲ್ಲಿ ಚೆಕ್ ಡ್ಯಾಂ ನಿರ್ಮಿಸಿದ್ದಲ್ಲಿ, ನೀರಿನ ವ್ಯರ್ಥ ತಡೆಯಬಹುದು. ಈ ನಿಟ್ಟಿನಲ್ಲಿ ಜಂಟಿ ಸಮೀಕ್ಷೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳಲಾಗುದು ಎಂದು ಹೇಳಿದರು.
ಗ್ರಾಮಕ್ಕೆ ಬೆಳಗ್ಗೆ ಮತ್ತು ಸಂಜೆ ಮಾತ್ರವೇ ಎರಡು ಬಾರಿ ಸರ್ಕಾರಿ ಬಸ್ ಸೌಲಭ್ಯವಿದ್ದು, ಮಧ್ಯಾಹ್ನವೂ ಬಸ್ ಸೇವೆ ಒದಗಿಸಲು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಈ ಕುರಿತು ಸಾರಿಗೆ ಇಲಾಖೆ ಜೊತೆ ಚರ್ಚಿಸಿ ಬಸ್ ಸೇವೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಮಲ್ಲೇಶನಪಾಳ್ಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅರಣ್ಯ ಇಲಾಖೆಯು ಮುಚ್ಚಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹೀಗಾಗಿ, ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗುವುದು. ಗಡಿ ಭಾಗದ ಗ್ರಾಮಗಳ ಜನರಿಗೆ ಯಾವುದೇ ತೊಂದರೆ ಉಂಟಾಗದಂತೆ ಜಿಲ್ಲಾಡಳಿತ ಕ್ರಮ ವಹಿಸಲಿದೆ. ಕಾಡಂಚಿನ ಗ್ರಾಮಗಳು ಹಾಗೂ ಗಡಿ ಗ್ರಾಮಗಳ ಪಟ್ಟಿಯನ್ನು ತಯಾರಿಸಲಾಗುತ್ತಿದ್ದು, ಸಮಗ್ರ ಅಭಿವೃದ್ಧಿಗೆ ಜಿಲ್ಲಾಡಳಿತ ಯೋಜನೆ ರೂಪಿಸುತ್ತಿದೆ ಎಂದರು.
ಈ ವೇಳೆ ಜಿಲ್ಲಾ ಪಂಚಾಯಿತಿ ಇಇ ಅಮರಪ್ಪ, ಅರಣ್ಯ ಉಪ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗರ್, ತಹಶೀಲ್ದಾರ್ ಎಸ್. ವೆಂಕಟೇಶಪ್ಪ, ಇಒ ರವಿಕುಮಾರ್, ಎಇಇ ರವಿಕುಮಾರ್, ರವಿಚಂದ್ರ, ಸಿಐ ನಾರಾಯಣಸ್ವಾಮಿ, ಶ್ರೀಲಕ್ಷ್ಮಿ, ದೋಣಿಮಡಗು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಜಯಣ್ಣ, ತೊಪ್ಪನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭಾಕರ ರೆಡ್ಡಿ, ಪಿಡಿಒ ವಸಂತ್ ಕುಮಾರ್, ಎಚ್. ಮಧುಕುಮಾರ್, ಚಿನ್ನಪ್ಪಯ್ಯ, ಶ್ವೇತಾ, ನಾರಾಯಣಗೌಡ, ಶ್ರೀರಾಮ್, ಗುಲ್ಲೇಟಿ , ಶ್ರೀರಾಮ, ಸಂತೋಷ್ ರಾವ್, ಅಪ್ಪೋಜಿರಾವ್ ಹಾಜರಿದ್ದರು.
ಸ್ಮಶಾನಕ್ಕಾಗಿ 2 ಎಕರೆ ಜಮೀನು
ಗ್ರಾಮದಲ್ಲಿ ಸ್ಮಶಾನಕ್ಕಾಗಿ ಜಾಗವಿಲ್ಲ ಎಂಬ ಕಾರಣಕ್ಕಾಗಿ ಈಗಾಗಲೇ ಎರಡು ಎಕರೆ ಜಮೀನನ್ನು ಸರ್ಕಾರ ಮಂಜೂರು ಮಾಡಿದೆ. ಆದರೆ ಗ್ರಾಮಸ್ಥರೊಬ್ಬರು ಕೋರ್ಟ‌್ ಮೂಲಕ ಇಂಜೆಕ್ಷನ್ ಆದೇಶ ತಂದಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿ ತಿಳಿಸಿದರು. ಆದರೆ ಸ್ಮಶಾನಕ್ಕಾಗಿ ಮಂಜೂರು ಆಗಿರುವ ಭೂಮಿಯನ್ನು ಇತರರಿಗೆ ನೀಡಲು ಸಾಧ್ಯವಿಲ್ಲ. ಹೀಗಾಗಿ ಇಂಜೆಕ್ಷನ್ ಆದೇಶ ತಂದವರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು. ಒಂದು ವೇಳೆ ಅರ್ಜಿದಾರರು ಇದಕ್ಕೂ ಒಪ್ಪದಿದ್ದರೆ ಇಂಜೆಕ್ಷನ್ ಆದೇಶ ತೆರವುಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು. ಗ್ರಾಮದ ಸರ್ಕಾರಿ ಶಾಲಾ ಕಟ್ಟಡ ಬಹಳ ಶಿಥಿಲಗೊಂಡಿದ್ದು ವಿದ್ಯಾರ್ಥಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಶಿಥಿಲಗೊಂಡ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಡಿಡಿಪಿಐಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.