ADVERTISEMENT

‘ಆರೋಗ್ಯಕರ ಸಮಾಜ ನಿರ್ಮಾಣ ಮಾಡಿ‘

ಗುಲಾಬಿ ಆಂದೋಲನದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಚಾರಿಣಿ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 16:10 IST
Last Updated 30 ಡಿಸೆಂಬರ್ 2020, 16:10 IST
ಕೋಲಾರದಲ್ಲಿ ಬುಧವಾರ ನಡೆದ ಗುಲಾಬಿ ಆಂದೋಲನದಲ್ಲಿ ಆಶಾ ಕಾರ್ಯಕರ್ತೆಯರು ತಂಬಾಕು ಉತ್ಪನ್ನಗಳ ದುಷ್ಪರಿಣಾಮದ ಮಾಹಿತಿಯುಳ್ಳ ಕರಪತ್ರಗಳ ಜತೆ ಜನರಿಗೆ ಗುಲಾಬಿ ಹೂವು ನೀಡಿದರು.
ಕೋಲಾರದಲ್ಲಿ ಬುಧವಾರ ನಡೆದ ಗುಲಾಬಿ ಆಂದೋಲನದಲ್ಲಿ ಆಶಾ ಕಾರ್ಯಕರ್ತೆಯರು ತಂಬಾಕು ಉತ್ಪನ್ನಗಳ ದುಷ್ಪರಿಣಾಮದ ಮಾಹಿತಿಯುಳ್ಳ ಕರಪತ್ರಗಳ ಜತೆ ಜನರಿಗೆ ಗುಲಾಬಿ ಹೂವು ನೀಡಿದರು.   

ಕೋಲಾರ: ‘ತಂಬಾಕು ಉತ್ಪನ್ನ ಸೇವನೆ ಚಟ ತ್ಯಜಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಎ.ಚಾರಿಣಿ ಕಿವಿಮಾತು ಹೇಳಿದರು.

ತಂಬಾಕು ಉತ್ಪನ್ನಗಳ ಸೇವೆನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಗುಲಾಬಿ ಆಂದೋಲನ’ದಲ್ಲಿ ಮಾತನಾಡಿದರು.

‘ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ. ಆದ ಕಾರಣ ಜನರು ತಂಬಾಕು ಉತ್ಪನ್ನಗಳ ಸೇವನೆಯ ಚಟಕ್ಕೆ ಬಲಿಯಾಗದೆ ಆರೋಗ್ಯಕರ ಜೀವನ ನಡೆಸಬೇಕು. ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಬೇಕು. ತಂಬಾಕು ಉತ್ಪನ್ನ ಸೇವನೆ ವ್ಯಸನಿಗಳ ಮನಪರಿವರ್ತನೆ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ತಂಬಾಕು ಉತ್ಪನ್ನ ಸೇವನೆಯು ಜೀವಕ್ಕೆ ಅಪಾಯವೆಂದು ತಿಳಿದಿದ್ದರೂ ಜನ ಅದರ ಚಟಕ್ಕೆ ಬಿದ್ದು ಹಾಳಾಗುತ್ತಿದ್ದಾರೆ. ತಂಬಾಕು ಉತ್ಪನ್ನಗಳ ಸೇವನೆಯಿಂದ 60 ರೀತಿಯ ಮಾರಕ ಕಾಯಿಲೆ ಮತ್ತು ಭಯಾನಕ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಂಭವವಿದೆ. ದೇಶದಲ್ಲಿ ಪ್ರತಿ ವರ್ಷ ಸುಮಾರು 10 ಲಕ್ಷ ಮಂದಿ ತಂಬಾಕು ಉತ್ಪನ್ನಗಳ ಸೇವನೆಯಿಂದ ಮೃತಪಡುತ್ತಿದ್ದಾರೆ’ ಎಂದು ವಿವರಿಸಿದರು.

