ADVERTISEMENT

ರಕ್ತದಾನ, ಅಂಗಾಂಗ ದಾನ ನೋಂದಣಿ ಇಂದು

300 ಹಾಸಿಗೆ ವ್ಯವಸ್ಥೆ: ಸಿದ್ಧತೆ ಪರಿಶೀಲಿಸಿದ ಸಂಸದ ಮುನಿಸ್ವಾಮಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 5:12 IST
Last Updated 2 ಅಕ್ಟೋಬರ್ 2022, 5:12 IST
ಕೋಲಾರದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ರಕ್ತದಾನ ಶಿಬಿರದ ಸಿಧ್ಧತೆಯನ್ನು ಸಂಸದ ಎಸ್.ಮುನಿಸ್ವಾಮಿ ಶನಿವಾರ ಪರಿಶೀಲಿಸಿದರು
ಕೋಲಾರದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ರಕ್ತದಾನ ಶಿಬಿರದ ಸಿಧ್ಧತೆಯನ್ನು ಸಂಸದ ಎಸ್.ಮುನಿಸ್ವಾಮಿ ಶನಿವಾರ ಪರಿಶೀಲಿಸಿದರು   

ಕೋಲಾರ: ಗಾಂಧಿ ಜಯಂತಿ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಮೋದಿ @ 2022 ಅಭಿಯಾನದಡಿ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ರಕ್ತದಾನ ಬೃಹತ್‌ ಶಿಬಿರ ಹಾಗೂ ಅಂಗಾಂಗ ದಾನ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳ
ಲಾಗಿದೆ.

ಬೆಳಗ್ಗೆ 8 ಗಂಟೆಗೆ ಕಾರ್ಯಕ್ರಮ ಆರಂಭಗೊಂಡು ಸಂಜೆ 6ಕ್ಕೆ ಮುಕ್ತಾಯಗೊಳ್ಳಲಿದೆ. ಈ ನಿಟ್ಟಿನಲ್ಲಿ ಸಂಸದ ಎಸ್.ಮುನಿಸ್ವಾಮಿ ಶನಿವಾರ ಭೇಟಿ ನೀಡಿ ಸಿದ್ಧತೆ ಪರಿಶೀಲನೆ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಸೆ.17 ರಿಂದ ಅ.2 ರವರೆಗೆ ಸೇವಾ ಸಪ್ತಾಹದಡಿ ನಾನಾ ಸೇವಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸಚಿವರಾದ ಮುನಿರತ್ನ, ಡಾ.ಕೆ. ಸುಧಾಕರ್, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸಂಸದ ತೇಜಸ್ವಿ ಸೂರ್ಯ ಬರಲಿದ್ದಾರೆ. ವಿದ್ಯಾರ್ಥಿಗಳು, ಯುವಕರು, ಸರ್ಕಾರಿ ನೌಕರರು, ಕೋಲಾರ, ನರಸಾಪುರ, ಮಾಲೂರು ಕೈಗಾರಿಕಾ ಪ್ರದೇಶಗಳ ಸಾವಿರಾರು ಕಾರ್ಮಿಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬಂದಿದ್ದಾರೆ’ ಎಂದರು.

ADVERTISEMENT

‘ಸಾವಿರಾರು ಮಂದಿ ಪಾಲ್ಗೊಂಡು ದಾಖಲೆಯ ಮಟ್ಟದಲ್ಲಿ ರಕ್ತದಾನ ಮಾಡುವ ನಿರೀಕ್ಷೆ ಇದೆ. ಮನುಷ್ಯ ಸತ್ತ ಮೇಲೆ ಮಣ್ಣಾಗುತ್ತಾನೆ. ಕೆಲವರನ್ನು ಸುಡುತ್ತಾರೆ. ಆಗ ದೇಹ ವ್ಯರ್ಥವಾಗಲಿದ್ದು, ಅದಕ್ಕೆ ಅವಕಾಶ ನೀಡದೆ ಬೇರೆಯವರಿಗೆ ಅನುಕೂಲವಾಗುವಂತೆ ಅಂಗಾಂಗ ದಾನ ಮಾಡುವುದು ಸೂಕ್ತ. ಈ ನಿಟ್ಟಿನಲ್ಲಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು
ತಿಳಿಸಿದರು.

‘ಜಿಲ್ಲೆಗೆ ಪ್ರತಿ ತಿಂಗಳು 1,200 ಯುನಿಟ್ ರಕ್ತ ಅವಶ್ಯವಿರುವ ಬಗ್ಗೆ ಮಾಹಿತಿಯಿದೆ. ಕಾರ್ಯಕ್ರಮಕ್ಕೆ ಬರುವ ರಕ್ತದಾನಿಗಳ ಹೆಸರು, ಮೊಬೈಲ್ ಸಂಖ್ಯೆ ನೋಂದಣಿ ಮಾಡಿಕೊಂಡು ಅಗತ್ಯವಿದ್ದಾಗ ಕರೆ ಮಾಡಲಾಗುವುದು. ಅಲ್ಲದೆ, ಜನರಿಗೆ ರಕ್ತದಾನ, ಅಂಗಾಂಗ ದಾನದ ಬಗ್ಗೆಯೂ ಜಾಗೃತಿ ಮೂಡಿಸಲಾಗುವುದು. ವಿವಿಧ ಇಲಾಖೆಗಳಿಂದ ಸೌಲಭ್ಯಗಳ ಬಗ್ಗೆ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಖಾದಿ ಉತ್ಸವವೂ ನಡೆಯಲಿದೆ’ ಎಂದು ಹೇಳಿದರು.

‘ಒಳಾಂಗಣ ಕ್ರೀಡಾಂಗಣದಲ್ಲಿ 200 ಹಾಸಿಗೆ, ಜೂನಿಯರ್ ಕಾಲೇಜಿನ ನೂತನ ಕಟ್ಟಡದ ಕೊಠಡಿಗಳಲ್ಲಿ 100 ಹಾಸಿಗೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣ ಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್, ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ, ಯುವಜನ ಸೇವಾ ಇಲಾಖೆ ಅಧಿಕಾರಿ ಶಶಿಕಲಾ, ಪಿಎಸ್‍ಐ ಅಣ್ಣಯ್ಯ, ಕೆಯುಡಿಎ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ಬಿಜೆಪಿ ವೆಂಕಟೇಶ್, ಮಮತಾ
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.