ADVERTISEMENT

ಕೋಲಾರ: ಜಿಲ್ಲೆಯಲ್ಲಿ ‘ಬ್ಲ್ಯಾಕ್ ಫಂಗಸ್‌’ ಆಟಾಟೋಪ

ಕೋವಿಡ್‌ ಸಾವಿನ ದವಡೆಯಿಂದ ಪಾರಾದವರಿಗೆ ಶಿಲೀಂಧ್ರ ಸೋಂಕಿನ ಕಂಟಕ

ಜೆ.ಆರ್.ಗಿರೀಶ್
Published 16 ಮೇ 2021, 14:12 IST
Last Updated 16 ಮೇ 2021, 14:12 IST
ಎಂ.ಸೆಲ್ವಮಣಿ
ಎಂ.ಸೆಲ್ವಮಣಿ   

ಕೋಲಾರ: ಕೋವಿಡ್‌–19 ಸಾವಿನ ದವಡೆಯಿಂದ ಪಾರಾಗಿ ಬಂದಿದ್ದ 12 ಮಂದಿಗೆ ಶಿಲೀಂಧ್ರ (ಬ್ಲ್ಯಾಕ್ ಫಂಗಸ್‌) ಸೋಂಕು ತಗುಲಿರುವುದು ದೃಢಪಟ್ಟಿದ್ದು, ಜಿಲ್ಲೆಯಲ್ಲೂ ಬ್ಲ್ಯಾಕ್ ಫಂಗಸ್‌ನ ಆಟಾಟೋಪ ಆರಂಭವಾಗಿದೆ.

ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದವರಲ್ಲಿ ಬ್ಲ್ಯಾಕ್‌ ಫಂಗಸ್‌ನ ಲಕ್ಷಣ ಗೋಚರಿಸಿದ್ದು, ಜಿಲ್ಲೆಯ ಜನ ಆತಂಕಗೊಂಡಿದ್ದಾರೆ. ಈಗಾಗಲೇ ಕೋವಿಡ್‌ 2ನೇ ಅಲೆಯಿಂದ ತತ್ತರಿಸಿರುವ ಜನರಲ್ಲಿ ಶಿಲೀಂಧ್ರ ಸೋಂಕು ಮತ್ತಷ್ಟು ಭಯ ಹುಟ್ಟಿಸಿದೆ.

ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ಹೋಗಿದ್ದ 12 ಮಂದಿಗೆ ಮೂರು ವಾರದ ಬಳಿಕ ಶಿಲೀಂದ್ರ ಸೋಂಕು ತಗುಲಿದ್ದು, ಅವರ ಮೂಗಿನಲ್ಲಿ ರಕ್ತಸ್ರಾವವಾಗುತ್ತಿದೆ. ಜತೆಗೆ ಕಣ್ಣುಗಳ ಕೆಳ ಭಾಗದಲ್ಲಿ ನೋವು ಮತ್ತು ಮುಖದ ಒಂದು ಪಾರ್ಶ್ವದಲ್ಲಿ ಊತ ಕಾಣಿಸಿಕೊಂಡಿದೆ. ಜತೆಗೆ ಕೋವಿಡ್‌ನ ಲಕ್ಷಣಗಳಾದ ಜ್ವರ, ಶೀತ, ಕೆಮ್ಮು, ಉಸಿರಾಟ ಸಮಸ್ಯೆ ಸಹ ಕಾಣಿಸಿಕೊಂಡಿದೆ.

