ADVERTISEMENT

ಸುಖಾಂತ್ಯ ಕಂಡ ಉಜಿರೆ ಬಾಲಕನ ಅಪಹರಣ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 4:02 IST
Last Updated 19 ಡಿಸೆಂಬರ್ 2020, 4:02 IST
ಅಪಹರಣಗೊಂಡಿದ್ದ ಬಾಲಕ ಅನುಭವ್‌
ಅಪಹರಣಗೊಂಡಿದ್ದ ಬಾಲಕ ಅನುಭವ್‌    

ಕೋಲಾರ: ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ಬಾಲಕ ಅನುಭವ್ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದ್ದು, ಪೊಲೀಸರು ಜಿಲ್ಲೆಯ ಮಾಲೂರು ತಾಲ್ಲೂಕಿನ ಕೊರ್ನಹೊಸಹಳ್ಳಿಯಲ್ಲಿ ಶನಿವಾರ ನಸುಕಿನಲ್ಲಿಅಪಹರಣಕಾರರನ್ನು ಬಂಧಿಸಿದ್ದಾರೆ.

ಉಜಿರೆಯ ಉದ್ಯಮಿ ರಥಬೀದಿ ನಿವಾಸಿ ಬಿಜೋಯ್‌ ಅವರ ಮಗ 8 ವರ್ಷದ ಅನುಭವ್‌ ಗುರುವಾರ (ಡಿ.17) ಮನೆಯಂಗಳದಲ್ಲಿ ಆಟವಾಡುತ್ತಿದ್ದ ವೇಳೆ ದುಷ್ಕರ್ಮಿಗಳು ಕಾರಿನಲ್ಲಿ ಬಂದು ಆತನನ್ನು ಅಪಹರಿಸಿದ್ದರು.

ಬಳಿಕ ಬಾಲಕನ ಪೋಷಕರಿಗೆ ಕರೆ ಮಾಡಿ ಬಿಟ್ ಕಾಯಿನ್ ರೂಪದಲ್ಲಿ ₹ 17 ಕೋಟಿ ಕೊಡುವಂತೆ ಬೆದರಿಕೆ ಹಾಕಿದ್ದರು. ಈ ಸಂಬಂಧ ಬಾಲಕನ ಅಜ್ಜ ಎ.ಕೆ.ಶಿವನ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಆರೋಪಿಗಳ ಪತ್ತೆಗೆ 4 ವಿಶೇಷ ಪೊಲೀಸ್‌ ತಂಡ ರಚಿಸಲಾಗಿತ್ತು.

ADVERTISEMENT

ಅಪಹರಣಕಾರರು ಬಾಲಕನನ್ನು ಹಾಸನ, ಬೆಂಗಳೂರು ಸೇರಿದಂತೆ ವಿವಿಧೆಡೆ ಸುತ್ತಾಡಿಸಿದ್ದರು. ಪೊಲೀಸರ ತಂಡವು ಆರೋಪಿಗಳ ಮೊಬೈಲ್‌ ಕರೆ ಮಾಹಿತಿ ಆಧರಿಸಿ ಅವರನ್ನು ಬೆನ್ನಟ್ಟಿತ್ತು. ಅಪಹರಣಕಾರರು ಶುಕ್ರವಾರ ತಡರಾತ್ರಿ ಮಾಲೂರು ತಾಲ್ಲೂಕಿನ ಕೊರ್ನಹೊಸಹಳ್ಳಿಯ ಸ್ನೇಹಿತ ಮಂಜುನಾಥ್‌ ಮನೆಗೆ ಬಂದು ಆಶ್ರಯ ಪಡೆದಿದ್ದರು. ಈ ಬಗ್ಗೆ ಉಜಿರೆ ಪೊಲೀಸರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಅವರಿಗೆ ಮಾಹಿತಿ ನೀಡಿ ಆರೋಪಿಗಳ ಬಂಧನಕ್ಕೆ ನೆರವು ಕೋರಿದ್ದರು.

ಎಸ್ಪಿ ಕಾರ್ತಿಕ್‌ರೆಡ್ಡಿ ನೇತೃತ್ವದಲ್ಲಿ ಶನಿವಾರ ಬೆಳಗಿನ ಜಾವ ಜಂಟಿ ಕಾರ್ಯಾಚರಣೆ ನಡೆಸಿದ ಉಜಿರೆ ಮತ್ತು ಮಾಲೂರಿನ ಮಾಸ್ತಿ ಠಾಣೆ ಪೊಲೀಸರು ಆರೋಪಿಗಳಿರುವ ಮನೆ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಾಲಕ ಅನುಭವ್‌ ಸುರಕ್ಷಿತವಾಗಿ ಪೊಲೀಸರ ಕೈಸೇರಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.

ಮಂಡ್ಯ ಜಿಲ್ಲೆಯ ಗಂಗಾಧರ್‌, ಬೆಂಗಳೂರಿನ ಎಲೆಕ್ಟ್ರಾನಿಕ್‌ಸಿಟಿಯ ಕೋಮಲ್‌, ಕೊರ್ನಹೊಸಹಳ್ಳಿಯ ಮಂಜುನಾಥ್‌ ಸೇರಿದಂತೆ 4 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಿ ಉಜಿರೆಗೆ ಕರೆದೊಯ್ಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.