ADVERTISEMENT

ಈಗ ಸಿದ್ದರಾಮಯ್ಯ ಕಾಲ; ಮುಂದೆ ನಮ್ಮ ಕಾಲ

ಬಿಜೆಪಿ ಕೇವಲ ಚುನಾವಣೆ, ರಾಜಕೀಯಕ್ಕೆ ಸಿಮೀತವಾಗಿಲ್ಲ: ಮುಖಂಡರು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 6:07 IST
Last Updated 14 ಸೆಪ್ಟೆಂಬರ್ 2025, 6:07 IST
ಕೋಲಾರದಲ್ಲಿ ಶನಿವಾರ ನಡೆದ ಬಿಜೆಪಿ ಸೇವಾ ಪಾಕ್ಷಿಕ ಜಿಲ್ಲಾ ಕಾರ್ಯಾಗಾರದಲ್ಲಿ ವೇಮಗಲ್‌–ಕುರುಗಲ್‌ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಪಕ್ಷದ ಸದಸ್ಯರನ್ನು ಮುಖಂಡರು ಸನ್ಮಾನಿಸಿದರು
ಕೋಲಾರದಲ್ಲಿ ಶನಿವಾರ ನಡೆದ ಬಿಜೆಪಿ ಸೇವಾ ಪಾಕ್ಷಿಕ ಜಿಲ್ಲಾ ಕಾರ್ಯಾಗಾರದಲ್ಲಿ ವೇಮಗಲ್‌–ಕುರುಗಲ್‌ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಪಕ್ಷದ ಸದಸ್ಯರನ್ನು ಮುಖಂಡರು ಸನ್ಮಾನಿಸಿದರು   

ಕೋಲಾರ: ಬಿಜೆಪಿ ಕೇವಲ ಚುನಾವಣೆ ಹಾಗೂ ರಾಜಕೀಯಕ್ಕೆ ಸಿಮೀತವಾಗಿಲ್ಲ. ಸಾಮಾಜಿಕ ಚಟುವಟಿಕೆಗಳಿಗೂ ಒತ್ತು ನೀಡುತ್ತಿದೆ. ಇವು ಸಾಕಾರಗೊಳ್ಳುವಂತೆ ಕಾರ್ಯಕರ್ತರು ಮಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಬಿಜೆಪಿ ಜಿಲ್ಲಾ ಉಸ್ತುವಾರಿ ಕೇಶವಪ್ರಸಾದ್ ಹೇಳಿದರು.

ನಗರ ಹೊರವಲಯದಲ್ಲಿ ಶನಿವಾರ ಬಿಜೆಪಿ ಹಮ್ಮಿಕೊಂಡಿದ್ದ ಸೇವಾ ಪಾಕ್ಷಿಕ ಜಿಲ್ಲಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ದೇಶಕ್ಕಾಗಿ ಶ್ರಮಿಸಿದ ಗಣ್ಯರ ಹೆಸರಿನಲ್ಲಿ ಅಭಿಯಾನ ನಡೆಯುತ್ತಿದ್ದು, ಇದರ ಯಶಸ್ಸಿಗೆ ಸಹಕರಿಸಬೇಕು ಎಂದರು.

ADVERTISEMENT

ಸೆ. 17ರಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನ. ಸೆ. 23ರಂದು ದೀನ್ ದಯಾಳ್ ಉಪಾಧ್ಯಾಯ ಜಯಂತಿ ಹಾಗೂ ಅ. 2ರಂದು ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಗಾಂಧಿ ಜಯಂತಿ ಇರುವುದರಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದು ರಾಜಕೀಯ ರಹಿತ ಕಾರ್ಯಕ್ರಮವಾಗಿದ್ದು, ಪಕ್ಷಾತೀತವಾಗಿ ಸಮುದಾಯಗಳನ್ನು ಭಾಗಿಯಾಗಿಸಿಕೊಂಡು ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು.

ಮಂಡಲದಿಂದ ಜಿಲ್ಲಾ ಮಟ್ಟದ ತನಕ ಆರೋಗ್ಯ ಶಿಬಿರ, ಸಸಿ ನಡೆಯುವ ಕಾರ್ಯಕ್ರಮ, ರಕ್ತದಾನ ಶಿಬಿರ ನಡೆಸಬೇಕು, ದೇವಾಲಯ, ಬಸ್ ನಿಲ್ದಾಣದಲ್ಲಿ ಸ್ವಚ್ಛಾತಾ ಅಭಿಯಾನ, ಕಲ್ಯಾಣಿ ಸ್ವಚ್ಛತೆ ಕಾರ್ಯಕ್ರಮ ಕೈಗೊಳ್ಳಬೇಕು. ಇದನ್ನು ಬಿಜೆಪಿ ಮಾಡಿದ ಕಾರ್ಯ ಎಂದು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಪ್ರತಿ ವಲಯದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳು ವಿವಿಧ ಮೋರ್ಚಾಗಳಲ್ಲಿ ಇದ್ದಾರೆ. ಅವರು ಸಲಹೆ ಸೂಚನೆಗಳನ್ನು ಪಡೆದುಕೊಂಡು ಮಂಡಲ ಮಟ್ಟದಿಂದ ಜಿಲ್ಲಾ ಮಟ್ಟದ ತನಕ ಅಭಿಯಾನ ನಡೆಸಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ‘ಸೇವಾ ಪಾಕ್ಷಿಕ ಅಭಿಯಾನದ ಅವಧಿಯಲ್ಲಿ ವಿವಿಧ ಸೇವಾ ಚಟುವಟಿಕೆಗಳ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವುದು ನಮ್ಮ ಉದ್ದೇಶವಾಗಿದೆ. ಪ್ರತಿ ವರ್ಷದಂತೆ ಈ ವರ್ಷವು ಅಭಿಯಾನ ಯಶಸ್ವಿಗೊಳಿಸಬೇಕು, ಇದರ ಜವಾಬ್ದಾರಿ ಮಂಡಲ ಹಾಗೂ ಪದಾಧಿಕಾರಿಗಳ ಮೇಲಿದೆ’ ಎಂದು ನುಡಿದರು.

