ADVERTISEMENT

ಅನುದಾನಕ್ಕೆ ತಡೆ: 27ಕ್ಕೆ ಕೋಲಾರ ಬಂದ್‌

ರಸ್ತೆಗಳ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ ಹಣ: ಬಿಜೆಪಿ ವಿರುದ್ಧ ಕಿಡಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 14:23 IST
Last Updated 25 ಸೆಪ್ಟೆಂಬರ್ 2019, 14:23 IST

ಕೋಲಾರ: ‘ನಗರದ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನವನ್ನು ತಡೆ ಹಿಡಿದಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಸೆ.27ರಂದು ಕೋಲಾರ ಬಂದ್‌ಗೆ ಕರೆ ನೀಡಲಾಗಿದೆ’ ಎಂದು ನಗರಸಭೆ ಮಾಜಿ ಸದಸ್ಯ ಗಾಂಧಿನಗರ ನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬಿಜೆಪಿ ಸರ್ಕಾರ ರಾಜಕೀಯ ಕಾರಣಕ್ಕೆ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಇದನ್ನು ವಿವಿಧ ಪ್ರಗತಿಪರ ಸಂಘಟನೆಗಳು ಬಂದ್‌ಗೆ ಕರೆ ಕೊಟ್ಟಿದ್ದು, ಸಾರ್ವಜನಿಕರು ಪಕ್ಷಾತೀತವಾಗಿ ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು.

‘ಕೋಲಾರ ಜಿಲ್ಲಾ ಕೇಂದ್ರವಾಗಿದ್ದರೂ ಹೋಬಳಿ ಕೇಂದ್ರಗಿಂತ ಕಡೆಯಾಗಿದೆ. ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಹಿಂದಿನ ಮೈತ್ರಿ ಸರ್ಕಾರ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಅನುದಾನ ನೀಡಿತ್ತು. ಆದರೆ, ಬಿಜೆಪಿ ಸರ್ಕಾರ ನೆರೆ ಪರಿಹಾರದ ನೆಪದಲ್ಲಿ ಅನುದಾನ ವಾಪಸ್ ಪಡೆದಿದೆ’ ಎಂದು ದೂರಿದರು.

ADVERTISEMENT

‘ನಗರದ ಜನಸಂಖ್ಯೆ ಸುಮಾರು 2 ಲಕ್ಷವಿದ್ದು, ಯಾವ ರಸ್ತೆಯೂ ಸಮರ್ಪಕವಾಗಿಲ್ಲ. ಮಳೆ ಬಂದರೆ ರಸ್ತೆಗಳು ಕೆಸರು ಗದ್ದೆಯಂತಾಗುತ್ತವೆ. ಯುಜಿಡಿ ಹಾಗೂ ಚರಂಡಿಯ ಕೊಳಚೆ ನೀರು, ಮಲಮೂತ್ರ ರಸ್ತೆ ಮೇಲೆ ಹರಿಯುತ್ತದೆ. ಗುಂಡಿಮಯ ರಸ್ತೆಯಲ್ಲಿ ಪ್ರತಿನಿತ್ಯ ಅಪಘಾತ ಸಂಭವಿಸುತ್ತಿವೆ’ ಎಂದು ಹೇಳಿದರು.

‘ನಗರದಲ್ಲಿ ರಸ್ತೆಗಳ ಅವ್ಯವಸ್ಥೆ ಖಂಡಿಸಿ ಈ ಹಿಂದೆ ಬಂದ್‌ಗೆ ಕರೆ ನೀಡಲಾಗಿತ್ತು. ಆಗ ಜಿಲ್ಲಾಧಿಕಾರಿಯು 2 ತಿಂಗಳಲ್ಲಿ ರಸ್ತೆ ದುರಸ್ತಿ ಮಾಡಿಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ, ಅವರ ಭರವಸೆ ಹುಸಿಯಾಗಿದೆ. ಹೀಗಾಗಿ ಈಗ ಬಂದ್‌ಗೆ ಕರೆ ಕೊಟ್ಟಿದ್ದೇವೆ’ ಎಂದು ಶಾಶ್ವತ ನೀರಾವರಿ ಹೋರಾಟ ವೇದಿಕೆ ಸಂಚಾಲಕ ವೆಂಕಟೇಶ್ ತಿಳಿಸಿದರು.

ದ್ರೋಹ ಬಗೆದಿದೆ: ‘ನೆರೆ ಸಂತ್ರಸ್ತರ ಕಷ್ಟಕ್ಕೆ ಜಿಲ್ಲೆಯ ಜನರೂ ಸ್ಪಂದಿಸಿದ್ದಾರೆ. ಜಿಲ್ಲೆಯು ಸತತ 15 ವರ್ಷದಿಂದ ಬರ ಪರಿಸ್ಥಿತಿ ಎದುರಿಸುತ್ತಿದೆ. ಆಗ ಯಾವುದೇ ಸರ್ಕಾರಗಳು ಕೋಲಾರ ಜಿಲ್ಲೆಗೆ ವಿಶೇಷ ಅನುದಾನ ಬಿಡುಗಡೆ ಮಾಡಿಲ್ಲ. ಬಿಜೆಪಿ ಸರ್ಕಾರ ಜಿಲ್ಲಾ ಕೇಂದ್ರದ ರಸ್ತೆಗಳ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ ಅನುದಾನ ವಾಪಸ್ ಪಡೆದು ಕೋಲಾರಕ್ಕೆ ದ್ರೋಹ ಬಗೆದಿದೆ’ ಎಂದು ಕಿಡಿಕಾರಿದರು.

ವಿವಿಧ ಸಂಘಟನೆಗಳ ಮುಖಂಡರಾದ ಶ್ರೀನಿವಾಸ್, ನಳಿನಿಗೌಡ, ನಾಗರಾಜ್, ರಾಜೇಶ್, ರಾಮುಶಿವಣ್ಣ, ನವೀನ್, ಬಾಷಾ, ಪುಟ್ಟರಾಜು, ಶ್ರೀರಾಮ್, ವೆಂಕಟೇಶ್, ತ್ಯಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.