ADVERTISEMENT

ಸಂವಿಧಾನ ಬದಲಿಸಿದರೆ ರಕ್ತಪಾತ

ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 15:49 IST
Last Updated 28 ಡಿಸೆಂಬರ್ 2019, 15:49 IST
ಕೋಲಾರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ 134ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಗಾಂಧೀಜಿ ಪ್ರತಿಮೆಗೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮಾಲಾರ್ಪಣೆ ಮಾಡಿದರು.
ಕೋಲಾರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ 134ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಗಾಂಧೀಜಿ ಪ್ರತಿಮೆಗೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮಾಲಾರ್ಪಣೆ ಮಾಡಿದರು.   

ಕೋಲಾರ: ‘ಸಂವಿಧಾನ ಬದಲಿಸಲು ಯತ್ನಿಸಿದರೆ ದೇಶದಲ್ಲಿ ರಕ್ತಪಾತವಾಗುತ್ತದೆ’ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಎಚ್ಚರಿಕೆ ನೀಡಿದರು.

ನಗರದ ಗಾಂಧಿವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ 134ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ‘ದೇಶ ಸಂವಿಧಾನವನ್ನು ಬದಲಾಯಿಸಲು ಬಿಜೆಪಿ ಯತ್ನಿಸುತ್ತಿದೆ. ಇದರ ವಿರುದ್ಧ ವ್ಯಾಪಕ ಹೋರಾಟಗಳು ನಡೆಯುತ್ತಿದ್ದರು, ಅದೇ ಪ್ರಯತ್ನದಲ್ಲಿದ್ದಾರೆ’ ಎಂದರು.

‘ದೇಶದ ಪ್ರಧಾನಿ ಸಂವಿಧಾನಕ್ಕೆ ಕೈಮುಗಿಯುತ್ತಾರೆ. ಆದರೆ ಬಿಜೆಪಿ ನಾಯಕರು ಸಂವಿಧಾನಕ್ಕೆ ಅವಮಾನ ಮಾಡುವ ಜತೆಗೆ ಬದಲಾವಣೆ ಮಾಡಲು ಮುಂದಾಗಿದ್ದಾರೆ. ‘ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಶಾಂತಿ ಕದಡುವ ಕೆಲಸಗಳನ್ನು ಎಂದೂ ಮಾಡಿಲ್ಲ. ಆದರೆ ಬಿಜೆಪಿ ಕೋಮು ವಿಷ ಬೀಜಗಳನ್ನು ಬಿತ್ತುವ ಮೂಲಕ ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಬ್ರಿಟಿಷ್‌ರ ವಿರುದ್ದ ಹೋರಾಟಗಳನ್ನು ನಡೆಸಿಕೊಂಡು ಬಂದಿರುವ ದಾಖಲೆಗಳು ಇವೆ. ಆದರೆ ಬಿಜೆಪಿ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರುವ ದಾಖಲೆಗಳು ಎಲ್ಲೂ ಇಲ್ಲ’ ಎಂದರು.

‘ಲೋಕಸಭಾ ಸಭಾ ಚುನಾವಣೆ ನಂತರ ಐದು ರಾಜ್ಯಗಳಲ್ಲಿ ಬಿಜೆಪಿ ನೆಲಕಚ್ಚಿದೆ. ಇದರಿಂದ ಬಿಜೆಪಿ ಅಧಿಕಾರದಲ್ಲಿ ಇದ್ದರೆ ದೇಶಕ್ಕೆ ಉಳಿಗಾಲವಿಲ್ಲ ಎಂಬ ಆಲೋಚನೆ ಜನರಲ್ಲಿ ಬಂದಿದ್ದು, ಬಿಜೆಪಿಯವರ ಆಟ ನಡೆಯಲು ಬಿಡಬಾರದು’ ಎಂದು ಸಲಹೆ ನೀಡಿದರು.

ಶಾಸಕ ಕೆ.ವೈ ನಂಜೇಗೌಡ ಮಾತನಾಡಿ, ‘ಬಿಜೆಪಿ ನಾಯಕರು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನವನ್ನು ಗಾಳಿಗೆ ತೂರಿ ಧರ್ಮಗಳ ಮಧ್ಯೆ ಕೋಮು ಬೀಜ ಬಿತ್ತುತ್ತಿದ್ದಾರೆ’ ಎಂದು ದೂರಿದರು.

‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಜನರ, ಕಾರ್ಮಿಕರ, ರೈತರ ಹಿತಕ್ಕಿಂತ ಪರ ದೇಶದ ಜನರ ಹಿತವೇ ಮುಖ್ಯವಾಗಿದೆ. ಅವರ ಅಧಿಕಾರವನ್ನು ಗಟ್ಟಿಗೊಳಿಸಿಕೊಳ್ಳಲು ಕಾನೂನುಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ, ಇದರ ವಿರುದ್ಧ ಹೋರಾಟ ರೂಪಿಸಬೇಕಾದ ಅನಿವಾರ್ಯ ಎದುರಾಗಿದೆ’ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ‘ದೇಶದಲ್ಲಿ ಮೋದಿ ಸರ್ಕಾರ ಹೊಡೆದು ಆಳುವ ನೀತಿಗಳನ್ನು ಅನುಸರಿತ್ತಿದೆ. ಇದರಿಂದ ದೇಶವನ್ನು ಮುನ್ನಡೆಸಲು ಸಾಧ್ಯವಾಗುವುದಿಲ್ಲ. ಅದರಿಂದಲೇ ಮನಮೋಹನ್ ಸಿಂಗ್ ಅಧಿಕಾರ ಅವಧಿಯಲ್ಲಿ ಶೇ.೮ರಷ್ಟು ಇದ್ದ ಜಿಡಿಪಿ ಶೇ.4ಕ್ಕೆ ಕುಸಿದಿದ್ದು, ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ತಿಳಿಸಿದರು.

ರಾಜ್ಯ ಮಾವು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಎಲ್.ಎ. ಮಂಜುನಾಥ್, ಮುರಳೀಗೌಡ, ನಗರಸಭೆ ಸದಸ್ಯರಾದ ಬಿ.ಎಂ.ಮುಬಾರಕ್. ಪ್ರಸಾದ್ ಬಾಬು, ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಮಂಜುನಾಥ್, ನಗರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್, ವೇಮಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.