ಬಂಗಾರಪೇಟೆ: ಉತ್ತಮ ಮಳೆ, ಉತ್ತಮ ಬಿತ್ತನೆ ಮತ್ತು ಬೆಳೆಗಳಿಗೆ ಅಗತ್ಯವಿರುವಷ್ಟು ರಸಗೊಬ್ಬರದ ಕೊರತೆಯಿಂದಾಗಿ ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಯೂರಿಯಾ ಖರೀದಿಗಾಗಿ ಹರಸಾಹಸ ಪಡುವಂತಾಗಿದೆ.
ನಿಗದಿತ ಪ್ರಮಾಣದ ರಸಗೊಬ್ಬರ ಪೂರೈಕೆಯಾಗದ ಕಾರಣ ತಮ್ಮ ಬೆಳೆಗಳಿಗೆ ಬೇಕಿರುವಿರುವಷ್ಟು ಯೂರಿಯಾ ಲಭ್ಯವಾಗಲಿದೆಯೇ ಎಂಬ ಆತಂಕಕ್ಕೆ ಸಿಲುಕಿದ್ದಾನೆ ಅನ್ನದಾತ. ಯೂರಿಯಾ ಪಡೆಯಲು ಸಾಲುಗಟ್ಟಿ ನಿಲ್ಲುವ ರೈತರ ಮಧ್ಯೆ ಕೆಲವೊಮ್ಮೆ ವಾಗ್ವಾದ ನಡೆಯುವುದು ಸಾಮಾನ್ಯ ಎಂಬಂತಾಗಿದೆ.
ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಯೂರಿಯಾ ಅಭಾವ ಸೃಷ್ಟಿಯಾಗಿದ್ದು, ರೈತರು ರಸಗೊಬ್ಬರಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ರಸಗೊಬ್ಬರ ಮಳೆಗೆಗಳಲ್ಲಿ ಯೂರಿಯಾ ಲಭ್ಯವಿಲ್ಲ. ಹೀಗಾಗಿ, ಮಂಗಳವಾರ ಟಿಎಪಿಸಿಎಂಎಸ್‌ನಲ್ಲಿ ಗೊಬ್ಬರ ಹಂಚಿಕೆ ಮಾಡುವುದನ್ನು ತಿಳಿದ ಸುತ್ತಮುತ್ತಲಿನ ಗ್ರಾಮಗಳ ಜನರು, ಮಳೆಗೆಯತ್ತ ದಾಂಗುಡಿ ಇಟ್ಟರು.
ಟಿಎಪಿಸಿಎಂಎಸ್ ಮಳಿಗೆಯಲ್ಲಿ ಲಭ್ಯವಿರುವ ದಾಸ್ತಾನಿನಲ್ಲಿ ಎಲ್ಲ ರೈತರಿಗೂ ರಸಗೊಬ್ಬರ ಹಂಚಬೇಕಿದೆ. ಹೀಗಾಗಿ, ಒಬ್ಬ ರೈತರಿಗೆ ತಲಾ ಒಂದು ಅಥವಾ ಎರಡು ಚೀಲಗಳಷ್ಟು ಮಾತ್ರವೇ ಯೂರಿಯಾ ವಿತರಣೆ ಮಾಡಲಾಗುತ್ತಿದೆ. ಹತ್ತಾರು ಎಕರೆ ಜಮೀನು ಹೊಂದಿರುವ ರೈತರಿಗೆ ಒಂದು ಅಥವಾ ಎರಡು ಚೀಲದ ಯೂರಿಯಾ ಯಾವುದಕ್ಕೂ ಸಾಲದಾಗಿದೆ. ಇದರಿಂದಾಗಿ ಕಷ್ಟಪಟ್ಟು ಬಿತ್ತನೆ ಮಾಡಿದ ರಾಗಿ, ಭತ್ತ, ಹುಲ್ಲು, ಗೋವಿನ ಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳು ಹಾಳಾಗುತ್ತದೆ ಎಂಬ ಆತಂಕಕ್ಕೆ ಒಳಗಾಗಿದ್ದಾರೆ.
