ADVERTISEMENT

ಮುಳಬಾಗಿಲು: ತತ್ವಪದಗಳ ಸಂತ ಬೀರಪ್ಪ ಸ್ವಾಮಿ

​ಪ್ರಜಾವಾಣಿ ವಾರ್ತೆ
ಕೆ.ತ್ಯಾಗರಾಜ್ ಎನ್.ಕೊತ್ತೂರು.
Published 28 ಮಾರ್ಚ್ 2024, 6:44 IST
Last Updated 28 ಮಾರ್ಚ್ 2024, 6:44 IST
ಮುಳಬಾಗಿಲಿನ ತತ್ವಪದಕಾರ ಬೀರಪ್ಪ ಸ್ವಾಮಿ
ಮುಳಬಾಗಿಲಿನ ತತ್ವಪದಕಾರ ಬೀರಪ್ಪ ಸ್ವಾಮಿ   

ಮುಳಬಾಗಿಲು: ಜಾತ್ಯತೀತ ಹಾಗೂ ಧರ್ಮಾತೀತ ತತ್ವ ಸಿದ್ಧಾಂತಗಳನ್ನು ತತ್ವ ಪದಗಳ ಮೂಲಕ ಸ್ವರಚನೆ ಮಾಡುವುದರ ಜತೆಗೆ ಹಾಡುತ್ತಾ ಆಧುನಿಕ ಸಂತರಾಗಿ ಹೆಸರಾಗಿದ್ದಾರೆ ಬೀರಪ್ಪ ಸ್ವಾಮಿ.

ಬೈರಕೂರು ಹೋಬಳಿಯ ಚೀಕೂರು ಹೊಸಹಳ್ಳಿ ಗ್ರಾಮದ ಬೀರಪ್ಪ ಸ್ವಾಮಿ ಗ್ರಾಮದ ಹೊರ ವಲಯದಲ್ಲಿ ಈರ್ಲಪ್ಪ ಸ್ವಾಮಿ ದೇವಾಲಯವನ್ನು ನಿರ್ಮಿಸಿ ಎಲ್ಲಾ ಜಾತಿ, ಧರ್ಮ ಹಾಗೂ ಜನಾಂಗಕ್ಕೆ ಮುಕ್ತ ಪ್ರವೇಶ ಕಲ್ಪಿಸಿದ್ದಾರೆ. ಈ ಮೂಲಕ ಜಾತಿ, ಧರ್ಮವನ್ನು ಅಳಿಸಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಜತೆಗೆ ಮನುಷ್ಯರೆಲ್ಲರೂ ಒಂದೇ ಎಂಬ ಸಂದೇಶ ಸಾರುತ್ತಾ ವಿಶಿಷ್ಟ ರೀತಿಯಲ್ಲಿ ಜನ ಸೇವೆ ಮಾಡುತ್ತಾ ಹೆಸರು ಮಾಡಿದ್ದಾರೆ.

ಈರ್ಲಪ್ಪ ಸ್ವಾಮಿ ದೇವಾಲಯವಾದರೂ ಸರ್ವ ಜನಾಂಗದ ಶಾಂತಿ ಹಾಗೂ ಸಮಾನತೆ, ಧ್ಯಾನ ಕೇಂದ್ರವಾಗಿದೆ. ಅಲ್ಲಿ ಜೀವನದ ಸತ್ಯ ಹಾಗೂ ಹುಟ್ಟು, ಸಾವಿನ ನಡುವಿನ ಅಂತರದ ಒಳಗಿನ ನಡಾವಳಿಕೆಯನ್ನು ರೂಢಿಸಿಕೊಳ್ಳಬೇಕಾದ ತತ್ವ ಸಿದ್ಧಾಂತ ಬೋಧಿಸುತ್ತಾ ಜೀವನ ಸಾಗಿಸುತ್ತಿದ್ದಾರೆ.

