ಬಂಗಾರಪೇಟೆ: ‘ಹಾಲು ಒಕ್ಕೂಟದ ಎಂವಿಕೆ ಗೋಲ್ಡನ್ ಡೇರಿ, ಸೌರ ಘಟಕ, ವಿದ್ಯಾರ್ಥಿ ನಿಲಯ ಹಾಗೂ ಐಸ್ ಕ್ರೀಂ ಘಟಕ ನಿರ್ಮಾಣ ಕಾಮಗಾರಿ ವಿರುದ್ಧ ನನ್ನ ಹೋರಾಟ ಅಲ್ಲ; ಇವುಗಳ ನಿರ್ಮಾಣದ ನೆಪದಲ್ಲಿ ಲೂಟಿ ನಡೆದಿರುವ ವಿರುದ್ಧ ನನ್ನ ಹೋರಾಟ’ ಎಂದು ಶಾಸಕ ಹಾಗೂ ಕೋಮುಲ್ ನಿರ್ದೇಶಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಕೆ ಕದಿರೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ನಾನು ಯಾರ ವಿರುದ್ಧವೂ ಇಲ್ಲ, ಯಾವ ಸ್ವಾರ್ಥವನ್ನೂ ಹೊಂದಿಲ್ಲ. ನಂಜೇಗೌಡ, ಜಯಸಿಂಹ ಕೃಷ್ಣಪ್ಪ ವಿರುದ್ಧ ಫೈಟ್ ಮಾಡುತ್ತಿಲ್ಲ’ ಎಂದು ಹೇಳಿದರು.
‘ನನಗೂ ಶಾಸಕ ನಂಜೇಗೌಡ ಅವರಿಗೂ ವೈಯಕ್ತಿಕವಾಗಿ ಯಾವುದೇ ವ್ಯವಹಾರ ಸಂಬಂಧವಿಲ್ಲ. ನಾನು ಮಾಲೂರು ತಾಲ್ಲೂಕಿನಲ್ಲಿ ಕ್ರಷರ್ ಮಾಡಿಕೊಂಡಿಲ್ಲ. ಅವರು ಕಾನೂನು ಬದ್ಧವಾಗಿ ಮಾಡಿದ್ದರೆ, ನಾನು ಏಕೆ ಹೋರಾಟ ಮಾಡುತ್ತಿದ್ದೆ? ನನ್ನ ವ್ಯಾಪಾರವೇ ಬೇರೆ, ನನ್ನ ವೃತ್ತಿನೇ ಬೇರೆ. ಯಾವುದೇ ಸ್ವಾರ್ಥ ಮನೋಭಾವ ಇಲ್ಲ’ ಎಂದರು.
ಜಿಲ್ಲೆಯಲ್ಲಿ ಶ್ರೀನಿವಾಸಪುರ, ಮಾಲೂರು, ಕೋಲಾರ, ಮುಳಬಾಗಿಲು ತಾಲ್ಲೂಕಿನಲ್ಲಿ ಇರುವ ಸಂಘಗಳಿಗೆ ಹೋಲಿಕೆ ಮಾಡಿದರೆ ಬಂಗಾರಪೇಟೆ ತಾಲ್ಲೂಕಿನಲ್ಲಿ ಕಡಿಮೆ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಮುಳಬಾಗಿಲು 2, ಕೋಲಾರ 3, ಮಾಲೂರು 2, ಶ್ರೀನಿವಾಸಪುರ 2 ನಿರ್ದೇಶಕ ಕ್ಷೇತ್ರ ಮಾಡಿ ಬಂಗಾರಪೇಟೆ ಕೇವಲ ಒಬ್ಬರೇ ನಿರ್ದೇಶಕರನ್ನು ಮಾಡಲಾಗಿದೆ. ಮುತುವರ್ಜಿ ವಹಿಸಿ ತಾಲ್ಲೂಕಿನಾದ್ಯಂತ ಎಲ್ಲಾ ಗ್ರಾಮಗಳಲ್ಲಿ ಸಂಘಗಳನ್ನು ಪ್ರಾರಂಭಿಸಿದ್ದರೆ ನಮ್ಮ ತಾಲ್ಲೂಕಿನಲ್ಲೂ ಇಬ್ಬರು ನಿರ್ದೇಶಕರು ಇರುತ್ತಿದ್ದರು. ಇನ್ನೂ ಹೆಚ್ಚಿನ ಅಭಿವೃದ್ಧಿಯಾಗುತ್ತಿತ್ತು. ಇದೇ ನನ್ನ ಹೋರಾಟ ಎಂದು ನುಡಿದರು.