ಮಳೆಯಿಂದಾಗಿ ಕೆಲವು ಹೊಲಗಳಲ್ಲಿ ಬೆಳೆಯಲಾಗಿರುವ ಬೆಳೆಗಳು ಕೊಳೆಯಲಾರಂಭಿಸಿವೆ. ಯೂರಿಯಾ ಲಭ್ಯವಿದ್ದರೆ, ಬೆಳೆಗಳನ್ನು ರಕ್ಷಿಸಿಕೊಳ್ಳಬಹುದಿತ್ತು ಎಂದು ರೈತರು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.
ಸೋಮವಾರ ಟಿಎಪಿಸಿಎಂಸ್ ಕೇಂದ್ರದಲ್ಲಿ 400 ಚೀಲ ಯೂರಿಯಾ ಹಂಚಿಕೆ ಮಾಡಲಾಗಿದೆ. ಯೂರಿಯಾ ಲಭ್ಯವಾಗದ ರೈತರು ಬೇಸರದಿಂದ ಮನೆ ಕಡೆಗೆ ಹೋದರು. ಇನ್ನು ಕೆಲವು ಖಾಸಗಿ ರಸಗೊಬ್ಬರ ಮಳಿಗೆಗಳಲ್ಲಿ ಯೂರಿಯಾ ಬೆಲೆಯು ನಿಗದಿತ ಬೆಲೆಗಿಂತ ಎರಡು ಪಟ್ಟು ಹೆಚ್ಚಿದೆ. ಆದರೆ, ಬೇರೆ ದಾರಿ ಇಲ್ಲದೆ ಅನಿವಾರ್ಯವಾಗಿ ಹೆಚ್ಚಿನ ಬೆಲೆ ತೆತ್ತು ರಸಗೊಬ್ಬರ ಖರೀದಿಸುವಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.
ಡಿಎಪಿ ಕಾಂಪ್ಲೆಕ್ಸ್ 10.26.26 ರಸಗೊಬ್ಬರ ಖರೀದಿಸಿದರೆ ಮಾತ್ರ ಯೂರಿಯಾ ಕೊಡುವುದಾಗಿ ಕೆಲವು ಅಂಗಡಿ ಮಾಲೀಕರು ಹೇಳುತ್ತಿದ್ದಾರೆ. ಕೆಲವೆಡೆ ಯೂರಿಯಾವನ್ನು ಹೆಚ್ಚಿನ ಬೆಲೆಗೆ ಮಾರಲಾಗುತ್ತಿದೆ. ಕೆಲವರು ಬಿಲ್ ಸಹ ನೀಡುತ್ತಿಲ್ಲಹುಣಸನಹಳ್ಳಿ ಎನ್. ವೆಂಕಟೇಶ್ ರಾಜ್ಯ ಘಟಕದ ಅಧ್ಯಕ್ಷ ದಲಿತ ರೈತಸೇನೆ
ಹೆಚ್ಚು ಜಮೀನು ಹೊಂದಿದವರು ಮತ್ತು ಜಮೀನ್ದಾರರು ಹೆಚ್ಚು ಹಣ ತೆತ್ತು ಯೂರಿಯಾ ಖರೀದಿಸುತ್ತಿದ್ದಾರೆ. ಅಲ್ಪಸ್ವಲ್ಪ ಜಮೀನು ಇರುವ ರೈತರಿಗೆ ಅನನುಕೂಲವಾಗಿದೆ. ರೈತರಿಗೆ ಅಗತ್ಯವಿರುವಷ್ಟು ಯೂರಿಯಾವನ್ನು ಸರ್ಕಾರ ಕೊಡಬೇಕುತಿಮ್ಮಪ್ಪರಾಯಪ್ಪ ಕಾಡು ಕದೀರೇನಹಳ್ಳಿ ಗ್ರಾಮದ ರೈತ
ತಾಲ್ಲೂಕಿನಲ್ಲಿ ಯೂರಿಯಾವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಬಂದರೆ ಅಂಥ ಅಂಗಡಿ ಮಾರಾಟ ಪರವಾನಗಿ ರದ್ದು ಮಾಡಲಾಗುವುದುಪ್ರತಿಭಾ ಸಹಾಯಕ ನಿರ್ದೇಶಕಿ ಕೃಷಿ ಇಲಾಖೆ ಬಂಗಾರಪೇಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.