ADVERTISEMENT

12ನೇ ಶತಮಾನದಲ್ಲಿನ ಬಸವಣ್ಣ ಹಾಗೂ ಸಾಧು ಸಂತರಂತೆ ಸಮಾಜ ಸುಧಾರಕರಂತೆ ಕ್ರಾಂತಿಯ ಕಹಳೆ ಊದಿದ್ದಾರೆ. ಜೀವನದ ನಾನಾ ಬಗೆಯ ಸಂದೇಶವಿರುವ ಒಟ್ಟು 100 ತತ್ವ ಪದಗಳನ್ನು ರಚಿಸಿದ್ದು, ತಾವೇ ಸ್ವತಂ ತಂಬೂರಿ ಮೂಲಕ ರಾಗ ಸಂಯೋಜನೆ ಮಾಡಿ ಪ್ರತಿನಿತ್ಯ ದೇವಾಲಯದಲ್ಲಿ ಭಜನೆ ಮಾಡುತ್ತಾರೆ.

ಸುಮಾರು 50 ವರ್ಷಗಳಿಂದಲೂ ಸ್ವಯಂ ತತ್ವ ಪದಗಳನ್ನು ರಚಿಸುತ್ತಾ ಕವಿಯಾಗಿ, ಹಾಡುಗಾರರಾಗಿ ವಿಶಿಷ್ಟ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ. ಇವರ ತತ್ವಪದಗಳು ತೆಲುಗು ಭಾಷೆಗೆ ಅನುವಾದಗೊಂಡಿವೆ. ತೆಲುಗಿನಲ್ಲಿ ಬತ್ತನಪಲ್ಲಿ ಜೆ.ಮುನಿರತ್ನ ರೆಡ್ಡಿ ಕನ್ನಡದಿಂದ ತೆಲುಗು ಭಾಷೆಗೆ ಅನುವಾದಿಸಿದ್ದಾರೆ.

ಬೀರಪ್ಪ ಸ್ವಾಮಿ ಅವರು ಬರೆದಿರುವ ತತ್ವಪದಗಳು ತೆಲುಗು ಭಾಷೆಗೆ ಅನುವಾದಗೊಂಡಿರುವುದು
ಜೀವನ ನಶ್ವರವಾದದ್ದು, ಹುಟ್ಟುತ್ತಾ ಯಾರೂ ಜಾತಿ, ಮತ ಧರ್ಮ ಹಾಗೂ ಪಂಗಡ ಎಂದು ಹುಟ್ತುವುದಿಲ್ಲ.ಆದರೆ ಸಮಾಜದಲ್ಲಿ ಸಾಮಾಜಿಕ‌ ಅಸಮಾನತೆಯಲ್ಲಿ ಸಿಲುಕಿ ಎಲ್ಲರೂ ಸಮಾನರು ಎನ್ನುವುದನ್ನು ಮರೆಯುತ್ತಿದ್ದಾರೆ.ಆದ್ದರಿಂದ ಜಾತಿ ಮತಗಳಿಲ್ಲದ, ಕುಲ ಗೋತ್ರಗಳಿಲ್ಲದ ಸಮ‌ಸಮಾಜ ನಿರ್ಮಾಣವಾಗಲು ಎಲ್ಲರೂ ನಿರ್ಧರಿಸಬೇಕು.
ಬೀರ್ಲಪ್ಪ ಸ್ವಾಮಿ, ಚೀಕೂರು ಹೊಸಹಳ್ಳಿ
ಎಲ್ಲಾ ಕಡೆಗಳಲ್ಲಿ ಅಸ್ಪೃಶ್ಯತೆ ತಾಂಡವಾಡುತ್ತಿದ್ದು,ಕೆಲವು ದೇವಾಲಯಗಳಿಗೆ ಜಾತಿಯ ಕಾರಣದಿಂದ ಪ್ರವೇಶಗಳನ್ನು ನಿಷೇಧವನ್ನು ಮಾಡಿರುತ್ತಾರೆ.ಇಂತಹ ಸ್ಥಿತಿಯಲ್ಲಿ ಸ್ವತಃ ತಾವೇ ದೇವಾಲಯ ನಿರ್ಮಿಸಿ, ಧ್ಯಾನ ಕೇಂದ್ರವನ್ನಾಗಿ ರೂಪಿಸಿಕೊಂಡು ತತ್ವ ಪದಗಳ ಮೂಲಕ ಅಸಮಾನತೆಯನ್ನು ಹೊಗಲಾಡಿಸುತ್ತಿರುವ ಸೇವೆಗೆ ಬೆಲೆ ಕಟ್ಟಲಾಗದು.
ಅರಿವು ಶಿವಪ್ಪ, ಸಮಾಜ ಚಿಂತಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.