ಬಂಗಾರಪೇಟೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಹಾಗೂ ಮಹಿಳೆಯರಿಗೆ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಗೆ 2 ವರ್ಷ ತುಂಬಿದೆ. ಹೀಗಾಗಿ, ಇಲ್ಲಿನ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ಶಕ್ತಿ ಯೋಜನೆ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ‘ಮಹಿಳೆಯರನ್ನು ಸ್ವಾವಲಂಬಿ ಆಗಿಸುವ ಉದ್ದೇಶದಿಂದ ಜಾರಿಗೊಳಿಸಿದ ಶಕ್ತಿ ಯೋಜನೆಯು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ಎಲ್ಲ ಹೆಣ್ಣುಮಕ್ಕಳಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಕಲ್ಪಿಸಿಕೊಟ್ಟ ಶ್ರೇಯಸ್ಸು ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ’ ಎಂದು ಹೇಳಿದರು.
ಇಲ್ಲಿಯವರೆಗೆ ಒಟ್ಟು 500 ಕೋಟಿ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಸದುಪಯೋಗ ಪಡಿಸಿಕೊಂಡಿದ್ದಾರೆ. ಇದಕ್ಕಾಗಿ ಸರ್ಕಾರವು ₹12 ಕೋಟಿ ವೆಚ್ಚ ಮಾಡಿದೆ. ಶಕ್ತಿ ಯೋಜನೆಯು ಶಿಕ್ಷಣ, ಉದ್ಯೋಗ, ವೈದ್ಯಕೀಯ ಚಿಕಿತ್ಸೆ, ಧಾರ್ಮಿಕ ಕೇಂದ್ರಗಳಿಗೆ ಸೇರಿದಂತೆ ನಿತ್ಯ ಬದುಕಿನ ಅವಶ್ಯಕತೆಗಳಿಗಾಗಿ ಪ್ರಯಾಣಿಸುವ ಹೆಣ್ಣು ಮಕ್ಕಳಿಗೆ ಈ ಯೋಜನೆ ವರದಾನವಾಗಿದೆ ಎಂದರು.
ಪಟ್ಟಣದ ದೇಶಿಹಳ್ಳಿ ಕೆರೆ ಒತ್ತುವರಿಗೆ ಕೆಲವರು ಯತ್ನಿಸುತ್ತಿದ್ದಾರೆ. ಕೆರೆ ಜಾಗವನ್ನು ಸರ್ವೆ ಮಾಡಿಸಿ, ಒತ್ತುವರಿಯನ್ನು ತೆರವುಗೊಳಿಸಲಾಗುವುದು. ಕೆಎಸ್ಆರ್‌ಟಿಸಿ ಘಟಕದ ಆರಂಭಕ್ಕೆ ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದು, ಮೂರು ತಿಂಗಳಲ್ಲಿ ಅನುದಾನ ತಂದು ಶಂಕುಸ್ಥಾಪನೆ ಮಾಡಲಾಗುವುದು ಎಂದರು.
ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಗುಲಾಬಿ ಹೂವು ನೀಡಿ, ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ, ಪಾರ್ಥಸಾರಥಿ, ಸೈಯದ್ ಇಮ್ದಾದ್ ರಫೀಕ್, ಕೆ.ಚಂದ್ರಾರೆಡ್ಡಿ, ಕೆ.ವಿ.ನಾಗರಾಜ್, ಗೋವಿಂದ, ಗೋಪಾಲರೆಡ್ಡಿ, ಎ.ಬಾಬು, ಗೋವಿಂದಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.