‘ದುಶ್ಚಟಗಳು ಕುಟುಂಬದ ಮೇಲೆ ದುಷ್ಪರಿಣಾಮ ಬೀರುತ್ತವೆ. ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ದೊಡ್ಡದು. ಪ್ರತಿ ವ್ಯಕ್ತಿಯು ಆರೋಗ್ಯ ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು. ಹಂತ ಹಂತವಾಗಿ ತಂಬಾಕು ಸೇವನೆ ಕಡಿಮೆ ಮಾಡಿ ಸದೃಢ ಸಮಾಜ ನಿರ್ಮಾಣ ಮಾಡಬೇಕು’ ಎಂದು ತಿಳಿಸಿದರು.

ಆತಂಕಕಾರಿ: ‘ತಂಬಾಕು ಬೆಳೆಯುವ ಮತ್ತು ತಂಬಾಕು ಉತ್ಪನ್ನ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ. 18 ವರ್ಷದಿಂದ 25 ವರ್ಷದೊಳಗಿನ ಯುವಕ ಯುವತಿಯರು ತಂಬಾಕು ಉತ್ಪನ್ನಗಳಿಗೆ ಆಕರ್ಷಿತರಾಗಿ ತಪ್ಪು ದಾರಿ ಹಿಡಿಯುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ತಂಬಾಕು ಉತ್ಪನ್ನಗಳ ಬಳಕೆ ಯೂರೋಪ್ ದೇಶದಿಂದ ಆರಂಭವಾಗಿ, 2ನೇ ಶತಮಾನದಿಂದ ಭಾರತ ದೇಶದಲ್ಲೂ ಬಳಕೆ ಆರಂಭವಾಯಿತು. ತಂಬಾಕು ಉತ್ಪನ್ನಗಳಲ್ಲಿನ ಅಪಾಯಕಾರಿ ನಿಕೋಟಿನ್ ಅಂಶವು ದೇಹದ ರಕ್ತನಾಳದಲ್ಲಿನ ಜೀವಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಹೃದಯದ ಜತೆಗೆ ಅಂಗಾಂಗಳಿಗೆ ಅಪಾಯ ಉಂಟು ಮಾಡುತ್ತದೆ’ ಎಂದು ಮಾಹಿತಿ ನೀಡಿದರು.

‘ದೇಶದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಹಾಗೂ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ (ಕೋಟ್ಪಾ) ಜಾರಿಗೊಳಿಸಲಾಗಿದೆ. ಈ ಕಾಯ್ದೆಯಡಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಜಾಹೀರಾತು ಪ್ರದರ್ಶನ ನಿಷೇಧಿಸಲಾಗಿದೆ’ ಎಂದರು.

ಉದ್ದೇಶ: ‘ಜಿಲ್ಲೆಯಲ್ಲಿ ಕೋಟ್ಪಾ ಕಾಯ್ದೆ ಕಟ್ಪುನಿಟ್ಟಾಗಿ ಜಾರಿ ಮಾಡುವ ಉದ್ದೇಶಕ್ಕೆ ವಿನೂತನ ರೀತಿಯ ಗುಲಾಬಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಈ ಕಾಯ್ದೆ ಉಲ್ಲಂಘಿಸದಂತೆ ಮತ್ತು ತಂಬಾಕು ಉತ್ಪನ್ನಗಳನ್ನು ಸೇವಿಸದಂತೆ ಸಾರ್ವಜನಿಕರಿಗೆ ಕರಪತ್ರದ ಜತೆ ಗುಲಾಬಿ ಹೂವು ಕೊಟ್ಟು ಸೌಜನ್ಯಯುತವಾಗಿ ಮತ್ತು ಸ್ನೇಹಪರವಾಗಿ ಜಾಗೃತಿ ಮೂಡಿಸುವುದು ಈ ಆಂದೋಲನದ ಉದ್ದೇಶ’ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗೀತಾ, ಆಹಾರ ಸುರಕ್ಷತಾ ಅಧಿಕಾರಿ ಶ್ರೀನಿಧಿ, ಆಶಾ ಕಾರ್ಯಕರ್ತೆಯರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.