‘ನಮ್ಮ ತಾಲ್ಲೂಕಿನವರೇ ಮತ್ತೊಬ್ಬರು ನಿರ್ದೇಶಕ ಆಗಿದ್ದರೇ ನನಗೆ ಮತ್ತಷ್ಟು ಶಕ್ತಿ ಬರುತ್ತಿತ್ತು. ಜನ ಸಾಮಾನ್ಯರು ತಪ್ಪು ಅರ್ಥ ಮಾಡಿಕೊಂಡಿದ್ದಾರೆ. ನನ್ನ ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ. ಮಹಿಳೆಯರು ಮತ್ತು ರೈತರ ಹಾಲು ಉತ್ಪಾದನೆ ಮಾಡಲು ಎಷ್ಟು ಶ್ರಮ ಪಡಬೇಕಾಗುತ್ತದೆ ಎಂಬ ಅರಿವು ನನಗೂ ಇದೆ. ಮಹಿಳೆಯರು ಮತ್ತು ಹಾಲು ಉತ್ಪಾದಕರ ಋಣ ನನ್ನ ಮೇಲಿದೆ. ಅವರ ಅಭಿವೃದ್ಧಿಗಾಗಿ ಹೋರಾಟವನ್ನು ಮಾಡುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
‘ನಮ್ಮ ಊರಿನಲ್ಲಿ ನಮ್ಮ ಹೆಣ್ಣು ಮಕ್ಕಳು ಉತ್ಪಾದನೆ ಮಾಡುವ ಹಾಲನ್ನು ತಿರುಪತಿ ಅಭಿಷೇಕಕ್ಕೆ ಕೊಡುತ್ತಿದ್ದೇವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡು ತಯಾರಿಕೆಗೆ ನಂದಿನಿ ತುಪ್ಪವನ್ನು ನಿಲ್ಲಿಸಲಾಗಿತ್ತು. ಈಗ ಮತ್ತೆ ಲಡ್ಡು ತಯಾರಿಕೆಗೆ ತಿರುಪತಿಗೆ ನಂದಿನಿ ತುಪ್ಪವನ್ನು ಸರಬರಾಜು ಮಾಡುತ್ತಿದ್ದೇವೆ. ಗಡಿ ಕಾಯುವ ಯೋಧರಿಗೆ ನಂದಿನಿ ಹಾಲು ನೀಡುತ್ತಿದ್ದೇವೆ’ ಎಂದು ಹೇಳಿದರು.
‘ರೈತರ ಜೀವನಾಡಿ ಹೈನುಗಾರಿಕೆಯಾಗಿದೆ. ಈ ಹಿಂದೆ ರೈತರ ಜೀವನ ನಿರ್ವಹಣೆಗಾಗಿ ರೇಷ್ಮೆಯನ್ನು ಮತ್ತು ವ್ಯವಸಾಯವನ್ನು ಅವಲಂಬಿಸಿದ್ದರು. ಪ್ರತಿ ಬೆಳೆಯಲ್ಲಿಯೂ ಲಾಭ ದೊರೆಯುತ್ತಿಲ್ಲ. ಇದನ್ನು ಮನಗಂಡು ಡಾ.ವರ್ಗಿಸ್ ಕುರಿಯನ್ ಅವರು ಶ್ವೇತ ಕ್ರಾಂತಿ ಮಾಡಿದರು. ದಿವಂಗತ ಎಂ.ವಿ.ಕೃಷ್ಣಪ್ಪ ಕರ್ನಾಟಕದಲ್ಲಿ ಹೈನುಗಾರಿಕೆ ಬೆಳೆಸಿದರು. ಇವರನ್ನು ಎಲ್ಲಾ ರೈತರ ಸ್ಮರಣೆ ಮಾಡಬೇಕು. ರೈತರ ಶ್ರೇಯೋಭಿವೃದ್ಧಿಗಾಗಿ ಅವಿಭಜಿತ ಜಿಲ್ಲೆಯಲ್ಲಿ ಹಾಲು ಒಕ್ಕೂಟ ಪ್ರಾರಂಭಿಸಿದ್ದು, ಜಿಲ್ಲೆಯಾದ್ಯಂತ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಪ್ರಾರಂಭಿಸಿ ರೈತರು ಹಾಗೂ ಮಹಿಳೆಯರನ್ನು ಆರ್ಥಿಕ ಸಬಲೀಕರಣಕ್ಕೆ ಅವಕಾಶವನ್ನು ಕಲ್ಪಿಸಿದರು’ ಎಂದು ನುಡಿದರು.
