ADVERTISEMENT

40 ವರ್ಷಗಳ ಬಳಿಕ ಬಂಗಾರು ತಿರುಪತಿಗೆ ಬಣ್ಣದ ಭಾಗ್ಯ

₹50 ಲಕ್ಷದಲ್ಲಿ ಗೋಪುರಗಳಿಗೆ ರಂಗಿನ ಸೊಬಗು

​ಪ್ರಜಾವಾಣಿ ವಾರ್ತೆ
Published 16 ಮೇ 2025, 5:58 IST
Last Updated 16 ಮೇ 2025, 5:58 IST
ಬಂಗಾರು ತಿರುಪತಿಯ ದೇಗುಲದ ಪ್ರವೇಶ ದ್ವಾರದ ಬೃಹತ್ ಗೋಪುರಕ್ಕೆ ಬಣ್ಣ ಮಾಡುವ ಕಾಮಗಾರಿ ಆರಂಭವಾಗಿದೆ
ಬಂಗಾರು ತಿರುಪತಿಯ ದೇಗುಲದ ಪ್ರವೇಶ ದ್ವಾರದ ಬೃಹತ್ ಗೋಪುರಕ್ಕೆ ಬಣ್ಣ ಮಾಡುವ ಕಾಮಗಾರಿ ಆರಂಭವಾಗಿದೆ   

ಬೇತಮಂಗಲ: ಬಡವರ ತಿರುಪತಿ ಎಂದೇ ಕರೆಯಲ್ಪಡುವ ಬಂಗಾರ ತಿರುಪತಿಯ ವೆಂಕಟರಮಣಸ್ವಾಮಿ ದೇವಾಲಯಕ್ಕೆ 40 ವರ್ಷಗಳ ಬಳಿಕ ಬಣ್ಣದ ಭಾಗ್ಯ ಒದಗಿಬಂದಿದ್ದು, ಎಲ್ಲಾ ಗೋಪುರಗಳಿಗೆ ಬಣ್ಣ ಬಳಿಯಲು ₹50 ಲಕ್ಷ ಅನುದಾನ ಒದಗಿ ಬಂದಿದೆ.

ಕೆಜಿಎಫ್ ತಾಲೂಕಿನ ಗುಟ್ಟಹಳ್ಳಿ (ಬಂಗಾರ ತಿರುಪತಿ)ಯ ಶ್ರೀವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿರುವ ಬೃಹತ್ ಗೋಪುರಗಳು ಮತ್ತು ದೇಗುಲದ ಮೇಲಿನ ಗೋಪುರಗಳನ್ನು ಒಳಗೊಂಡಂತೆ ಎಲ್ಲ ಗೋಪುರಗಳೂ ಹೊಸ ಬಣ್ಣಗಳಿಂದ ಕಂಗೊಳಿಸಲಿವೆ.

ದೇಗುಲದ ಆಡಳಿತ ಮಂಡಳಿಯು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸತತ ಐದಾರು ವರ್ಷಗಳಿಂದ ದೇವಾಲಯದ ಗೋಪುರಗಳಿಗೆ ಬಣ್ಣ ಮಾಡಿಸುವ ವಿಚಾರವಾಗಿ ಪತ್ರಗಳನ್ನು ಬರೆಯುತ್ತಲೇ ಇತ್ತು.

ADVERTISEMENT

ದೇಗುಲದ ಗೋಪುರಗಳಿಗೆ ಬಣ್ಣ ಮಾಡಲು ವಿವಿಧ ಇಲಾಖೆಗಳಿಂದ ಅಂದಾಜು ಪಟ್ಟಿ ತಯಾರಿಸಲು ಸೂಚಿಸಲಾಗಿತ್ತು. ಕೊನೆಯದಾಗಿ ಪಂಚಾಯತ್ ರಾಜ್ ಇಲಾಖೆಯಿಂದ ₹50 ಲಕ್ಷ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲು ಗುತ್ತಿಗೆ ನೀಡಲಾಗಿದೆ.

ಕಾಮಗಾರಿಯ ಭಾಗವಾಗಿ ಈಗಾಗಲೇ ದೇವಾಲಯದ ಆವರಣದಲ್ಲಿನ ಕೊಳದಲ್ಲಿರುವ ಗೋಪುರಕ್ಕೆ ಬಣ್ಣ ಬಳಿಯಲಾಗಿದೆ. ಮುಂದೆ ಬೃಹತ್ ಗೋಪುರಗಳಿಗೆ ಬಣ್ಣ ಮಾಡಲು ಅಗತ್ಯ ತಯಾರಿ ನಡೆಸಲಾಗಿದೆ.

ದೇವರ ದರ್ಶನಕ್ಕೆ, ಭಕ್ತರಿಗೆ ಅಡೆತಡೆ ಇಲ್ಲ: ದೇವಾಲಯದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ಅಡೆತಡೆಗಳು ಇಲ್ಲ. ಇದಕ್ಕಾಗಿ ವೆಂಕಟರಮಣಸ್ವಾಮಿ ಹಾಗೂ ಅಲವೇಲು ಮಂಗಮ್ಮ ಇಬ್ಬರಿಗೂ ಒಂದೇ ಕಡೆ ದರ್ಶನ ಭಾಗ್ಯವನ್ನು ಕಲ್ಪಿಸಲಾಗಿದೆ ಎಂದು ದೇಗುಲ ಆಡಳಿತ ಮಂಡಳಿ ತಿಳಿಸಿದೆ.

ದೇಗುಲದ ಆವರಣದಲ್ಲಿನ ಕೊಳದಲ್ಲಿರುವ ಗೋಪುರಕ್ಕೆ ಬಣ್ಣ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.