ADVERTISEMENT

ಜನಸ್ಪಂದನ ಸಭೆಯಲ್ಲಿ ಬಿಪಿಎಲ್‌ ಕಾರ್ಡ್‌ ರದ್ದತಿ ಸದ್ದು

ಕಂದಾಯ ಅಧಿಕಾರಿಗಳಿಗೆ ಬೆವರಿಳಿಸಿದ ಶಾಸಕಿ ರೂಪಕಲಾ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 5:21 IST
Last Updated 25 ನವೆಂಬರ್ 2025, 5:21 IST
ಕೆಜಿಎಫ್‌ ರಾಬರ್ಟಸನ್‌ಪೇಟೆ ನಗರಸಭೆಯಲ್ಲಿ ಸೋಮವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕಿ ಎಂ.ರೂಪಕಲಾ ಸಾರ್ವಜನಿಕರ ಸಮಸ್ಯೆ ಆಲಿಸಿದರು. ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು
ಕೆಜಿಎಫ್‌ ರಾಬರ್ಟಸನ್‌ಪೇಟೆ ನಗರಸಭೆಯಲ್ಲಿ ಸೋಮವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕಿ ಎಂ.ರೂಪಕಲಾ ಸಾರ್ವಜನಿಕರ ಸಮಸ್ಯೆ ಆಲಿಸಿದರು. ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು   

ಕೆಜಿಎಫ್‌: ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ ಕಾರ್ಡ್‌ಗಳನ್ನಾಗಿ ಪರಿವರ್ತನೆ, ತಾಲ್ಲೂಕು ಕಚೇರಿಯಲ್ಲಿ ದಲ್ಲಾಳಿ ಹಾವಳಿ, ನಗರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕುರಿತು ಸೋಮವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು.

ನಗರಸಭೆ ಆವರಣದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ನೆರೆದಿದ ಬಹುತೇಕ ಮಂದಿ ತಮಗೆ ಅರಿವಿಲ್ಲದಂತೆಯೇ ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ ಕಾರ್ಡ್‌ಗಳನ್ನಾಗಿ ಪರಿವರ್ತನೆ ಮಾಡಲಾಗಿದ್ದು, ಸೌಲಭ್ಯದಿಂದ ವಂಚಿಸಲಾಗಿದೆ. ಹಾಗಾಗಿ ಪುನಃ ನಮಗೆ ಬಿಪಿಎಲ್‌ ಕಾರ್ಡ್‌ ಕೊಡಿಸಿ ಎಂದು ಶಾಸಕಿ ರೂಪಕಲಾ ಅವರಿಗೆ ದುಂಬಾಲು ಬಿದ್ದರು.

ವಾರ್ಷಿಕ ₹1.20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಆದಾಯವಿದ್ದರೆ ಅವರ ಬಿಪಿಎಲ್ ಕಾರ್ಡ್‌ ರದ್ದಾಗುತ್ತದೆ. ಈ ಬಗ್ಗೆ ಆಹಾರ ಇಲಾಖೆಯವರು ಫಲಾನುಭವಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಮನೆಯಲ್ಲಿ ಒಬ್ಬರಿಗೆ ಆದಾಯ ಇದ್ದರೆ, ಉಳಿದ ಎಲ್ಲಾ ಕುಟುಂಬದ ಸದಸ್ಯರನ್ನು ಬಿಪಿಎಲ್‌ ಪರಿಧಿಯಿಂದ ಹೊರತೆಗೆಯಲು ಆಗದಂತೆ ಮಾರ್ಗೋಪಾಯ ಸೂಚಿಸಬೇಕು. ಯಾವುದೇ ದಾಖಲೆ ಇಲ್ಲದ ಏಕಸದಸ್ಯ ಕುಟುಂಬದವರಿಗೆ ಸೌಲಭ್ಯಗಳೇ ಸಿಗುತ್ತಿಲ್ಲ. ಅವರ ಬಳಿ ಆಧಾರ್, ರೇಷನ್‌ ಕಾರ್ಡ್‌ ಇರುವುದಿಲ್ಲ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳಿಗೆ ಶಾಸಕಿ ರೂಪಕಲಾ ಸೂಚಿಸಿದರು.