ಸಭೆಯಲ್ಲಿ ಉಪ ವ್ಯವಸ್ಥಾಪಕ ಸಿ.ಎನ್.ಗಿರೀಶ್ ಗೌಡ, ವಿಸ್ತಾರಣಾಧಿಕಾರಿ ಭಾನುಪ್ರಕಾಶ್ ಎಂ.ಎಸ್., ಯಳೇಸಂದ್ರ ವಿಎಸ್ಎಸ್‌ಎನ್ ಅಧ್ಯಕ್ಷ ಮಹದೇವಪ್ಪ, ಗ್ರಾ.ಪಂ.ಉಪಾಧ್ಯಕ್ಷ ಆನಂದ್, ಅಧ್ಯಕ್ಷ ಎಂ.ಮುನಿರಾಜು, ಉಪಾಧ್ಯಕ್ಷ ರಾಜೇಂದ್ರ, ನಿರ್ದೇಶಕರಾದ ಪ್ರಸನ್ನ ಕುಮಾರ್, ವಿ.ದೇವರಾಜ್, ನಾರಾಯಣಸ್ವಾಮಿ, ವೆಂಕಟೇಶಪ್ಪ, ಚೌಡಪ್ಪ, ನಾಗರಾಜ್, ಮುನಿಯಪ್ಪ, ಸರೋಜಮ್ಮ, ನೀಲಮ್ಮ, ಮುಖ್ಯ ಕಾರ್ಯನಿರ್ವಾಹಕ ವೆಂಕಟರಾಮಪ್ಪಯ್ಯ, ಪರೀಕ್ಷಕರು ತಿಮ್ಮರಾಯಪ್ಪ, ಸಹಾಯಕ ಪ್ರವೀಣ್ ಭಾಗವಹಿಸಿದ್ದರು.
ಕೋಮುಲ್ ಸಭೆ; ಟೀ ಬಿಸ್ಕತ್ ತಿನ್ನಲ್ಲ
‘ಹಣ ಮಾಡಬೇಕೆಂದು ಕೋಮುಲ್ ಚುನಾವಣೆಗೆ ಸ್ಪರ್ಧಿಸಿ ನಾನು ನಿರ್ದೇಶಕನಾಗಿಲ್ಲ. ನಾನು ಆಡಳಿತ ಮಂಡಳಿ ಸಭೆಗೆ ಹೋದರೆ ಅಲ್ಲಿ ಟೀ ಬಿಸ್ಕತ್ ಕೂಡ ಮುಟ್ಟಲ್ಲ. ಈ ಬಗ್ಗೆ ನಾನು ಶಪಥ ಮಾಡಿದ್ದೇನೆ. ಮಹಿಳೆಯರು ಮತ್ತು ರೈತರ ಹಣವನ್ನು ಒಂದು ರೂಪಾಯಿ ಕೂಡ ಮುಟ್ಟಲ್ಲ. ಏಕೆಂದರೆ ರೈತ ಕುಟುಂಬದಲ್ಲಿ ಜನಿಸಿದ್ದು ಅವರ ಕಷ್ಟ ಮತ್ತು ನೋವಿನ ಅರಿವು ಇದೆ. ಸಾವಿರ ರೂಪಾಯಿ ಗಳಿಸಲು ಎಷ್ಟು ಕಷ್ಟ ಎಂಬುದು ಗೊತ್ತಿದೆ’ ಎಂದು ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಗೌಡಗಾರಿಕೆ ನಡೆಸಿ ತಾವು ಗೌಡರಲ್ಲವೇ?
‘ಸೋಮವಾರ ಕೋಮುಲ್ ಆಡಳಿತ ಮಂಡಳಿ ಸಭೆ ಆಯೋಜಿಸಲಾಗಿತ್ತು. ಮಗಳ ನಿಶ್ಚಿತಾರ್ಥ ಕಾರ್ಯಕ್ರಮ ಇದ್ದ ಕಾರಣ ಸಭೆ ಮುಂದೂಡುವಂತೆ ವ್ಯವಸ್ಥಾಪಕರಲ್ಲಿ ಮನವಿ ಮಾಡಿದ್ದೆ. ವ್ಯವಸ್ಥಾಪಕರು ಕೋಮಲ್ ಅಧ್ಯಕ್ಷ ಕೆ.ವೈ.ನಂಜೇಗೌಡರಿಗೆ ದೂರವಾಣಿ ಕರೆ ಮಾಡಿ ಸಭೆ ಮುಂದೂಡಲು ಮನವಿ ಮಾಡಿದ್ದು ಅದಕ್ಕೆ ಸಹಕರಿಸಿಲ್ಲ. ಅವರು ಯಾರೇ ಬಂದರೂ ಏನೇ ಆದರೂ ಸಭೆ ಮಾಡು ಎಂದು ಸೂಚಿಸಿದ್ದರು. ದೂರವಾಣಿ ಕರೆಯಲ್ಲಿ ಯಾವ ಭಾಷೆ ಬಳಸಿದ್ದಾರೆ ಎಂಬುದು ಗೊತ್ತಿದೆ. ಗೌಡಗಾರಿಕೆ ನಡೆಸಿ ತಾವು ಗೌಡರಲ್ಲವೇ’ ಎಂದು ನಾರಾಯಣಸ್ವಾಮಿ ಆಕ್ರೋಶ ಹೊರ ಹಾಕಿದರು.