ADVERTISEMENT

ಇದರಿಂದ ಗಾಬರಿಯಾದ ಕುಟುಂಬ ಸದಸ್ಯರು ಸೋಂಕಿತರನ್ನು ಜಾಲಪ್ಪ ಆಸ್ಪತ್ರೆಗೆ ಕರೆತಂದು ಪರೀಕ್ಷೆ ಮಾಡಿಸಿದಾಗ ಬ್ಲ್ಯಾಕ್‌ ಫಂಗಸ್‌ ಸೋಂಕು ತಗುಲಿರುವುದು ಖಚಿತವಾಗಿದೆ. 12 ಮಂದಿಯಲ್ಲಿ 7 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆಗೆ ಹಣ ಹೊಂದಿಸಿಕೊಂಡು ಬರುವುದಾಗಿ ಹೇಳಿ ಹೋಗಿದ್ದ ಉಳಿದ 5 ಮಂದಿ ಮತ್ತೆ ಆಸ್ಪತ್ರೆಯತ್ತ ಬಂದಿಲ್ಲ.

ಆಸ್ಪತ್ರೆಗೆ ದಾಖಲಾಗಿರುವ 7 ಸೋಂಕಿತರಲ್ಲಿ 4 ಮಂದಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಉಳಿದ ಮೂವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಶಸ್ತ್ರಚಿಕಿತ್ಸೆ ಮಾಡಿದರೂ ಅವರು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳಿದ್ದಾರೆ.

ಚುಚ್ಚುಮದ್ದಿನ ಕೊರತೆ: ಶಿಲೀಂದ್ರ ಸೋಂಕಿತರ ಚಿಕಿತ್ಸೆಗೆ ಲಿಪೋಸೋಮಲ್‌ ಆಂಫೊಟೆರಿಸಿನ್‌ ಬಿ ಚುಚ್ಚುಮದ್ದಿನ ಅಗತ್ಯವಿದೆ. ಜಿಲ್ಲೆಯಲ್ಲಿ ಈ ಚುಚ್ಚುಮದ್ದಿನ ಕೊರತೆ ಎದುರಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ದೇಹ ಸ್ಥಿತಿ ಬಿಗಡಾಯಿಸುತ್ತಿದೆ. ಕುಟುಂಬ ಸದಸ್ಯರು ಜಿಲ್ಲೆಯ ಜತೆಗೆ ಬೆಂಗಳೂರಿನ ಔಷಧ ಮಾರಾಟ ಮಳಿಗೆಗಳಿಗೆ ಅಲೆದರೂ ಚುಚ್ಚುಮದ್ದು ಸಿಗುತ್ತಿಲ್ಲ.

‘ಕೋವಿಡ್‌ನಿಂದ ಕುಟುಂಬದ ಮಂದಿಗೆ ಈಗ ಬ್ಲ್ಯಾಕ್‌ ಫಂಗಸ್‌ ಸೋಂಕು ತಗುಲಿದೆ. ಲಿಪೋಸೋಮಲ್‌ ಆಂಫೊಟೆರಿಸಿನ್‌ ಬಿ ಚುಚ್ಚುಮದ್ದಿನ ಕೊರತೆಯ ಕಾರಣಕ್ಕೆ ವೈದ್ಯರು ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಕಾಯಿಲೆ ಶತ್ರುಗಳಿಗೂ ಬರಬಾರದು’ ಎಂದು ಸೋಂಕಿತರ ಕುಟುಂಬ ಸದಸ್ಯರು ಕಣ್ಣೀರಿಟ್ಟರು.

