ಕೋಲಾರ: ‘ರಾಜ್ಯ ಕಾಂಗ್ರೆಸ್ ಸರ್ಕಾರವು ಆಡಳಿತದಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಡವರ ಮೇಲೆ ತೆರಿಗೆ ಹೊರೆ ಹಾಕುತ್ತಿದ್ದು, ಪರಿಶಿಷ್ಟ ಸಮುದಾಯದ ₹13 ಸಾವಿರ ಕೋಟಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಜನ ವಿರೋಧಿ ಆಡಳಿತ ಖಂಡಿಸಿ ಆ.11ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಡಳಿತ ಭವನಕ್ಕೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟಿಸಲಿದ್ದಾರೆ’ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ನಗರ ಹೊರವಲಯದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನೆಪದಲ್ಲಿ ಭೋವಿ ಅಭಿವೃದ್ಧಿ ನಿಗಮ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ಮಂಡಳಿ, ಆದಿಜಾಂಭವ ಅಭಿವೃದ್ಧಿ ಮಂಡಳಿ ಸೇರಿದಂತೆ ಎಲ್ಲಾ ಅಭಿವೃದ್ಧಿ ನಿಗಮ ಮಂಡಳಿಗಳಿಗೆ ಮಂಜೂರು ಮಾಡಿದ್ದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಆರೋಪಿಸಿರು.
ಬಜೆಟ್‍ನಲ್ಲಿ ಮೀಸಲಿಟ್ಟದ್ದ ಪರಿಶಿಷ್ಟರ ಅನುದಾನವನ್ನು ವಾಪಸ್ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.
‘ಕೆಆರ್‌ಎಸ್ ಜಲಾಶಯಕ್ಕೆ ಶಿಲಾನ್ಯಾಸ ಮಾಡಿದ್ದು ಟಿಪ್ಪು ಸುಲ್ತಾನ್ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ತಪ್ಪು ಮಾಹಿತಿ ನೀಡಿ ಇತಿಹಾಸವನ್ನು ತಿರುಚಲು ಪ್ರಯತ್ನಿಸಿದ್ದಾರೆ. ಇದು ಖಂಡನೀಯ. ಈ ಕೂಡಲೇ ಅವರ ರಾಜೀನಾಮೆ ನೀಡಿ ಜನರ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.
‘ಮೈಸೂರು ಮಹಾರಾಜರ ಕುಟುಂಬದ ಮೇಲಿರುವ ದ್ವೇಷಕ್ಕೆ, ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸಲು ಸಿದ್ದರಾಮಯ್ಯ ಅವರು ಮಹದೇವಪ್ಪ ಬಾಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ಲಾಭ ಮಾಡಿಕೊಳ್ಳಲು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.
‘ವೇಮಗಲ್ –ಕುರಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಿಗಳನ್ನು ಕೈಗೊಂಬೆಗಳನ್ನಾಗಿ ಮಾಡಿಕೊಂಡಿದೆ. ಬಿಜೆಪಿ–ಜೆಡಿಎಸ್ ಮೈತ್ರಿಕೂಟವನ್ನು ಗುರಿಯಾಗಿಸಿಕೊಂಡು ಸಾಮಾನ್ಯ ಮುಖಂಡರ ಮೇಲೆ ದಾಳಿ ಮಾಡಿಸುತ್ತಿರುವುದು ಖಂಡನೀಯ’ ಎಂದರು.
‘ಇದೇ ಆಗಸ್ಟ್ 14ರಂದು ಬಿಜೆಪಿಯ ಮೋರ್ಚಾ ಸಂಘಟನೆಗಳ ನೇತೃತ್ವದಲ್ಲಿ ಹರ್ ಗರ್ ತಿರಂಗ್ ನೆನಪಿನಾರ್ಥವಾಗಿ ಬೈಕ್ ರಾಲಿ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸ ಬೇಕು .ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದೆ’ ಎಂದು ನುಡಿದರು.
ವಕೀಲ ಪ್ರಕೋಷ್ಠದ ರಾಜ್ಯಾಧ್ಯಕ್ಷ ವಸಂತ ಕುಮಾರ್ ಮಾತನಾಡಿ, 2024ರ ಚುನಾವಣೆಯಲ್ಲಿ ಅಕ್ರಮಗಳು ನಡೆದಿದ್ದರೆ ರಾಹುಲ್ ಗಾಂಧಿ ಕಾನೂನಾತ್ಮಕವಾಗಿ ಹೋರಾಡಲಿ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಮುಖಂಡರಾದ ಸಿ.ಡಿ.ರಾಮಚಂದ್ರ, ವಿಜಯಕುಮಾರ್, ಕೆಂಬೋಡಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ಹಾರೋಹಳ್ಳಿ ವೆಂಕಟೇಶ್, ವಕೀಲರಾದ ಮಂಜುನಾಥ್, ನಾಗೇಂದ್ರ, ಓಹೀಲೇಶ್, ಶೀಗೇಹಳ್ಳಿ ಸುಂದರ್, ಮಹೇಶ್, ರಾಜೇಶ್ ಸಿಂಗ್, ನಾಮಾಲ್ ಮಂಜುನಾಥ್ ಇದ್ದರು.
‘ಪ್ರಸ್ತುತ ಸರ್ಕಾರವು ಏನಿದ್ದರೂ ಗುದ್ದಲಿ ಪೂಜೆಗಳಿಗೆ ಮಾತ್ರ ಸೀಮಿತವಾಗಿದೆ. ಕ್ಷೇತ್ರಕ್ಕೆ ₹100 ಕೋಟಿ ತಂದಿದ್ದೇನೆ ₹200 ಕೋಟಿ ತಂದಿದ್ದೇನೆ ಎಂದು ಉಡಾಫೆ ಬಿಡುವ ಮೂಲಕ ಚುನಾವಣೆಯಲ್ಲಿ ಮತದಾರರನ್ನು ಯಾಮಾರಿಸಲು ಮುಂದಾಗಿದ್ದಾರೆ’ ಎಂದು ಎಸ್.ಮುನಿಸ್ವಾಮಿ ಆರೋಪಿಸಿದರು.
‘ವೇಮಗಲ್–ಕುರಗಲ್ ಪಟ್ಟಣ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ–ಜೆಡಿಎಸ್ ನಡುವೆ ಯಾವುದೇ ಭಿನ್ನಮತ ಇಲ್ಲ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಎಲ್ಲರನ್ನೂ ಸಮಾಧಾನಪಡಿಸಲಾಗಿದೆ. ಜೆಡಿಎಸ್– ಬಿಜೆಪಿ ಎಂಬ ಭೇದಭಾವವಿಲ್ಲದೆ ಎನ್‌ಡಿಎ ಅಭ್ಯರ್ಥಿಗಳೆಂದು ನಾವು ಪರಿಗಣಿಸಿದ್ದೆವು. ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಎರಡು ಪಕ್ಷಗಳ ಮುಖಂಡರು ಪ್ರತಿ ವಾರ್ಡ್ ಸಂಚರಿಸಿ ಗೆಲ್ಲುವ ಅಭ್ಯರ್ಥಿಗಳನ್ನು ಗುರುತಿಸಿದ್ದೇವೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.