ADVERTISEMENT

‘ಗಂಡ ಮೃತಪಟ್ಟು ಮೂರು ವರ್ಷವಾಯಿತು. ವಿಧವಾ ವೇತನ, ಜಾತಿ ಪ್ರಮಾಣ ಪತ್ರ ಸೇರಿದಂತೆ ಯಾವುದೇ ದಾಖಲೆಗಳನ್ನು ನೀಡಲು ಕಂದಾಯ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಎರಡು ವರ್ಷದಿಂದ ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸುತ್ತಿದರೂ ಪ್ರಯೋಜನವಾಗಲಿಲ್ಲʼ ಎಂದು ಮಹಿಳೆಯೊಬ್ವರು ಕಣ್ಣೀರಿಟ್ಟರು. ಕುಪಿತಗೊಂಡ ಶಾಸಕಿ ರೂಪಕಲಾ ಗ್ರಾಮಲೆಕ್ಕಿಗ ವಿನೀತ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮ ಕಂದಾಯ ಇಲಾಖೆಗೆ ನಾಚಿಕೆ, ಮಾನ, ಮರ್ಯಾದೆ ಇದ್ದರೆ, ದಾಖಲೆಗಳನ್ನು ಹೆಣ್ಣು ಮಗುವಿನ ಮನೆಗೆ ತಲುಪಿಸಿ’ ಎಂದರು.

ನಗರಸಭೆ ಮಾಜಿ ಸದಸ್ಯ ಅಮುಲ್‌ದಾಸ್‌ ಮಾತನಾಡಿ, ‘ಬೇತಮಂಗಲ ಜಲಾಶಯ ಕೋಡಿ ಹೋಗುತ್ತಿದೆ. ಆದರೆ ಮೈನಿಂಗ್‌ ಜನರಿಗೆ ಕುಡಿಯುವ ನೀರು ಇಲ್ಲ. ಆಸ್ಪತ್ರೆಯಲ್ಲಿ ಔಷಧಿಗಳಿಲ್ಲ. ಬಡ ಜನತೆ ಏನು ಮಾಡಬೇಕುʼ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗಾಂಧಿನಗರದಲ್ಲಿ ಬೀದಿ ದೀಪಗಳು ಇಲ್ಲ. ಸ್ಮಶಾನಕ್ಕೆ ಹೋಗುವ ದಾರಿ ಅವ್ಯವಸ್ಥೆಯಿಂದ ಕೂಡಿದೆ. ಚರಂಡಿ ಸ್ವಚ್ಛವಿಲ್ಲ ಎಂದು ಗಾಂಧಿನಗರ ನಿವಾಸಿಗಳು ದೂರು ಸಲ್ಲಿಸಿದರು. ಬಹುತೇಕ ವಾರ್ಡ್‌ಗಳಲ್ಲಿ ಸ್ವಚ್ಛತೆ ಮತ್ತು ಬೀದಿ ದೀಪಗಳ ಬಗ್ಗೆ ಜನತೆ ದೂರು ಸಲ್ಲಿಸಿದರು. ರಾತ್ರಿ ಹೊತ್ತು ಬೀದಿಗಳಲ್ಲಿ ಕುಡುಕರ ಹಾವಳಿ ಜಾಸ್ತಿಯಾಗಿದೆ ಎಂದು ದೂರಿದರು.

‘ಕೆಜಿಎಫ್‌ ನಗರಾಭಿವೃದ್ಧಿ ಪ್ರಾಧಿಕಾರ ಈಗ ಇಬ್ಭಾಗವಾಗಿದೆ. ಬಂಗಾರಪೇಟೆಗೆ ಪ್ರತ್ಯೇಕ ಪ್ರಾಧಿಕಾರವಾಗಿದೆ. ಭೂಪರಿವರ್ತನೆ ಮಾಡಿಕೊಳ್ಳಬಯಸುವವರು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಬಡಾವಣೆಗಳನ್ನು ನಿರ್ಮಿಸುವವರು ಕೂಡ ಅರ್ಜಿ ಸಲ್ಲಿಸಬಹುದು. ಸಾರ್ವಜನಿಕರು ಪ್ರಾಧಿಕಾರದ ಅನುಮತಿ ಇಲ್ಲದೆ ಕಟ್ಟಡ ಕಟ್ಟಬಾರದು. ಮುಂದಿನ ದಿನಗಳಲ್ಲಿ ಅನಧಿಕೃತ ಕಟ್ಟಡಗಳಿಂದ ತೊಂದರೆ ಎದುರಿಸಬೇಕಾಗುತ್ತದೆʼ ಎಂದು ಪ್ರಾಧಿಕಾರದ ಆಯುಕ್ತ ಧರ್ಮೇಂದ್ರ ಮಾಹಿತಿ ನೀಡಿದರು.

ಗೃಹಲಕ್ಷ್ಮಿ ಯೋಜನೆಯಲ್ಲಿ 47,865 ಫಲಾನುಭವಿಗಳಿದ್ದಾರೆ. ಅವರಿಗೆ ಆಗಸ್ಟ್‌ ತಿಂಗಳಿಂದ ಬರಬೇಕಾದ ಹಣ ಒಂದೆರಡು ದಿನಗಳಲ್ಲಿ ಬಿಡುಗಡೆಯಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಹಶೀಲ್ದಾರ್‌ ಎಚ್‌.ಜೆ.ಭರತ್‌, ನಗರಸಭೆ ಆಯುಕ್ತ ಆಂಜನೇಯಲು, ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.