ನಂಜೇಗೌಡಗೆ ಎಸ್‌ಎನ್‌ಎನ್ ತಿರುಗೇಟು:
‘ನಾನು ಎಂವಿಕೆ ಗೋಲ್ಡನ್ ಡೇರಿ ನಿರ್ಮಾಣ ಕಾಮಗಾರಿ ಮತ್ತು ಸೌರ ಘಟಕದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಎಂದು ನಂಜೇಗೌಡರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ನಿರ್ಮಾಣ ಮಾಡುತ್ತಿದ್ದಂತಹ ಕಾರ್ಯಕ್ರಮದಲ್ಲಿ ಆಡಳಿತ ಪಕ್ಷದ ಶಾಸಕನಾಗಿ ಭಾಗವಹಿಸಿದ್ದೆ. ಆಗ ನಾನು ಆಡಳಿತ ಪಕ್ಷದ ಒಬ್ಬ ಶಾಸಕನಾಗಿ ಟೀಕಿಸಿಲ್ಲ’ ಎಂದು ಎಸ್.ಎನ್.ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು. ‘ಅವರು ಸರ್ಕಾರಿ ನಿಯಮ ಗಾಳಿಗೆ ತೂರಿ ಭೂಪರಿವರ್ತನೆ ಮಾಡದೆ ಬಡ ರೈತರಿಗೆ ವಿದ್ಯಾರ್ಥಿ ನಿಲಯಕ್ಕೆ ಮಂಜೂರಾಗಿದ್ದ ಜಮೀನನ್ನು ಒತ್ತುವರಿ ಮಾಡಿಕೊಂಡು ಜಿಲ್ಲಾಧಿಕಾರಿ ಅನುಮತಿ ಇಲ್ಲದೆ ಕಾನೂನು ಬಾಹಿರವಾಗಿ ನಿರ್ಮಾಣ ಮಾಡುತ್ತಿದ್ದು ಗೊತ್ತಿಲ್ಲ ಅಣ್ಣ ನನಗೆ. ನಮ್ಮ ಮನೆಗೆ ಬಂದ ಸಂದರ್ಭದಲ್ಲಿ ಕೆಟ್ಟ ವ್ಯಕ್ತಿಯನ್ನಾದರೂ ಗೌರವಿಸುವುದು ಮನುಷ್ಯ ಧರ್ಮ’ ಎಂದು ತಿರುಗೇಟು ನೀಡಿದರು.
ಡಿಸಿಸಿ ಬ್ಯಾಂಕ್ ಹಾಳು ಮಾಡಿದ್ದು ಯಾರು?:
‘ಡಿಸಿಸಿ ಬ್ಯಾಂಕ್‌ನಲ್ಲಿ ಮಹಿಳೆಯರಿಗೆ ಬಡ್ಡಿ ರಹಿತ ಸಾಲವನ್ನು ನೀಡುತ್ತಿದ್ದೆವು. ಆದರೆ ಅದನ್ನು ಸಹ ಹಾಳು ಮಾಡಿದ ಕೀರ್ತಿ ಯಾರದ್ದು? ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಬ್ಯಾಲಹಳ್ಳಿ ಗೋವಿಂದೇಗೌಡರ ಸಹಾಯ ಪಡೆದುಕೊಂಡು ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿ ನಂತರ ಅವರನ್ನೇ ದ್ವೇಷ ಮಾಡುವುದು ಎಷ್ಟು ಸರಿ? ಜಿಲ್ಲೆಯ ಶಾಸಕರ ವೈಮನಸ್ಸಿನಿಂದ ಡಿಸಿಸಿ ಬ್ಯಾಂಕ್ ಸ್ಥಿತಿ ಶೋಚನೀಯವಾಗಿದೆ’ ಎಂದು ಎಸ್.ಎನ್.ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.