ADVERTISEMENT

ಗಲಭೆ: ಆರೋಪಿಗಳಿಗೆ ಶೋಧ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 14:14 IST
Last Updated 23 ಆಗಸ್ಟ್ 2020, 14:14 IST

ಕೋಲಾರ: ‘ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಆರೋಪಿಗಳು ಎಷ್ಟೇ ದೂರ ಹೋಗಿದ್ದರೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಗಲಭೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇಲಾಖೆಯು ಪ್ರಕರಣದ ಎಲ್ಲಾ ಆರೋಪಿಗಳ ಪತ್ತೆಗೆ ಶೋಧ ಮುಂದುವರಿಸಿದೆ. ಆರೋಪಿಗಳು ರಾಜ್ಯದ ಯಾವುದೇ ಮೂಲೆಯಲ್ಲಿದ್ದರೂ ಬಿಡುವುದಿಲ್ಲ’ ಎಂದರು.

‘ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಹಾಲಿ ಸಿಬ್ಬಂದಿ ಮೇಲೆ ಕಾರ್ಯ ಒತ್ತಡ ಹೆಚ್ಚಿದೆ. ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡುತ್ತೇವೆ. ಪೊಲೀಸ್‌ ಕಾನ್‌ಸ್ಟೆಬಲ್‌ಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದ ಕೆಲ ಪೊಲೀಸ್‌ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಂಡಿದ್ದೇವೆ’ ಎಂದು ವಿವರಿಸಿದರು.

ADVERTISEMENT

‘ಕೋವಿಡ್–19 ಸಂಕಷ್ಟದ ಪರಿಸ್ಥಿತಿಯಲ್ಲಿ ಪೊಲೀಸರು ಉತ್ತಮ ಸೇವೆ ಸಲ್ಲಿಸಿದ್ದಾರೆ. ಪ್ರಾಣದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸೇವೆ ಸ್ಮರಿಸಬೇಕು. ಕೋವಿಡ್‌ ಕರ್ತವ್ಯದ ವೇಳೆ ಕೆಲ ಸಿಬ್ಬಂದಿ ಮೃತಪಟ್ಟಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.