ರಾಜಕೀಯ ಬಿಟ್ಟು ನಾಯಕರ ಜನ್ಮ ದಿನಾಚರಣೆಯ ಪ್ರಯುಕ್ತ ಸೇವಾ ಪಾಕ್ಷಿಕ ಅಡಿಯಲ್ಲಿ ನಾಯಕರಾದ ದಿನ್ ದಯಾಳ್, ನರೇಂದ್ರ ಮೋದಿ, ಗಾಂಧಿ ಜಯಂತಿ ಅಂಗವಾಗಿ ಸಾಮಾಜಿಕ ಕಾರ್ಯ ಹಮ್ಮಿಕೊಳ್ಳಲಾಗಿದೆ. ಕೇವಲ ರಾಜಕೀಯಕ್ಕೆ ಸಿಮೀತಗೊಳ್ಳದೆ ಜನರೊಂದಿಗೆ ಬೆರೆತು ಸಮಸ್ಯೆಗಳನ್ನು ಪಟ್ಟಿ ಮಾಡಲಾಗುವುದು. ಆನಂತರ ಸರ್ಕಾರದ ಗಮನಕ್ಕೆ ತಂದು ಇತ್ಯರ್ಥಪಡಿಸುವ ಕೆಲಸ ಮಾಡಲಾಗುವುದು ಎಂದರು.

ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ‘ಆರ್‌ಎಸ್‍ಎಸ್ ಸ್ಥಾಪನೆಯಾಗಿ 100 ವರ್ಷ ಪೂರೈಸಿದೆ. ದೇಶದ ರಕ್ಷಣೆ, ಧರ್ಮದ ರಕ್ಷಣೆ, ದೇಶ ಭಕ್ತರ ರಕ್ಷಣೆಗಾಗಿ ಸ್ಥಾಪನೆಯಾಗಿದೆ’ ಎಂದು ಹೇಳಿದರು.

ಬಂಗಾರಪೇಟೆಯಲ್ಲಿ ಪ್ಯಾಲೆಸ್ಟೀನ್‌ ಬಾವುಟ ಹಾರಾಟ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲಿಲ್ಲ. ಆದರೆ, ಸಿ.ಟಿ.ರವಿ, ರಾಜೀವ್ ವಿರುದ್ಧ ರಾಜ್ಯ ಸರ್ಕಾರ ದೂರು ದಾಖಲು ಮಾಡಿದೆ. ಇದೀಗ ಸಿದ್ದರಾಮಯ್ಯ ಅವರ ಕಾಲ. ಗ್ಯಾರಂಟಿ ಯೋಜನೆಗಳನ್ನು ಹೇಳಿ ಜನರ ದಾರಿ ತಪ್ಪಿಸಿದ್ದೀರಿ. ಮುಂದಿನ ದಿನಗಳಲ್ಲಿ ನಮ್ಮ ಕಾಲವೂ ಬರುತ್ತದೆ. ಇದಕ್ಕೆಲ್ಲ ಜನರ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ವೇಮಗಲ್‌–ಕುರುಗಲ್‌ ಪಟ್ಟಣ ಪಂಚಾಯಿತಿಯ ಬಿಜೆಪಿ ನೂತನ ಸದಸ್ಯರನ್ನು ಸನ್ಮಾನಿಸಲಾಯಿತು.

ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್ ಮಾತನಾಡಿದರು. ಕಾರ್ಯಾಗಾರದಲ್ಲಿ ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ವೈ.ಸಂಪಂಗಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್, ಜಿಲ್ಲಾ ಮಾಧ್ಯಮ್‌ ಪ್ರಮುಖ್‌ ಪ್ರವೀಣಗೌಡ, ಸಹ ಮಾಧ್ಯಮ್‌ ಪ್ರಮುಖ್‌ ಕೆಂಬೋಡಿ ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಮಮತಮ್ಮ, ಅರುಣಮ್ಮ, ವಾಸುದೇವ ಇದ್ದರು.

ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.