ಮುಳಬಾಗಿಲು: ಜಿಲ್ಲೆಯಾದ್ಯಂತ ಸರ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಹಾಗೂ ಬಾಕಿ ಉಳಿದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಆಗ್ರಹಿಸಿ ಇದೇ 13ರಂದು ಮುಳಬಾಗಿಲು ಸರ್ವೆ ಇಲಾಖೆ ಎದುರು ಬಾರುಕೋಲು ಚಳವಳಿ ನಡೆಸಲಾಗುವುದು ಎಂದು ರೈತ ಸಂಘಟನೆ ತಿಳಿಸಿದೆ.
ಅರಣ್ಯ ಕಚೇರಿ ಆವರಣದಲ್ಲಿ ಭಾನುವಾರ ನಡೆದ ರೈತ ಸಂಘದ ಸಭೆಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ‘ಜಿಲ್ಲೆಯಾದ್ಯಂತ 30 ಅಧಿಕಾರಿಗಳು ಏಕಕಾಲದಲ್ಲಿ ವರ್ಗಾವಣೆ ಮಾಡಿಸಿಕೊಂಡು ಬೇರೆಡೆಗೆ ಹೋಗಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಸರ್ವೆ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಇದರಿಂದ ಸಾರ್ವಜನಿಕರ ಹಲವು ಕೆಲಸಗಳು ನನೆಗುದಿಗೆ ಬಿದ್ದಿವೆ’ ಎಂದು ಹೇಳಿದರು.
ಸಾರ್ವಜನಿಕರು ಹಾಗೂ ರೈತರು ಸಲ್ಲಿಸುವ ಅರ್ಜಿಗಳಿಗೆ ಸಂಬಂಧಿಸಿ 30 ದಿನಗಳೊಳಗೆ ಕ್ರಮ ಕೈಗೊಳ್ಳಬೇಕು ಎಂಬ ಕಾನೂನು ಇದ್ದಾಗ್ಯೂ, ಅದನ್ನು ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಾರುಕೋಲು ಚಳವಳಿಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಫಾಷ, ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ವಿಜಯ್‌ಪಾಲ್, ಈಕಂಬಳ್ಳಿ ಮಂಜುನಾಥ, ಬಂಗಾರಿ ಮಂಜು, ಭಾಸ್ಕರ್, ಸುನಿಲ್ ಕುಮಾರ್, ವಿಶ್ವ ರಾಜೇಶ್, ಧರ್ಮ ನಾಗೇಶ್, ಯಲ್ಲಪ್ಪ, ಅಂಬ್ಲಿಕಲ್ ಮಂಜುನಾಥ್, ಹರೀಶ್, ಸುಪ್ರೀಂ ಚಲ, ಶೈಲಜ, ರಾಧ, ಚೌಡಮ್ಮ, ಮಂಜುಳಾ ಗೌರಮ್ಮ, ರತ್ನಮ್ಮ, ಶೋಭ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.