ಸೋಂಕಿಗೆ ಕಾರಣ: ಕೋವಿಡ್‌ ಚಿಕಿತ್ಸೆ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಸ್ಟಿರಾಯ್ಡ್‌ ಪಡೆದವರಲ್ಲಿ ಮತ್ತು ಉಸಿರಾಟಕ್ಕಾಗಿ ವೆಂಟಿಲೇಟರ್‌ ಸಂಪರ್ಕದಲ್ಲಿದ್ದ ಕೊರೊನಾ ಸೋಂಕಿತರಲ್ಲಿ ಮಾತ್ರ ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಆದರೆ, ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ ನಂತರ ವೈಯಕ್ತಿಕ ಸ್ವಚ್ಛತೆ ಮತ್ತು ಆರೋಗ್ಯ ನಿರ್ಲಕ್ಷಿಸುತ್ತಿರುವುದು ಶಿಲೀಂಧ್ರ ಸೋಂಕು ತಗುಲಲು ಕಾರಣಗಳೆಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಸೋಂಕಿತರು ಚಿಕಿತ್ಸೆ ವೇಳೆ ಏಳೆಂಟು ದಿನಗಳ ಕಾಲ ಒಂದೇ ಮಾಸ್ಕ್ ಬಳಸುವುದು ಸಾಮಾನ್ಯವಾಗಿದೆ. ಆ ಸಂದರ್ಭದಲ್ಲಿ ಉಂಟಾಗುವ ತೇವಾಂಶದಿಂದ ವೈರಾಣು ಉತ್ಪತ್ತಿಯಾಗಿ ಸೋಂಕಿತರು ಉಸಿರಾಡಿದಾಗ ಸುಲಭವಾಗಿ ಶ್ವಾಸಕೋಶ ತಲುಪಿ ಬ್ಲ್ಯಾಕ್‌ ಫಂಗಸ್ ಆಗಿ ರೂಪಾಂತರ ಹೊಂದುತ್ತವೆ ಎಂದು ವೈದ್ಯರು ಹೇಳುತ್ತಾರೆ.

ನಲ್ಲಿ ನೀರು ಬಳಕೆ: ಸೋಂಕಿತರಿಗೆ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್‌ ಮೂಲಕ ವೈದ್ಯಕೀಯ ಆಮ್ಲಜನಕ ಕೊಡುವಾಗ ಕಾನ್ಸೆನ್‌ಟ್ರೇಟರ್‌ಗೆ ಡಿಸ್ಟಿಲ್ಡ್‌ ವಾಟರ್‌ ಬಳಸಬೇಕು. ಆದರೆ, ವೈದ್ಯಕೀಯ ಸಿಬ್ಬಂದಿಯು ಆಮ್ಲಜನಕದ ಕಾನ್ಸೆನ್‌ಟ್ರೇಟರ್‌ಗೆ ನಲ್ಲಿ ನೀರು ಬಳಸುವುದು ಶಿಲೀಂಧ್ರ ಸೋಂಕು ಹರಡುವಿಕೆಗೆ ದಾರಿ ಮಾಡಿ ಕೊಡುತ್ತಿದೆ ಎಂದು ತಜ್ಞರು ವಿವರಿಸಿದ್ದಾರೆ.

ವೈದ್ಯಕೀಯ ಕ್ಷೇತ್ರಕ್ಕೆ ಹೊಸ ಸವಾಲು ಎಂಬಂತೆ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯದವರಲ್ಲೂ ಬ್ಲ್ಯಾಕ್‌ ಫಂಗಸ್‌ ಸೋಂಕಿನ ಲಕ್ಷಣ ಗೋಚರಿಸುತ್ತಿರುವುದು ಆತಂಕ ಹುಟ್ಟಿಸಿದೆ. ಕೋವಿಡ್‌ ಚಿಕಿತ್ಸೆ ಪಡೆಯದ ಶಂಕಿತರಿಗೆ ಸಿ.ಟಿ ಸ್ಕ್ಯಾನ್‌ ಮತ್ತು ಟಿಷ್ಯೂ ಬಯಾಪ್ಸಿ (ಮೂಗಿನಿಂದ ತೆಗೆದ ಸ್ರಾವವನ್ನು ಮೈಕ್ರೋಸ್ಕೋಪ್‌ ಉಪಕರಣದಲ್ಲಿ ಪರೀಕ್ಷಿಸುವ ವಿಧಾನ) ಪರೀಕ್ಷೆ ಮಾಡಿದಾಗ ಕೆಲವರಲ್ಲಿ ಬ್ಲ್ಯಾಕ್‌ ಫಂಗಸ್ ಪತ್ತೆಯಾಗಿದೆ. ಹೀಗಾಗಿ ಶಿಲೀಂಧ್ರ ಸೋಂಕಿನ ಮೂಲ ನಿಗೂಢವಾಗಿಯೇ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.